ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ನಗರೋತ್ಥಾನ: ರಸ್ತೆಗೇ ₹4,107 ಕೋಟಿ

ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ ರದ್ದು
Last Updated 18 ಸೆಪ್ಟೆಂಬರ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ’ಯನ್ನು ರದ್ದುಪಡಿಸಿರುವ ಬಿಜೆಪಿ ಸರ್ಕಾರ, ಪರ್ಯಾಯವಾಗಿ ‘ಮುಖ್ಯಮಂತ್ರಿಗಳ ನವ ನಗರೋತ್ಥಾನ’ ಎಂಬ ಹೆಸರಿನಲ್ಲಿ ಹೊಸ ಯೋಜನೆ ಆರಂಭಿಸಿದೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ₹8,015 ಕೋಟಿಯ ಯೋಜನೆಯ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು. ನಗರದ ರಸ್ತೆಗಳ ಅಭಿವೃದ್ಧಿಗೆ ₹4,107 ಕೋಟಿ ಮೀಸಲಿಡಲಾಗಿದೆ. ಮೈತ್ರಿ ಸರ್ಕಾರ ವೈಟ್‌ ಟಾಪಿಂಗ್‌ ಕಾಮಗಾರಿಗಳಿಗೆ ₹1,172 ಕೋಟಿ ಕಾಮಗಾರಿ ಮೀಸಲಿಟ್ಟಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೊಸದಾಗಿ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಂತೆ ನಿರ್ದೇಶನ ನೀಡಿದ್ದರು.

ಈ ಯೋಜನೆಯ ಅಂದಾಜುಪಟ್ಟಿಯನ್ನು ಪರಿಷ್ಕರಿಸಿ ಆಯ್ದ ಕೆಲವು ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳಲು ₹50 ಕೋಟಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮೈತ್ರಿ ಸರ್ಕಾರ ನವ ಬೆಂಗಳೂರು ಯೋಜನೆ ಘೋಷಣೆ ಮಾಡಿತ್ತು. ನಗರದ ಅಭಿವೃದ್ಧಿಗೆ ಮೂರು ವರ್ಷಗಳಲ್ಲಿ ₹8015 ಕೋಟಿ ವೆಚ್ಚ ಮಾಡಲು ಉದ್ದೇಶಿಸಿ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿತ್ತು. ಈ ಯೋಜನೆಯಲ್ಲಿ ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಸರಾಸರಿ ₹478.5 ಕೋಟಿ, ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸರಾಸರಿ ₹250 ಕೋಟಿ ಹಾಗೂ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸರಾಸರಿ ₹128 ಕೋಟಿ ಅನುದಾನ ಹಂಚಿಕೆ ಮಾಡಿತ್ತು.

‘ಕ್ಷೇತ್ರಗಳ ಮಧ್ಯೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿದೆ ಹಾಗೂ ನಗರಕ್ಕೆ ಅಗತ್ಯವಿಲ್ಲದ ದುಂದುವೆಚ್ಚದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಬಿಜೆಪಿ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರು ಸಲ್ಲಿಸಿದ್ದರು. ಅಲ್ಲದೆ, ತಮ್ಮ ಕ್ಷೇತ್ರಗಳ ಅಗತ್ಯ ಯೋಜನೆಗಳ ಪಟ್ಟಿ ಮಾಡಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರಿಯಾಯೋಜನೆ ಪರಿಷ್ಕರಣೆ ಮಾಡಲಾಗಿದೆ. ದಾಸರಹಳ್ಳಿ, ಬ್ಯಾಟರಾಯನಪುರ, ಸರ್ವಜ್ಞನಗರ, ಚಾಮರಾಜಪೇಟೆ, ಗಾಂಧಿನಗರ ಕ್ಷೇತ್ರಗಳ ಅನುದಾನ ಕಡಿತ ಮಾಡಿ ಬೊಮ್ಮನಹಳ್ಳಿ, ಯಲಹಂಕ, ಮಹದೇವ‍ಪುರ ಹಾಗೂ ನಾಲ್ವರು ಅನರ್ಹ ಶಾಸಕರ ಕ್ಷೇತ್ರಗಳಿಗೆ ಭರಪೂರ ಅನುದಾನ ನೀಡಲಾಗಿದೆ ಎಂದು ಗೊತ್ತಾಗಿದೆ.

ಹೊರವರ್ತುಲ ರಸ್ತೆ ಅಭಿವೃದ್ಧಿಗೆ ₹250 ಕೋಟಿ

ಹೊರವರ್ತುಲ ರಸ್ತೆಯ ಅಭಿವೃದ್ಧಿಗೆ ₹250 ಕೋಟಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇತ್ತೀಚೆಗೆ ನಡೆಸಿದ ನಗರ ಸಂಚಾರದ ವೇಳೆ ಹೊರ ವರ್ತುಲ ರಸ್ತೆ ಆಸುಪಾಸಿನ ಕಂಪನಿಗಳ ಸಂಘವು, ‘ಹೆಬ್ಬಾಳ, ಸಿಲ್ಕ್ ಬೋರ್ಡ್‌, ಟಿನ್ ಫ್ಯಾಕ್ಟರಿ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಇರುವ ಕಾರಣ ಸಾಫ್ಟ್‌ವೇರ್ ಕಂಪನಿಗಳ ಆದಾಯದಲ್ಲಿ ₹33 ಸಾವಿರ ಕೋಟಿ ನಷ್ಟವಾಗುತ್ತಿದೆ. ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿತ್ತು. ಈ ಸಮಸ್ಯೆ ಪರಿಹರಿಸಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು.

ವೈಟ್‌ ಟಾಪಿಂಗ್‌ ಅನುದಾನಕ್ಕೆ ಕತ್ತರಿ

ಯೋಜನೆಗೆ ಹೆಚ್ಚುವರಿಯಾಗಿ ₹328 ಕೋಟಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ.‌ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹಿಂದಿನ ಸರ್ಕಾರ ಈ ಯೋಜನೆಗೆ ₹8,015 ಕೋಟಿ ನಿಗದಿ ಮಾಡಿತ್ತು.ರಸ್ತೆ ನಿರ್ಮಾಣ, ಮಳೆ ನೀರು ಮೋರಿ, ಕಸ ವಿಲೇವಾರಿಗಳಂತಹ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಪರಿಣಾಮಕಾರಿಯಾಗಿ ಕೆಲಸ ಮಾಡಿ ತೋರಿಸುತ್ತೇವೆ’ ಎಂದರು.‘ಹಿಂದಿನ ಸರ್ಕಾರ ವೈಟ್‌ ಟಾಪಿಂಗ್‌ಗೆ ಅಧಿಕ ವೆಚ್ಚ ಮಾಡಿತ್ತು. ಅದನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು ಎಂಬುದನ್ನು ನಾವು ಸಾಬೀತು ಮಾಡಿ ತೋರಿಸುತ್ತೇವೆ. ಅದಕ್ಕಾಗಿ ₹50 ಕೋಟಿ ನಿಗದಿ ಮಾಡಿದ್ದೇವೆ. ₹5 ಕೋಟಿಯಿಂದ ₹6 ಕೋಟಿಯೊಳಗೆ ಪ್ರತಿ ಕಿ.ಮೀ ವೈಟ್‌ಟಾಪಿಂಗ್‌ ರಸ್ತೆ ಮಾಡಬಹುದಾಗಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT