ಭಾನುವಾರ, ಜನವರಿ 26, 2020
21 °C
ಅಂತರರಾಜ್ಯ ಮಾದಕ ವಸ್ತು ಜಾಲ ಪತ್ತೆ; ಮೂವರ ಬಂಧನ

ಸಂಜಯನಗರ: ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಡ್ರಗ್ಸ್‌ ಜಪ‍್ತಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:‌ ನಗರವನ್ನು ಕೇಂದ್ರವಾಗಿಸಿಕೊಂಡು ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸಿರುವ ರಾಷ್ಟ್ರೀಯ ಮಾದಕವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು, ಈ ಜಾಲದ ಮೂವರು ರೂವಾರಿಗಳನ್ನು ಬಂಧಿಸಿದ್ದಾರೆ.

ಸಂಜಯನಗರದಲ್ಲಿರುವ ಸರ್ವೀಸ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ ಮೇಲೆ ಜ. 7ರಂದು ದಾಳಿ ಮಾಡಿದ್ದ ಅಧಿಕಾರಿಗಳು, 1.02 ಕೆ.ಜಿ ಚರಸ್ ಹಾಗೂ 500 ಗ್ರಾಂ ಮೀಥೈಲೀನ್‌ಡಿಆಕ್ಸಿಮೆಥಾಂಫಿಟಮೈನ್‌ (ಎಂಡಿಎಂಎ) ಜಪ್ತಿ ಮಾಡಿದ್ದಾರೆ.

‘ಕರ್ನಾಟಕ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಮಾದಕವಸ್ತುವನ್ನು ಮಾರಾಟ ಮಾಡಲಾಗುತ್ತಿತ್ತು. ಆಯಾ ರಾಜ್ಯಗಳಿಗೆ ಬೆಂಗಳೂರಿನಿಂದಲೇ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ಈ ಬಗ್ಗೆ ಹಲವು ತಿಂಗಳಿನಿಂದ ಮಾಹಿತಿ ಕಲೆ ಹಾಕಲಾಗುತ್ತಿತ್ತು’ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲೇ ಮಾದಕ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ನಿಖರ ಮಾಹಿತಿ ಆಧಾರದಲ್ಲಿ ದಾಳಿ ಮಾಡಲಾಯಿತು. ಆ ಸಂದರ್ಭದಲ್ಲೇ ಆರೋಪಿಗಳಾದ ಮೊಹಮ್ಮದ್ ಮುಸೀನ್, ಆಸಿಫ್ ಪಠಾಣ್ ಹಾಗೂ ಎಂ.ಡಿ.ಅಜರುದ್ದೀನ್ ಎಂಬುವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಆರೋಪಿಗಳು ಮಾದಕವಸ್ತುವನ್ನು ಪೊಟ್ಟಣಗಳಲ್ಲಿ ತುಂಬಿ ಹೊರ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದರು. ಅಕ್ರಮವಾಗಿ ಹಣ ಸಂಪಾದಿಸಲು ಈ ಮಾರ್ಗ ಕಂಡುಕೊಂಡಿದ್ದರು. ಗೋವಾದಲ್ಲಿ ನಡೆಯುವ ಹಲವು ಪಾರ್ಟಿಗಳಿಗೆ ಇವರೇ ಡ್ರಗ್ಸ್‌ ಪೂರೈಕೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದರು.

ಆರೋಪಿಗಳು ಕಸ್ಟಡಿಗೆ: ಬಂಧಿತ ಆರೋಪಿಗಳನ್ನು ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು 6 ದಿನಗಳ ಕಾಲ ಎನ್‌ಸಿಬಿ ಅಧಿಕಾರಿಗಳ ಕಸ್ಟಡಿಗೆ ನೀಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು