ನೆಲಮಂಗಲ: ಪದಂ ಜ್ಯುವೆಲ್ಲರಿ ಮಳಿಗೆಗೆ ನುಗ್ಗಿ ಸಿನಿಮೀಯ ಶೈಲಿಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ರಾಜಸ್ಥಾನ ಹಾಗೂ ಬಿಹಾರದ ಏಳು ಮಂದಿಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ನಾರಾಯಣ ಲಾಲ್(34), ರಾಮ ಲಾಲ್(54), ಕಿಶೋರ್ ಪವಾರ್(25), ಮಹೇಂದ್ರ ಗೆಹಲೋತ್(25), ಕೀರ್ತಾರಾಮ್ ಅಲಿಯಾಸ್ ಶಂಕರ್(42), ಅಶೋಕ್ ಕುಮಾರ್(39), ಸೋಹನ್ ರಾಮ್(32) ಬಂಧಿತ ಆರೋಪಿಗಳು.
ಆರೋಪಿಗಳಿಂದ 417 ಗ್ರಾಂ. ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿಗಳು, ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್, ಡ್ಯಾಗರ್, ಬೈಕ್ ಹಾಗೂ ಆಟೊ ರಿಕ್ಷಾ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಜೂನ್ 27ರಂದು ರಾತ್ರಿ 9 ಗಂಟೆ ಸುಮಾರಿಗೆ ಮಸುಕುಧಾರಿಗಳಾಗಿ ಚಿನ್ನಾಭರಣ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು, ಪಿಸ್ತೂಲ್ ತೋರಿಸಿ 30 ಸೆಕೆಂಡಿನಲ್ಲಿ ಚಿನ್ನಾಭರಣಗಳನ್ನು ಚೀಲಕ್ಕೆ ತುಂಬಿಕೊಂಡು ಮಿಂಚಿನ ವೇಗದಲ್ಲಿ ಬೈಕ್‌ನಲ್ಲಿ ಪರಾರಿಯಾಗಿದ್ದರು. ಆರೋಪಿಗಳ ಕೃತ್ಯ ಕಂಡು ಮಳಿಗೆಯಲ್ಲಿದ್ದ ಸಿಬ್ಬಂದಿಗಳು ಬೆಚ್ಚಿ ಬಿದ್ದಿದ್ದರು. ಆರೋಪಿಗಳು ಪರಾರಿಯಾದ ಮೇಲೆ ಮಳಿಗೆಯ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು ಸಿಸಿಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ್ದರು. ನಂತರ ತಾಂತ್ರಿಕ ಹಾಗೂ ಇತರೆ ಮಾಹಿತಿಗಳನ್ನು ಕಲೆಹಾಕಿ ರಾಜಸ್ಥಾನದ ಮೂಲದವರು ದರೋಡೆ ಮಾಡಿರುವುದನ್ನು ಖಚಿತ ಪಡಿಸಿಕೊಂಡಿದ್ದರು. ರಾಜಸ್ಥಾನ ಹಾಗೂ ಬೆಂಗಳೂರಿನಲ್ಲಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
‘ಆರೋಪಿಗಳಾದ ನಾರಾಯಣ ಲಾಲ್ ಹಾಗೂ ರಾಮ ಲಾಲ್ ಬೆಂಗಳೂರಿನಲ್ಲಿ ಚಿನ್ನಾಭರಣ ಹಾಗೂ ರಾಸಾಯನಿಕ ವ್ಯಾಪಾರದ ಅಂಗಡಿ ನಡೆಸುತ್ತಿದ್ದರು. ವ್ಯವಹಾರದಲ್ಲಿ ನಷ್ಟವಾಗಿದ್ದರಿಂದ ದರೋಡೆ ಮಾಡಿ ಸುಲಭವಾಗಿ ಹಣ ಗಳಿಸುವ ಸಂಚು ರೂಪಿಸಿದ್ದರು. ಇದಕ್ಕಾಗಿ ರಾಜಸ್ಥಾನ ಹಾಗೂ ಬಿಹಾರ ರಾಜ್ಯದಲ್ಲಿ ಅಪರಾಧ ಹಿನ್ನೆಲೆಯುಳ್ಳವರ ಜತೆ ಸೇರಿ ತಂಡ ಕಟ್ಟಿಕೊಂಡಿದ್ದರು. ಕಳವು ಮಾಡಿದ್ದ ಆರೋಪಿಗಳು, ಚಿನ್ನಾಭರಣವನ್ನು ರಾಜಸ್ಥಾನದಲ್ಲಿ ಮಾರಾಟ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
ಆರೋಪಿಗಳ ವಿರುದ್ಧ ಹಲಸೂರು ಗೇಟ್ ಹಾಗೂ ರಾಜಸ್ಥಾನದ ಚೋದ್‌ಪುರ್, ಬೋರೂಂಡಾ ಪೊಲೀಸ್ ಠಾಣೆಗಳಲ್ಲಿ ಕಳವು, ಸುಲಿಗೆ ಪ್ರಕರಣಗಳು ದಾಖಲಾಗಿವೆ.
ಕಾರ್ಯಾಚರಣೆ ನಡೆಸಿದ ಸಿಬ್ಬಂದಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಸಿ.ಕೆ. ಬಾಬಾ ಶ್ಲಾಘಿಸಿದ್ದಾರೆ.