ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆಯು ಮಾಯಾಜಿಂಕೆ ಇದ್ದ ಹಾಗೆ: ಕವಯತ್ರಿ ಎಚ್‌.ಎಲ್‌.ಪುಷ್ಪಾ

‘ರತಿಯ ಕಂಬನಿ’ ಕವನ ಸಂಕಲನ ಬಿಡುಗಡೆ
Last Updated 19 ಸೆಪ್ಟೆಂಬರ್ 2021, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಕವಿತೆಯು ಮಾಯಾಜಿಂಕೆ ಇದ್ದಂತೆ. ಇದು ಬರಹಗಾರರನ್ನು ಬಹುವಾಗಿ ಕಾಡುವ ಪ್ರಕಾರ. ಆಕರ್ಷಕ ಮಾಧ್ಯಮ ಕೂಡ’ ಎಂದು ಕವಯತ್ರಿ ಎಚ್‌.ಎಲ್‌.ಪುಷ್ಪಾ ಅಭಿಪ್ರಾಯಪಟ್ಟರು.

ನಂದಿನಿ ಹೆದ್ದುರ್ಗ ಅವರ ‘ರತಿಯ ಕಂಬನಿ’ ಕವನ ಸಂಕಲನ ಬಿಡುಗಡೆ ಮಾಡಿ ಭಾನುವಾರ ಅವರು ಮಾತನಾಡಿದರು.

‘ಕನ್ನಡ ಕಾವ್ಯದಲ್ಲಿ ಮೊದಲ ತಲೆಮಾರಿನ ಕವಯತ್ರಿಯರು ಕಾಮದ ಕುರಿತು ಮುಕ್ತವಾಗಿ ಬರೆದರು. ಅದೇ ಸಮಯದಲ್ಲಿ ಪಿ.ಲಂಕೇಶ್‌, ಚನ್ನಯ್ಯ ಸೇರಿದಂತೆ ಅನೇಕರು ಕಾಮದ ರೂಪಕಗಳನ್ನು ಬಳಸಿದಾಗ ಅದು ಹೊಸ ಪ್ರಕಾರ ಎಂದು ಕರೆಸಿಕೊಂಡಿತ್ತು. ಅದನ್ನೇ ಮಹಿಳೆಯರು ಬರೆದಾಗ ಅವರಿಗೇ ಹೋಲಿಸುವ ಸ್ವೇಚ್ಛೆ ಎಂಬ ರೀತಿಯಲ್ಲಿ ನೋಡಲಾಗುತ್ತಿತ್ತು. ಅದೆಲ್ಲವನ್ನೂ ಮೀರಿ ಮಹಿಳಾ ಕಾವ್ಯ ಮುಂದುವರಿದಿದೆ. ಮೊದಲ ತಲೆಮಾರಿನಲ್ಲಿ ಬಂದ ತೀವ್ರವಾದ ‍ಪ್ರಯೋಗಗಳು, ಎರಡನೇ ತಲೆಮಾರಿನಲ್ಲಿ ಕಡಿಮೆಯಾದವು. ಈಗ ಮತ್ತೆ ಕೆಲವರು ಇಂತಹ ಪ‍್ರಯೋಗಗಳನ್ನು ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ನಂದಿನಿ ಅವರ ಕಾವ್ಯ ನಿಲ್ಲುತ್ತದೆ’ ಎಂದರು.

‘ನೆಲದಲ್ಲಿ ನಿಂತು ಮುಗಿಲನ್ನು ಹಿಡಿಯುವುದರಲ್ಲಿ ಮಹಿಳೆ ಎಷ್ಟರ ಮಟ್ಟಿಗೆ ಸಾಫಲ್ಯ ಕಾಣುತ್ತಾಳೆ. ಬಿಡುವ ಮತ್ತು ಕಟ್ಟಿಕೊಳ್ಳುವ ನಡುವೆ ಆಕೆ ಬದುಕುವ ಅನಿವಾರ್ಯವನ್ನು ಈ ಕೃತಿಯ ಕವಿತೆಗಳು ಕಟ್ಟಿಕೊಡುತ್ತವೆ. ಇದು ನಾಯಕಿ ಪ್ರಧಾನ ಕವಿತೆಗಳ ಗುಚ್ಛ’ ಎಂದು ತಿಳಿಸಿದರು.

‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ.ಹನೀಫ್‌, ‘ನಂದಿನಿ ಅವರ ಕವನ ಸಂಕಲನದ ಉದ್ದಕ್ಕೂ ಅಗೋಚರ ಪ್ರೇಮಿಯೊಬ್ಬ ಇದ್ದಾನೆ. ಇಲ್ಲಿ ಶಿವ, ಬುದ್ಧ, ರಾಮ ಹಾಗೂ ಇತರ ಪುರಾಣ ಪುಣ್ಯ ಪುರುಷರ ಜೊತೆ ಕವಯತ್ರಿ ಜಗಳವಾಡುತ್ತಾ ಹೋಗುತ್ತಾರೆ. ಸ್ತ್ರಿಲೋಕಕ್ಕೆ ಮಾತ್ರ ದಕ್ಕಬಹುದಾದ ಪ್ರತಿಮೆಗಳನ್ನು ಬಳಸಲಾಗಿದೆ. ಈ ಪ್ರತಿಮೆಗಳ ಸೊಬಗು ವಿಶಿಷ್ಟವಾದುದು’ ಎಂದು ಹೇಳಿದರು.

‘ಕವಯತ್ರಿ ಉಪಮೆ ಹಾಗೂ ರೂಪಕಗಳನ್ನು ಪುಂಖಾನುಪುಂಖವಾಗಿ ಬಳಸಿ ಓದುಗರನ್ನು ಅನೂಹ್ಯವಾದ ಕಾವ್ಯ ಕೋಟೆಯೊಳಗೆ ಹುದುಗಿಸಿಬಿಡುತ್ತಾರೆ. ಪುಸ್ತಕದಲ್ಲಿರುವ ಹಲವು ಕವನಗಳಲ್ಲಿ ಚಿತ್ರಕ ಶಕ್ತಿಯೂ ಅಡಕವಾಗಿದೆ’ ಎಂದರು.

ಕವಯತ್ರಿ ನಂದಿನಿ ಹೆದ್ದುರ್ಗ, ‘ಕವಿತೆ ಹೊಮ್ಮಿಸುವ ರಸಕ್ಕಾಗಿ, ಕವಿತೆಯ ಪದಗಳ ನಡುವೆ ಹೊಮ್ಮುವ ಮೌನಕ್ಕಾಗಿ ಕವಿತೆಗಳನ್ನು ಪ್ರೀತಿಸುವವಳು ನಾನು. ಕವಿತೆಯೊಳಗೆ ದೈವಿಕ ಸ್ವರೂಪವಿದೆ ಎಂದೂ ನಂಬಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT