ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಅಂಗಳಕ್ಕೆ ಕಾರು ಸಜ್ಜು!

‘ನಾಸಾ’ ವಿಜ್ಞಾನಿ ಆ್ಯನ್‌ ಡೆವೆರೊ ಹೇಳಿಕೆ
Last Updated 4 ಅಕ್ಟೋಬರ್ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ಭೂಮಿಯಂತೆಯೇ ಹೋಲುವ ಮಂಗಳ ಗ್ರಹದಲ್ಲಿ ಈಗಾಗಲೇ ‘ಕ್ಯೂರಿಯಾಸಿಟಿ’ ವ್ಯೋಮನೌಕೆ ಕುತೂಹಲದಿಂದ ಅಂಬೆಗಾಲಿಡುತ್ತ ಹುಡುಕಾಟ ನಡೆಸುತ್ತಿದೆ.

ಈ ಹುಡುಕಾಟಕ್ಕೆಒಂದಿಷ್ಟು ವೇಗ ಪಡೆಯುವ ಸಲುವಾಗಿ ಕಾರೊಂದು ಸಜ್ಜಾಗುತ್ತಿದೆ ಎಂದು ಅಮೆರಿಕದ ‘ನಾಸಾ’ ವಿಜ್ಞಾನಿ ಹಾಗೂ ಜೆಟ್‌ ಪ್ರೊಪುಲೆಷನ್‌ ಲ್ಯಾಬರೇಟರಿಯ ಸ್ಪೇಸ್‌ಕ್ರಾಫ್ಟ್‌ ಸಿಸ್ಟಮ್‌ ಎಂಜಿನಿಯರಿಂಗ್‌ನ ಮ್ಯಾನೇಜರ್‌ ಆ್ಯನ್‌ ಡೆವೆರೊಹೇಳಿದರು.

ಚೆನ್ನೈನ ಅಮೆರಿಕ ದೂತಾವಾಸ ವತಿಯಿಂದ ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಇಲ್ಲಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತಸಂಗ್ರಹಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಮಂಗಳನಲ್ಲಿ ಸೂಕ್ಷ್ಮ ಜೀವಿಗಳಿವೆಯೇ ಎಂಬ ಕುತೂಹಲ ಇದೆ. ಕಾರು ಮಾದರಿಯ ದೊಡ್ಡ ವ್ಯೋಮನೌಕೆ ‘ಕ್ಯೂರಿಯಾಸಿಟಿ ಬಿಗ್‌ ಸಿಸ್ಟರ್‌‘ ಮಂಗಳನ ಅಂಗಳದಲ್ಲಿ ಶೋಧನೆಗಳನ್ನು ನಡೆಸಲಿದೆ ಎಂದು ಹೇಳಿದರು.

‘ಚಂದ್ರಯಾನ–2 ಭಾರತ ಮಾತ್ರವಲ್ಲ, ಜಗತ್ತಿನ ದೊಡ್ಡ ಸಾಧನೆ. ಚಂದ್ರಯಾನ–1ರಲ್ಲಿ ಚಂದ್ರನಲ್ಲಿ ನೀರಿನ ಅಂಶ ಇರುವುದು ಗೊತ್ತಾಗಿತ್ತು. ಮಾನವ ನಿರ್ಮಿತ ವ್ಯೋಮನೌಕೆಯೊಂದು ಅನ್ಯ ಗ್ರಹದಲ್ಲಿ ಇಳಿಯುತ್ತದೆ ಎಂದಾದರೆ ಅದು ಇಡೀ ಮನುಕುಲಕ್ಕೇ ಸಂಬಂಧಪಟ್ಟ ವಿಷಯವಾಗುತ್ತದೆ. ಹೀಗಾಗಿ ಅಮೆರಿಕವೂ ಭಾರತದ ಸಾಧನೆಯನ್ನು ಹೆಮ್ಮೆಯಿಂದಲೇ ನೋಡಿದೆ’ ಎಂದರು.

‌“ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಅದು ಅಮೆರಿಕದ ಅತ್ಯುತ್ತಮ ಸಹಭಾಗಿ. ಇತ್ತೀಚಿನ ಚಂದ್ರಯಾನ-2 ಭಾರತೀಯ ವಿಜ್ಞಾನಿಗಳಿಗೆ ಕಲಿಕೆಗೆ ಉತ್ತಮ ವೇದಿಕೆ ಒದಗಿಸಿದೆ. ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿದು ಹೋದುದಕ್ಕೆ ಅಂತಹ ಮಹತ್ವ ಕೊಡುವ ಅಗತ್ಯ ಇಲ್ಲ’ ಎಂದರು.

ಅಮೆರಿಕದ ವಿದೇಶಾಂಗ ಇಲಾಖೆ ‘ಸ್ಪೀಕರ್ ಪ್ರೋಗ್ರಾಂ’ ಅಂಗವಾಗಿ ಭಾರತಕ್ಕೆ ಭೇಟಿ ನೀಡಿದ್ದ ಆ್ಯನ್‌ಡಿವೆರೊ, ಕೋಲ್ಕತ್ತ, ಅಹಮದಾಬಾದ್‌, ನವದೆಹಲಿ ಬಳಿಕ ನಗರಕ್ಕೆ ಬಂದಿದ್ದರು. ನಗರದ ಎಂ.ಎಸ್‌. ರಾಮಯ್ಯ ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು, ಸಂಶೋಧಕರೊಂದಿಗೂ ಮಾತುಕತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT