ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಸದಸ್ಯತ್ವ ಮಾಡಿಸಿದರೆ ಹುದ್ದೆ: ಡಿ.ಕೆ. ಶಿವಕುಮಾರ್‌

ಎನ್‌ಎಸ್‌ಯುಐ ರಾಜ್ಯ ಘಟಕದ ಪದಾಧಿಕಾರಿಗಳ ಪದಗ್ರಹಣ
Last Updated 31 ಆಗಸ್ಟ್ 2021, 23:19 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷಕ್ಕೆ ಸಾವಿರ ಸದಸ್ಯತ್ವ ಮಾಡಿಸಿದರೆ ನಾನು ನಿಮಗೆ ಪದಾಧಿಕಾರಿ ಹುದ್ದೆ ನೀಡುತ್ತೇನೆ. ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ವಿದ್ಯಾರ್ಥಿಗಳು ಸಮಸ್ಯೆಯ ಧ್ವನಿ ಆಗಬೇಕು’ ಎಂದು ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐ ಕಾರ್ಯಕರ್ತರನ್ನು ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಮಂಗಳವಾರ ನಡೆದ ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷಕ್ಕೆ ನೀವು ಕೊಡುಗೆ ನೀಡಬೇಕೆಂಬ ಇಚ್ಛೆ ಇದ್ದರೆ, ನಾಯಕರಾಗಬೇಕಾದರೆ ಸದಸ್ಯತ್ವ ಮಾಡಿಸಬೇಕು. ಸದಸ್ಯತ್ವ ಮಾಡಿಸಿದರೆ ನಾಯಕರಾಗಿ ಬೆಳೆಯಲು ಸಾಧ್ಯ’ ಎಂದರು.

‘ಎನ್‌ಎಸ್‌ಯುಐ ನಮ್ಮ ಬೇರು. ಮುಂದೆ ಫಲ ಅನುಭವಿಸಬೇಕು ಎಂದರೆ ನಮ್ಮ ಬೇರು ಗಟ್ಟಿಗೊಳಿಸಬೇಕು. ನೀವು ಮೊದಲು ಕನಸು ಕಾಣಬೇಕು. ಆ ಕನಸನ್ನು ಇಷ್ಟಪಡಬೇಕು. ಅದನ್ನು ಸಾಕಾರಗೊಳಿಸಲು ನಿರ್ಧರಿಸಬೇಕು. ಜತೆಗೆ, ಶಿಸ್ತು ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಪಕ್ಷದ ಭಿತ್ತಿಪತ್ರಗಳಲ್ಲಿ ಯಾರ ಪೋಟೊ ಇರಬೇಕು, ಇರಬಾರದು ಎಂಬ ನಿಯಮ ಸಿದ್ಧಪಡಿಸುತ್ತಿದ್ದೇವೆ. ನಿಮ್ಮ ಹೋರಾಟದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ ಬರಬೇಕು. ಅಂಥ ಹೋರಾಟಗಳನ್ನು ರೂಪಿಸಬೇಕು. ಆಗ ನೀವು ನಾಯಕರಾಗಲು ಸಾಧ್ಯ‘ ಎಂದೂ ಕಾರ್ಯಕರ್ತರಿಗೆ ತಿಳಿಹೇಳಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರೆ ಮೊದಲು ಈ ದೇಶ ಮಾರಾಟ ಆಗದಂತೆ ತಡೆಯಬೇಕು’ ಎಂದರು.

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿ ಸಮೂಹಕ್ಕೆ ದೇಶದ ಚರಿತ್ರೆಯನ್ನು ಅರ್ಥ ಮಾಡಿಸುತ್ತಲೇ ಸಂವಿಧಾನದ ಮಹತ್ವವನ್ನು ತಿಳಿಸಿ ಶಿಕ್ಷಣ, ಸಂಘಟನೆ, ಹೋರಾಟದ ಮಾರ್ಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಬಸವಣ್ಣನವರ ‘ಇವನಾರವ ಇವನಾರವ’ ವಚನದ ಸಾಲುಗಳನ್ನು ಹೇಳಿದ ಸಿದ್ದರಾಮಯ್ಯ, ಕುವೆಂಪು ಅವರ ವಿಚಾರಶೀಲರಾಗಿ ಎನ್ನುವ ಸಂದೇಶವನ್ನು ವಿದ್ಯಾರ್ಥಿ ಸಮೂಹಕ್ಕೆ ನೀಡುವ ಮೂಲಕ ಜಾಗೃತರಾಗುವಂತೆ ಕರೆ ನೀಡಿದರು.

‘ಡಿಕೆ... ಡಿಕೆ... ಡಿಕೆ...’
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಎದುರಿನಲ್ಲೇ ಡಿ.ಕೆ. ಶಿವಕುಮಾರ್ ಪರ ಬೆಂಬಲಿಗರು ಘೋಷಣೆ ಕೂಗಿದರು. ಶಿವಕುಮಾರ್‌ ಅವರ ಭಾವಚಿತ್ರಗಳನ್ನು ಹಿಡಿದು ಡಿಕೆ... ಡಿಕೆ... ಡಿಕೆ... ಎಂದು ಘೋಷಣೆ ಕೂಗಿದರು. ಬೆಂಬಲಿಗರ ವರ್ತನೆಯಿಂದ ಕೋಪಗೊಂಡ ಶಿವಕುಮಾರ್‌, ‘ನಿಮ್ಮನ್ನೆಲ್ಲ ಪಕ್ಷದಿಂದ ಉಚ್ಛಾಟನೆ ಮಾಡುತ್ತೇವೆ’ ಎಂದು ಗದರಿದರು. ‘ನಿಮಗೆ ಶಿಸ್ತು ಇಲ್ಲ. ನಿಮ್ಮನ್ನೆಲ್ಲ ಪಕ್ಷದಿಂದಲೇ ತೆಗೆಯುತ್ತೇನೆ. ಶಿಸ್ತು ಇರಬೇಕು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT