ಶನಿವಾರ, ಸೆಪ್ಟೆಂಬರ್ 18, 2021
27 °C
ಪರಿಷತ್‌ ಸದಸ್ಯರ ಜತೆ ಶಿಕ್ಷಣ ನೀತಿ ಚರ್ಚೆ

ಸವಾಲು ಎದುರಿಸದೇ ಪರಿವರ್ತನೆ ಅಸಾಧ್ಯ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವುದರ ಜತೆಗೆ, ಬಹು ಶಿಸ್ತೀಯ ಕಲಿಕೆ ಮತ್ತು ಕಲಿಕೆಯ ಆಯ್ಕೆಗೆ ಮುಕ್ತ ಸ್ವಾತಂತ್ರ್ಯ ನೀಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ಇದರಿಂದ ಹೆಜ್ಜೆ ಹಿಂದಕ್ಕೆ ಇಟ್ಟರೆ ಅಥವಾ ಹೊಸ ಸವಾಲುಗಳನ್ನು ಎದುರಿಸದೇ ಇದ್ದರೆ, ಪರಿವರ್ತನೆ ಸಾಧ್ಯವಿಲ್ಲ ಎಂದು ಅವರು
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ವಿಧಾನಪರಿಷತ್‌ನ ಪದವೀಧರ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಪ್ರತಿನಿಧಿಸುವ ಸದಸ್ಯರ ಸಭೆಯ ಬಳಿಕ ಅವರು ಮಾತನಾಡಿದರು. 

‘ಸವಾಲುಗಳಿವೆ, ಕಷ್ಟವಿದೆ ಎಂದು ಈಗ ಹೆಜ್ಜೆ ಹಿಂದಕ್ಕೆ ಇಟ್ಟರೆ ಮುಂದೆಂದೂ ಜಾರಿ ಮಾಡುವುದು ಕಷ್ಟವಾಗುತ್ತದೆ. ಜ್ಞಾನ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ ನೀತಿಯನ್ನು ಜಾರಿ ಮಾಡುವುದು ರಾಜ್ಯದ ಪಾಲಿಗೆ ನಿರ್ಣಾಯಕ ಅಂಶ. ಬೋಧಕರು ಮತ್ತು ಇತರೆ ಸಿಬ್ಬಂದಿಯ ತರಬೇತಿಯ ಬಗ್ಗೆ ಕ್ರಮ ವಹಿಸಲಾಗುವುದು. ಮೂಲಸೌಕರ್ಯಗಳನ್ನು ಹೆಚ್ಚಿಸುವ ಸಂಬಂಧ ಹಂತ ಹಂತವಾಗಿ ಕೆಲಸ ಮಾಡಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿಯವರ ಜತೆ ಚರ್ಚಿಸುತ್ತೇನೆ’ ಎಂದು ಅವರು ಹೇಳಿದರು.

‘ಈಗಿರುವ ಅಧ್ಯಾಪಕ ವರ್ಗ ಶಿಕ್ಷಣ ನೀತಿ ಪ್ರಕಾರವೇ ಬೋಧನೆ ಮಾಡುತ್ತಾರಾ? ಕೆಲವರಿಗೆ ಕಂಪ್ಯೂಟರ್‌ ಜ್ಞಾನವೇ ಇರುವುದಿಲ್ಲ. ಅವರನ್ನು ಸಜ್ಜುಗೊಳಿಸುವುದು ಮತ್ತು ತರಬೇತಿ ನೀಡುವುದು ಹೇಗೆ’ ಎಂದು ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸಭೆಯಲ್ಲಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಚಿವರು, ಪ್ರತಿ ಹಂತದಲ್ಲೂ ಬೋಧಕರಿಗೆ ವ್ಯವಸ್ಥಿತವಾಗಿ ತರಬೇತಿ ನೀಡಲಾಗುವುದು. ತಾಂತ್ರಿಕ ನೆರವು, ಅಧ್ಯಯನ ಸಾಮಗ್ರಿ ಸೇರಿದಂತೆ ಎಲ್ಲ ವಿಷಯಗಳಲ್ಲೂ ಸಹಕಾರ ನೀಡಲಾಗುವುದು ಎಂದರು.

ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯವಿಲ್ಲ, ಸೌಲಭ್ಯಗಳನ್ನು ನೀಡಿಲ್ಲ, ಪ್ರಯೋಗಾಲಯಗಳೂ ಇಲ್ಲ. ಸೂಕ್ತ ವ್ಯವಸ್ಥೆ ಇಲ್ಲದೇ ಏಕಾಏಕಿ ರಾಷ್ಟ್ರೀಯ ನೀತಿ ಜಾರಿ ಮಾಡುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು