ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಗದರನಹಳ್ಳಿ ರಸ್ತೆ: ಟಿಡಿಆರ್‌ಗೆ ಸಮ್ಮತಿ

Last Updated 16 ಡಿಸೆಂಬರ್ 2020, 16:51 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೆಲಗದರನಹಳ್ಳಿ ಮುಖ್ಯ ರಸ್ತೆ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಅಗತ್ಯ ಇರುವ ಜಾಗವನ್ನು ಟಿಡಿಆರ್‌ (ಅಭಿವೃದ್ಧಿ ಹಕ್ಕು ಪ್ರಮಾಣಪತ್ರ) ಪಡೆದು ಬಿಟ್ಟುಕೊಡಲು ಬಹುತೇಕ ಆಸ್ತಿ ಮಾಲೀಕರು ಒಪ್ಪಿದ್ದಾರೆ.

ತುಮಕೂರು ರಸ್ತೆ 8ನೇ ಮೈಲಿಯಿಂದ ಅಂಧ್ರಹಳ್ಳಿ ತನಕದ 2.4 ಕಿಲೋ ಮೀಟರ್ ಉದ್ದದ ರಸ್ತೆ ಅತ್ಯಂತ ಕಿರಿದಾಗಿದ್ದು, ವಿಸ್ತರಣೆಯಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ರಸ್ತೆ ವಿಸ್ತರಣೆಗೆ ಅಗತ್ಯ ಇರುವ ಜಾಗ ಬಿಟ್ಟುಕೊಡಲು 173 ಆಸ್ತಿ ಮಾಲೀಕರನ್ನು ಒಪ್ಪಿಸುವಲ್ಲಿ ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಯಶಸ್ವಿಯಾಗಿದ್ದಾರೆ.

ಅಧಿಕಾರಿಗಳ ಸಮ್ಮುಖದಲ್ಲಿ ಆಸ್ತಿ ಮಾಲೀಕರೊಂದಿಗೆ ಶಾಸಕರು ಮಂಗಳವಾರ ಸಭೆ ನಡೆಸಿದರು. ಟಿಡಿಆರ್‌ ಬದಲು ಹಣದ ರೂಪದಲ್ಲಿ ಪರಿಹಾರವನ್ನೇ ನೀಡಬೇಕು ಎಂಬ ಬೇಡಿಕೆಯನ್ನು ಆಸ್ತಿ ಮಾಲೀಕರು ಮುಂದಿಟ್ಟರು. ಹಣದ ಬದಲು ಟಿಡಿಆರ್‌ ಪಡೆಯುವುದು ಸೂಕ್ತ ಎಂದು ಶಾಸಕರು ಸಲಹೆ ನೀಡಿದರು.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಕಾರಣ ನೆಲಗದರನಹಳ್ಳಿ ಮುಖ್ಯರಸ್ತೆ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಅತ್ಯಂತ ಕಿರಿದಾದ ಈ ರಸ್ತೆಯಲ್ಲಿ ಬಿಎಂಟಿಸಿ ಬಸ್‌ ಸಂಚಾರ ಕಷ್ಟವಾಗಿತ್ತು. ರಸ್ತೆ ವಿಸ್ತರಣೆ ಆಗಲಿರುವುದು ಸ್ಥಳೀಯರಲ್ಲಿ ಆಶಾಭಾವ ಮೂಡಿಸಿದೆ.

‘ರಸ್ತೆ ವಿಸ್ತರಣೆ ಆಗಲೇಬೇಕಿದ್ದು, ಟಿಡಿಆರ್ ಪಡೆದು ಜಾಗಬಿಟ್ಟುಕೊಡಲು ಶೇ 90ರಷ್ಟು ಜನರು ಒಪ್ಪಿದ್ದಾರೆ. ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಮತ್ತೆ ಚಾಲನೆ ದೊರೆಯಲಿದೆ’ ಎಂದು ಆರ್. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT