ನಂದಿ ಕೇಬಲ್‌ ಕಾರು– ‘ಅರಣ್ಯ’ ತಕರಾರು!

7
ಪ್ರವಾಸೋದ್ಯಮ ಇಲಾಖೆ

ನಂದಿ ಕೇಬಲ್‌ ಕಾರು– ‘ಅರಣ್ಯ’ ತಕರಾರು!

Published:
Updated:
Deccan Herald

ಬೆಂಗಳೂರು: ನಂದಿಬೆಟ್ಟಕ್ಕೆ ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ‘ಕೇಬಲ್‌ ಕಾರ್‌’ ಸೇವೆ ಆರಂಭಿಸುವ ಪ್ರವಾಸೋದ್ಯಮ ಇಲಾಖೆಯ ಯೋಜನೆಗೆ ಅರಣ್ಯ ಭೂಮಿಯ ತಕರಾರು ಎದುರಾಗಿದೆ.

ಅರಣ್ಯ ಇಲಾಖೆಯ ಜಾಗದಲ್ಲಿ ಕೇಬಲ್‌ ಕಾರ್‌ ಹಾದುಹೋಗಬೇಕಿದೆ. ಹಾಗಾಗಿ, ಯೋಜನೆಯ ಬಗ್ಗೆ ಮರುಚಿಂತನೆ ಮಾಡಲು ಇಲಾಖೆ ಮುಂದಾಗಿದೆ.

‘ಯೋಜನೆಯ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿದ್ದೇವೆ. ಕಂದಾಯ ಇಲಾಖೆಯ ಭೂಮಿಯಲ್ಲಿ ಕೇಬಲ್‌ ಕಾರ್‌ ಇಳಿಯಲಿದೆ. ಆದರೆ, ಅದು ಹಾದು ಹೋಗುವ ಮಾರ್ಗ ಅರಣ್ಯ ಇಲಾಖೆಗೆ ಸೇರಿದ್ದು. ಇದು ಸಮಸ್ಯೆಯಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿತ್ರನಟ ಶಂಕರ್‌ನಾಗ್‌ 80ರ ದಶಕದಲ್ಲಿ ನಂದಿ ಬೆಟ್ಟಕ್ಕೆ ರೋಪ್‌ವೇ ಅಳವಡಿಸುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ್ದರು. ಅವರ ನಿಧನದ ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2015–16ರ ಬಜೆಟ್‌ನಲ್ಲಿ ಈ ಯೋಜನೆ ಪ್ರಕಟಿಸಿದ್ದರು. ಬಳಿಕ, ಬೆಟ್ಟಕ್ಕೆ ‘ಕೇಬಲ್ ಕಾರ್’ ಸೇವೆ ಆರಂಭಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿತ್ತು.

ಈ ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕ ಮೌಲ್ಯಮಾಪನ ನಡೆಸಲು ಇಲಾಖೆ ಟೆಂಡರ್‌ ಆಹ್ವಾನಿಸಿ, ಮರು ಚಾಲನೆ ನೀಡಿತ್ತು.  2017ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಟೆಂಡರ್ ಕರೆದಾಗ ಒಂದು ಸಂಸ್ಥೆ ಮಾತ್ರ ಭಾಗವಹಿಸಿತ್ತು. ತಾಂತ್ರಿಕ ಬಿಡ್‌ನಲ್ಲಿ ತೇರ್ಗಡೆ ಆಗದ ಕಾರಣ ಟೆಂಡರ್‌ ತಿರಸ್ಕರಿಸಲಾಗಿತ್ತು. ಎರಡನೇ ಬಾರಿ ಟೆಂಡರ್‌ ಕರೆದಾಗಲೂ ಅದೇ ಸಮಸ್ಯೆ ಮರುಕಳಿಸಿತ್ತು. ಮೂರನೇ ಟೆಂಡರ್ ಸಹ ಫಲಪ್ರದವಾಗಿರಲಿಲ್ಲ.

ಯೋಜನೆಯ ಸಾಧ್ಯಾಸಾಧ್ಯತೆಯ ಅಧ್ಯಯನ ನಡೆಸಲು ಇಲಾಖೆ ನಿರ್ಧರಿಸಿದೆ. ‘ಅಧ್ಯಯನ ನಡೆಸಲು ಐಡೆಕ್‌ (ಮೂಲಸೌಕರ್ಯ ಅಭಿವೃದ್ಧಿ ನಿಗಮ) ಜತೆಗೆ ಸಮಾಲೋಚನೆ ನಡೆಸಿದ್ದೇವೆ. ಯೋಜನೆಗೆ ಎಷ್ಟು ಅರಣ್ಯ ಭೂಮಿ ಬೇಕಾಗುತ್ತದೆ ಎಂಬುದನ್ನು ಆಧರಿಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದರು.

‘ಮಧುಗಿರಿ ಬೆಟ್ಟ, ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳಲ್ಲಿ ಕೇಬಲ್‌ ಕಾರ್‌ ಯೋಜನೆಯ ಬಗ್ಗೆಯೂ ಸಾಧ್ಯಾಸಾಧ್ಯತಾ ವರದಿ ಸಿದ್ಧಪಡಿಸಲಿದ್ದೇವೆ. ಯೋಜನೆ ಕುರಿತು ಸೆಪ್ಟೆಂಬರ್‌ ತಿಂಗಳಲ್ಲಿ ಸ್ಪಷ್ಟತೆ ಸಿಗಲಿದೆ’ ಎಂದರು.

ಈ ಯೋಜನೆಗೆ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ–ನಿರ್ವಹಣೆ–ಹಸ್ತಾಂತರ (ಬಿಒಟಿ) ಮಾದರಿ ಅನುಸರಿಸಲು ಇಲಾಖೆ ಯೋಜಿಸಿದೆ. ‘ವಿಶಾಖಪಟ್ಟಣದಲ್ಲಿ ಕೇಬಲ್‌ ಕಾರ್‌ ಯೋಜನೆ ಯಶಸ್ವಿಯಾಗಿದೆ. ಅಲ್ಲಿ ಬಿಒಟಿ ಮಾದರಿ ಅನುಸರಿಸಲಾಗಿತ್ತು. ಸರ್ಕಾರ ಈ ಯೋಜನೆಗೆ ಅಲ್ಪ ಪ್ರಮಾಣದ ಹೂಡಿಕೆ ಮಾಡಲಿದೆ’ ಎಂದು ಹೇಳಿದರು.

ಪ್ರಯೋಜನಗಳೇನು?

* ಕೇಬಲ್‌ ಕಾರ್‌ ಬಳಕೆಯಿಂದ ಬೆಟ್ಟಕ್ಕೆ ಸಾಗುವ ರಸ್ತೆಯಲ್ಲಿ ವಾಹನ ದಟ್ಟಣೆ ತಗ್ಗಿಸಬಹುದು 

* ಬೆಟ್ಟ ಏರುವುದು ಸುಲಭವಾಗಲಿದೆ

* ಕೇಬಲ್‌ ಕಾರ್‌ ಪ್ರಯಾಣ ರೋಮಾಂಚಕ ಅನುಭವ ನೀಡಲಿದೆ

* ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲಿದೆ

ಪ್ರವಾಸಿತಾಣ ಅಭಿವೃದ್ಧಿಗೆ ಕ್ರಿಯಾಯೋಜನೆ

ನಂದಿಬೆಟ್ಟ, ಬೇಲೂರು–ಹಳೆಬೀಡು, ಶ್ರವಣಬೆಳಗೋಳ, ಹಂಪಿ, ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಅಭಿವೃದ್ಧಿಗೆ ಇಲಾಖೆ ಕ್ರಿಯಾಯೋಜನೆ ಸಿದ್ಧಪಡಿಸುತ್ತಿದೆ.

‘ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಸಂಸ್ಥೆಗೂ (ಕೆಟಿಐಎಲ್‌) ಹೊಸ ರೂಪ ನೀಡಲು ಉದ್ದೇಶಿಸಿದ್ದೇವೆ. ಎಂಜಿನಿಯರಿಂಗ್‌, ಪರಂಪರೆ, ವಾಸ್ತುವಿನ್ಯಾಸ ಸೇರಿದಂತೆ ವಿವಿಧ ಕ್ಷೇತ್ರಗಳ 19 ತಜ್ಞರನ್ನು ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಸೇರಿಸಿದ್ದೇವೆ. ಯೋಜನೆ ಸಿದ್ಧಪಡಿಸಲು ಅವರು ನೆರವಾಗಲಿದ್ದಾರೆ’ ಎಂದು ಅನಿಲ್‌ ಕುಮಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !