ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿದ್ದವರಿಗೆ ‘ನೆರವಿ’ನ ಆಸರೆ

Last Updated 28 ಏಪ್ರಿಲ್ 2020, 22:04 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ದಿನಿಸಿ ಕಿಟ್‌ ಕೊಟ್ಟೆವು. ಅವರು ನಿನ್ನೆ ಇದನ್ನು ಯಾರೋ ಕೊಟ್ಟಿದ್ದಾರೆ. ನಮಗೆ ತರಕಾರಿ ಕೊಡಿ ಎಂದರು. ಆಮೇಲೆ ತರಕಾರಿ ಕೊಡಿಸಿದೆವು... ಅವರು ಖುಷಿಯಾದರು.. ಹೀಗೆ ದಿನ ಬಿಟ್ಟು ದಿನ ಅಗತ್ಯವಿರುವವರಿಗೆ ನಮ್ಮ ಕೈಲಾದಷ್ಟು ‘ನೆರವು’ ನೀಡುತ್ತಿದ್ದೇವೆ’ ಎಂದರು ‘ನೆರವು’ ತಂಡದ ಸುಶೀಲ್‌ ಸಾಗರ್‌.

ಈ ‘ನೆರವು’ ತಂಡ, ಲಾಕ್‌ಡೌನ್‌ ಆರಂಭವಾದಾಗಿನಿಂದಲೂ,ಸಂಕಷ್ಟದಲ್ಲಿರುವ ವಲಸಿಗ ಕಾರ್ಮಿಕರು, ಬಡವರು, ನಿರ್ಗತಿಕರಿಗಾಗಿ ಆಹಾರ ಸೇರಿದಂತೆ ಅಗತ್ಯವಸ್ತುಗಳನ್ನು ಪೂರೈಸುತ್ತಿದೆ. ತಂಡದಲ್ಲಿ ಬೇರೆ ಬೇರೆ ಉದ್ಯೋಗದಲ್ಲಿರುವ ಸುಶೀಲ್ ಸಾಗರ್ ಜತೆಗೆ, ಸುಂದರ್ ಹಾಗೂ ಶ್ರೀನಿವಾಸ್‌ ಕೈಜೋಡಿಸಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ನಂತರ ಈ ಮೂವರು ತಮ್ಮ ಮನೆಯ ಅಕ್ಕಪಕ್ಕದ ಕಾಲೊನಿಗಳಲ್ಲಿರುವ ಬಡವರಿಗೆ, ವೃದ್ಧರಿಗೆ ಹಣ್ಣು, ತರಕಾರಿ, ದಿನಿಸಿಗಳನ್ನು ಪೂರೈಸುತ್ತಿದ್ದರು. ದಿನಬಿಟ್ಟು ದಿನ 150 ಮಂದಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದರು. ಒಂದು ಹಂತದಲ್ಲಿ ನೆರವು ಕೇಳುವವರ ಸಂಖ್ಯೆ ವಿಸ್ತರಣೆಯಾಗುವ ಸೂಚನೆ ಸಿಕ್ಕಿತು. ಆಗ ತಾವು ಕೈಗೊಳ್ಳುತ್ತಿರುವ ಚಟುವಟಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು. ‘ಯಾರಾದರೂ, ನಮ್ಮ ಕಾರ್ಯಕ್ಕೆ ಕೈ ಜೋಡಿಸುವವರಿದ್ದರೆ ಸಂಪರ್ಕಿಸಬಹುದು’ ಎಂದು ಮನವಿ ಮಾಡಿದರು.

ಇವರ ಮನವಿಗೆ ಉತ್ತಮ ಪ್ರತಿಕ್ರಿಯಿ ಸಿಕ್ಕಿತು. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿರುವ ದಾನಿಗಳು, ಹಿರಿಯರು ಈ ತಂಡವನ್ನು ಸಂಪರ್ಕಿಸಿ, ಹಣಕಾಸಿನ ನೆರವು ನೀಡಲು ಮುಂದಾದರು. ಬೇರೆ ಬೇರೆ ದೇಶಗಳಲ್ಲಿರುವ ಗೆಳೆಯರು, ಪರಿಚಿತರು ಧನ ಸಹಾಯ ಮಾಡಿದರು. ಐಟಿ–ಬಿಟಿ, ಖಾಸಗಿ ಸಂಸ್ಥೆಯ ಉದ್ಯೋಗಿಗಳು ಚಟುವಟಿಕೆಗೆ ಕೈ ಜೋಡಿಸಲು ತಂಡ ಸೇರಿದರು. ‘ನಮಗೂ ನೆರವಾಗುವ ಆಸೆ ಇದೆ. ಆದರೆ, ಹೊರಗೆ ಹೋಗಲು ಆಗುವುದಿಲ್ಲ’ ಎಂದು ಹೇಳುತ್ತಿದ್ದವರು, ನಮ್ಮ ತಂಡದ ಮೂಲಕ ತಮ್ಮ ಕೈಲಾದ ಸೇವೆಗೆ ಮುಂದಾದರು‘ ಎಂದು ಸುಶೀಲ್ ಸಾಗರ್ ವಿವರಿಸಿದರು.

ಈಗ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಬಡವರು, ನಿರ್ಗತಿಕರು, ಕಾರ್ಮಿಕರ ಕುಟುಂಬಗಳನ್ನು ಗುರುತಿಸಿ ದಿನ ಬಿಟ್ಟು ದಿನ ಅವರಿಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ ಈ ತಂಡ.‘ನಮ್ಮ ತಂಡದ ಕಾರ್ಯಚಟುವಟಿಕೆಗಳು ಒಮ್ಮೆ ಎಫ್‌ಎಂ ರೇಡಿಯೊದಲ್ಲಿ ಪ್ರಸಾರವಾಯಿತು. ಆಗ ಆನೇಕಲ್‌ ಸೇರಿದಂತೆ ಬೇರೆ ಬೇರೆ ಭಾಗದಿಂದ ಸಹಾಯ ಕೇಳಿಕೊಂಡು ಫೋನ್‌ ಮಾಡುವವರು ಹೆಚ್ಚಾದರು. ಆ ಭಾಗಕ್ಕೆ ಹೋಗಲು ನಮಗೆ ಅನುಮತಿ ಪಡೆಯಬೇಕಿತ್ತು. ಹಾಗಾಗಿ, ಅಲ್ಲಿರುವ ಗೆಳೆಯರಿಗೆ, ನಮ್ಮ ಸಂಘಟನೆಯಿಂದ ಹಣ ಕಳುಹಿಸಿ, ಅಗತ್ಯವಿರುವವರಿಗೆ ನೆರವು ನೀಡಲು ಮನವಿ ಮಾಡಿದೆವು’ ಎನ್ನುತ್ತಾ ಚಟುವಟಿಕೆಗಳ ಸ್ವರೂಪವನ್ನೂ ಸುಶೀಲ್ ವಿವರಿಸಿದರು.

ಸದ್ಯಕ್ಕೆ ಈಗ 500 ಕುಟುಂಬಗಳಿಗೆ ಆಹಾರ ಪೊಟ್ಟಣಗಳನ್ನು ಪೂರೈಸುತ್ತಿದ್ದಾರೆ. ಕನಿಷ್ಠ 4 ರಿಂದ 6 ಜನರಿರುವ ಕುಟುಂಬಕ್ಕೆ 15 ದಿನಗಳಿಗೆ ಅಗತ್ಯವಿರುವಷ್ಟು ಅಡುಗೆ ಎಣ್ಣೆ, ಗೋಧಿ, ಸಕ್ಕರೆ, ಅಕ್ಕಿ, ತೊಗರಿಬೇಳೆ, ಕಾಳು ಹಾಗೂ ಬಿಸ್ಕತ್‌ ಪೊಟ್ಟಣಗಳಿರುವ ದಿನಿಸಿ ಕಿಟ್ ವಿತರಿಸುತ್ತಿದ್ದಾರೆ. ಸದ್ಯ ದಿನ ಬಿಟ್ಟು ದಿನ ಬೇರೆ ಬೇರೆ ಏರಿಯಾಗಳಲ್ಲಿ ಈ ಕೆಲಸ ಸಾಗುತ್ತಿದೆ.

‘ನೆರವು’ ತಂಡದ ಸಂಪರ್ಕ ಸಂಖ್ಯೆ: ಮೊಬೈಲ್‌– 9739464045.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT