ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷೆ ಬಳಕೆಯಲ್ಲಿ ಸೂಕ್ಷ್ಮತೆ ಅಗತ್ಯ’

ಕವಿ ಎಚ್‌.ಎಸ್. ವೆಂಕಟೇಶಮೂರ್ತಿ ಅಭಿಮತ: ಕವನ ವಾಚಿಸಿದ ಸಿಂಗಪುರದ ಕವಿಗಳು
Last Updated 20 ಡಿಸೆಂಬರ್ 2020, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾಷೆಯನ್ನು ಬಳಸುವಾಗ ಅದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು. ಇತ್ತೀಚಿನದಿನಗಳಲ್ಲಿ ಅಸೂಕ್ಷ್ಮಮತಿಗಳೇ ಜಾಸ್ತಿಯಾಗುತ್ತಿದ್ದಾರೆ’ ಎಂದು ಕವಿ ಎಚ್‌.ಎಸ್. ವೆಂಕಟೇಶಮೂರ್ತಿ ಬೇಸರವ್ಯಕ್ತಪಡಿಸಿದರು.

ನಗರದ ಆದರ್ಶ ಸುಗಮ ಸಂಗೀತ ಅಕಾಡೆಮಿ ಹಾಗೂ ಅರಸೀಕೆರೆಯ ಅರಸೀ ಸಾಂಸ್ಕೃತಿಕ ವೇದಿಕೆಯು ಜಂಟಿ ಯಾಗಿ ಆಯೋಜಿಸಿದ್ದ ಸಿಂಗಪುರ ಕವಿಗಳೊಂದಿಗೆ ಅಂತರರಾಷ್ಟ್ರೀಯ ಆನ್‌ಲೈನ್ ಕವಿಗೋಷ್ಠಿಯಲ್ಲಿ ಮಾತನಾಡಿದರು.

‘ಭಾಷೆಯನ್ನು ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಭಾಷೆಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಮಾತನಾಡುವವರು ಕೆಲವರು ಮಾತ್ರ ಇರುತ್ತಾರೆ. ಅವರನ್ನು ನಿಜವಾದ ಕವಿಗಳು ಎಂದು ಕರೆಯು ತ್ತೇವೆ. ಹಿರಿಯ ಕವಿಗಳು ಪದ್ಯಗಳನ್ನು ಬರೆಯುವಾಗ ಅಥವಾ ಓದುವಾಗ ಅವರ ಕವಿತೆಗಳು ಈ ರೀತಿ ಇರಬಹುದು ಎಂಬ ನಿರೀಕ್ಷೆ ಇರುತ್ತದೆ. ಆದರೆ, ಹೊಸ ಕವಿಗಳ ಕವಿತೆಗಳು ನಿರೀಕ್ಷೆಗೂ ಮೀರಿ ಹೊಸ ಸಾಧ್ಯತೆಗಳನ್ನು ಸಾಕಾರ ಮಾಡುತ್ತವೆ’ ಎಂದರು.

ಕವಿತೆಗಳನ್ನು ವಿಶ್ಲೇಷಿಸಿದ ಲೇಖಕಿ ಮಮತಾ ಸಾಗರ್, ‘ವಿವಿಧ ದೇಶಗಳ ಲ್ಲಿರುವ ಕನ್ನಡಿಗರು ಹಾಗೂ ಕನ್ನಡ ಸಂಘ ಗಳು ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳು ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸುವ ಜತೆಗೆ ಸ್ಥಳೀಯ ಕನ್ನಡೇತರ ರನ್ನು ಸೇರಿಸಿ, ಬಹುಭಾಷಾ ಕವಿಗೋಷ್ಠಿ ಗಳನ್ನು ನಡೆಸಬೇಕು. ಈ ನಾಡಿನಿಂದ ಹೊರಗಿದ್ದವರು ಅಲ್ಲಿಯ ಸ್ನೇಹಿತರ ಕವಿತೆಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಬೇಕು’ ಎಂದು ತಿಳಿಸಿದರು.

ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್‌ ಸಹಾಯಕ್ಕೆ ಬಂದಿದ್ದು, ವಿದೇಶದಲ್ಲಿರುವ ಕನ್ನಡ ಕವಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯ ಸೇರಿದಂತೆ ವಿವಿಧೆಡೆ ನೆಲೆಸಿರುವವರೊಂದಿಗೆ ಕವಿಗೋಷ್ಠಿ ನಡೆಸಲಾಗುತ್ತದೆ’ ಎಂದು ವಿವರಿಸಿದರು.

ವೆಂಕಟರತ್ನಯ್ಯ, ವಸಂತ ಕುಲಕರ್ಣಿ, ನಾಗೇಶ್ ಮೈಸೂರು, ಮಾಲಾ ನಾಗರಾಜ್, ವಿನುತಾ ಭಟ್, ಕುಮಾರ್ ಗೌಡ, ಶಾಂತಕುಮಾರಿ, ಹೇಮಲತಾ ವಸ್ತ್ರದ, ರೇಖಾ ಭಟ್, ಪ್ರವರ ಕೊಟ್ಟೂರು ಹಾಗೂ ದೊಡ್ಡಕಲ್ಲಳ್ಳಿ ನಾರಾಯಣಪ್ಪ ಅವರು ಕವಿತೆ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT