ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಟಿ ಆದೇಶ ಜಾರಿಯಲ್ಲಿ ತಾರತಮ್ಯ?

ಮುಖ್ಯಮಂತ್ರಿ ಸಚಿವಾಲಯದ ಆಪ್ತ ಕಾರ್ಯದರ್ಶಿಗೆ ಗ್ರೂಪ್‌ ಎ ಹುದ್ದೆ
Last Updated 13 ಜುಲೈ 2020, 19:11 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಆದೇಶದ ಪ್ರಕಾರ ಅಂಗವಿಕಲರ ಕೋಟಾ ಅಡಿ ಕೆಎಎಸ್‌ ಅಧಿಕಾರಿಗಳಿಗೆ ಗ್ರೂಪ್‌ ಎ ಹುದ್ದೆ ನೀಡುವ ವಿಚಾರದಲ್ಲಿ ತಾರತಮ್ಯವೆಸಗಲಾಗಿದೆ ಎಂದು ಕೆಲ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1995ರ ಅಂಗವಿಕಲರ ಸಮಾನ ಹಕ್ಕು ಕಾಯ್ದೆ ಪ್ರಕಾರ ಯಾವುದೇ ಹುದ್ದೆಗಳ ನೇಮಕಾತಿ ವೇಳೆ ಪ್ರತಿ ವೃಂದದಲ್ಲಿ ಶೇ 3ಕ್ಕಿಂತ ಕಡಿಮೆ ಇಲ್ಲದಂತೆ ಅಂಗವಿಕಲರಿಗೆ ಮೀಸಲಾತಿ ನೀಡಬೇಕು. ರಾಜ್ಯದಲ್ಲಿ 1997ರಲ್ಲಿ ಹೊಸ ಗಜೆಟೆಡ್‌ ಪ್ರೊಬೆಷನರ್ಸ್‌ ನಿಯಮ ಜಾರಿಯಾಗಿದೆ.

ಕೆಎಎಸ್‌ ಹುದ್ದೆಗಳ ನೇಮಕಾತಿಗೆ ಸರ್ಕಾರ 1998, 1999, 2004ರಲ್ಲಿ ಅಧಿಸೂಚನೆಗಳನ್ನು ಪ್ರಕಟಿಸಿತ್ತು. ಈ ಮೂರೂ ಅಧಿಸೂಚನೆಗಳಲ್ಲೂ ಅಂಗವಿಕಲರಿಗೆ ಮೀಸಲಾತಿ ಕಲ್ಪಿಸದಿರುವುದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ವಿಶ್ವನಾಥ ಹಿರೇಮಠ, ಶಂಕರಗೌಡ ಸಿ. ದೊಡ್ಡಮನಿ ಸೇರಿದಂತೆ ಆರು ಮಂದಿಯನ್ನು ಅಂಗವಿಕಲರ ಕೋಟಾದಡಿ ನೇಮಕಾತಿ ಮಾಡಿಕೊಳ್ಳುವಂತೆ ನ್ಯಾಯಮಂಡಳಿ ಆದೇಶ ಮಾಡಿತ್ತು. ಆದರೂ, ಈ ಮೂರು ನೇಮಕಾತಿಗಳಲ್ಲೂ ಉಪವಿಭಾಗಾಧಿಕಾರಿ (ಗ್ರೂಪ್‌ ಎ) ಹುದ್ದೆಗಳಿಗೆ ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಿರಲಿಲ್ಲ. ಹಾಗಾಗಿ, ಹಿರೇಮಠ ಸೇರಿದಂತೆ ಆರು ಮಂದಿಗೆ ಗ್ರೂಪ್‌ ಎ ಬದಲು ಗ್ರೂಪ್‌ ಬಿ ಹುದ್ದೆಗಳು ಲಭಿಸಿದ್ದವು.

ಇದನ್ನು ಪ್ರಶ್ನಿಸಿ ಹಿರೇಮಠ ಹಾಗೂ ದೊಡ್ಡಮನಿ ಅವರು ಕೆಎಟಿ ಮೊರೆಹೋಗಿದ್ದರು. ಅವರ ಅರ್ಜಿಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಇಬ್ಬರು ಅಧಿಕಾರಿಗಳಿಗೂ ಗ್ರೂಪ್‌ ಎ ಹುದ್ದೆಗಳನ್ನು ಕಲ್ಪಿಸುವಂತೆ ಕೆಎಟಿ 2017ರಲ್ಲಿ ಆದೇಶ ಮಾಡಿತ್ತು.

ಈಗ ಸರ್ಕಾರ ಕೆಎಟಿಯ ಆದೇಶವನ್ನುಭಾಗಶಃ ಜಾರಿಗೊಳಿಸಿದೆ. ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಆಪ್ತ ಕಾರ್ಯದರ್ಶಿಯಾಗಿರುವ ಹಿರೇಮಠ ಅವರಿಗೆ ಮಾತ್ರ ಗ್ರೂ‍ಪ್‌ ಎ ಹುದ್ದೆ ನೀಡಿ ಸೋಮವಾರ ಆದೇಶ ಮಾಡಿದೆ.

‘ನ್ಯಾಯಾಂಗದಯಾವುದೇ ಆದೇಶವನ್ನು ಭಾಗಶಃ ಜಾರಿಗೊಳಿಸುವಂತಿಲ್ಲ. ಸರ್ಕಾರದ ನಡೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಕೆಎಎಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಕೆಎಟಿ ಆದೇಶದ ಪ್ರಕಾರ ನನಗೂ ಗ್ರೂಪ್‌ ಎ ಹುದ್ದೆ ಸಿಗಬೇಕಿತ್ತು. ಈ ತಾರತಮ್ಯ ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ಶಂಕರಗೌಡ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT