ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಪ್ರೊ ಯುರಾಲಜಿ: 5 ವರ್ಷ ಕಳೆದರೂ ಕಟ್ಟಡ ಅಪೂರ್ಣ

Last Updated 3 ಜನವರಿ 2023, 21:28 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಹಾಗೂ ಅನುದಾನದ ಕೊರತೆಯಿಂದಾಗಿ ಐದು ವರ್ಷಗಳಾದರೂ ನೆಪ್ರೊ ಯುರಾಲಜಿ ಸಂಸ್ಥೆಯ 150 ಹಾಸಿಗೆಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಚಿಕಿತ್ಸೆ ಸಮಸ್ಯೆಯಾಗಿದೆ.

ಡಯಾಲಿಸಿಸ್ ಹಾಗೂ ಮೂತ್ರಪಿಂಡಕ್ಕೆ ಸಂಬಂಧಿಸಿದ ವಿವಿಧ ಚಿಕಿತ್ಸೆಗಳಿಗೆ ಸಂಸ್ಥೆಗೆ ರಾಜ್ಯದ ವಿವಿಧೆಡೆಯಿಂದ ರೋಗಿಗಳು ಬರುತ್ತಾರೆ. ಸದ್ಯ ಸಂಸ್ಥೆಯಲ್ಲಿ 20 ಡಯಾಲಿಸಿಸ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿನಿತ್ಯ 80 ರಿಂದ 90 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಸುಮಾರು 300 ರೋಗಿಗಳು ನಿತ್ಯ ಸಂಸ್ಥೆಗೆ ಭೇಟಿ ನೀಡುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚಳದಿಂದ 2016ರಲ್ಲಿಯೇ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 150 ಹಾಸಿಗೆಗಳ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 2018ರಲ್ಲಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿತ್ತು. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.

ಕಟ್ಟಡ ಕಾಮಗಾರಿ ಪ್ರಾರಂಭದ ವೇಳೆ ₹ 18.4 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ನಿರ್ಮಾಣ ಸಾಮಗ್ರಿಗಳ ವೆಚ್ಚ ಹೆಚ್ಚಳ ಹಾಗೂ ಹೊಸ ಘಟಕಗಳ ಸೇರ್ಪಡೆಯಿಂದ ಮತ್ತೆ ₹ 8 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಅನುಮೋದನೆ ದೊರೆಯದಿರುವುದು ಕಾಮಗಾರಿಗೆ ಹಿನ್ನಡೆಯಾಗಿದೆ. ನೂತನ ಕಟ್ಟಡವು 30 ಹಾಸಿಗೆಗಳ ಡಯಾಲಿಸಿಸ್ ಘಟಕ, 20 ಹಾಸಿಗೆಗಳ ತೀವ್ರ ನಿಗಾ ಘಟಕವನ್ನೂ ಒಳಗೊಂಡಿರಲಿದೆ.

‘ಮೂರು ಮಹಡಿಯಲ್ಲಿ ಎರಡು ಮಹಡಿಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸದ್ಯ ಬಣ್ಣ ಮತ್ತು ಕೊಳಾಯಿ ಕೆಲಸ ಬಾಕಿ ಉಳಿದಿದೆ. ಡಯಾಲಿಸಿಸ್, ಐಸಿಯು ಘಟಕಗಳ ನಿರ್ಮಾಣ ಕಾಮಗಾರಿ ಬಾಕಿ ಉಳಿದಿದೆ. ಅಂದಾಜು ವೆಚ್ಚ ಈಗ ಹೆಚ್ಚಳವಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಕೇಶವಮೂರ್ತಿ ತಿಳಿಸಿದರು.

‘ಕೋವಿಡ್‌ ಕಾಣಿಸಿಕೊಂಡ ಬಳಿಕ ಲಾಕ್‌ಡೌನ್‌ನಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತವಾಗಿತ್ತು. ಇದು ಕೂಡ ವಿಳಂಬಕ್ಕೆ ಕಾರಣ. ಸದ್ಯ ಕಾಮಗಾರಿ ನಡೆಯುತ್ತಿದ್ದು, ಆದಷ್ಟು ಶೀಘ್ರ ಸೇವೆ ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT