ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರಿಗೆ ಇನ್ನೂ ಸಿಕ್ಕಿಲ್ಲ ‘ನೀರಿನ ಉತ್ತರ’

ನೀರಿಲ್ಲದ ಕಾರಣ ಹಳ್ಳಿಗಳನ್ನು ತೊರೆದ ಜನರು; ಸಾವಿರಾರು ಎಕರೆಯಲ್ಲಿ ಒಣಗಿದ ತೆಂಗು, ಅಡಿಕೆ
Last Updated 19 ಮೇ 2018, 8:01 IST
ಅಕ್ಷರ ಗಾತ್ರ

ತಿಪಟೂರು: ಆ ಊರಿಗೆ ಕಾಲಿಟ್ಟಾಗ ಬಾಗಿಲಿಗೆ ಬೀಗ ಹಾಕಿದ ಮನೆ ಕಂಡಿತು. ದಾರಿಯಲ್ಲಿ ಮುಂದೆ ಸಾಗಿದಂತೆಲ್ಲ ಬೀಗ ಹಾಕಿದ್ದ, ಪಾಳು ಬಿದ್ದ ಮನೆಗಳೇ ಎದುರಾದವು.

ಈ ಊರಿನಲ್ಲಿ ಅಂದಾಜು 175 ಮನೆಗಳ ಲೆಕ್ಕ ಸಿಕ್ಕಿತು. 90ಕ್ಕೂ ಹೆಚ್ಚು ಮನೆಗಳಿಗೆ ಬೀಗ ಹಾಕಲಾಗಿತ್ತು. ಹಲವು ಮನೆಗಳಿಗೆ ಬೀಗದ ಅಗತ್ಯತೆಯೂ  ಇರಲಿಲ್ಲ. ಹಾಗೆಯೇ ಬಾಗಿಲು ಚಿಲಕ ಮಾತ್ರ ಹಾಕಿದ್ದರು. ಕೆಲವು ಮನೆಗಳಿಗೆ ಮಾಡು ಕುಸಿದಿದ್ದರೆ, ಕೆಲವಕ್ಕೆ ಗೋಡೆಗಳು ಬಿರುಕುಬಿಟ್ಟು ಆಗಲೋ, ಈಗಲೋ ಬೀಳುವಂತೆ ಇದ್ದವು- ಇದು ಕೃಷ್ಣಾ ಹಾಗೂ ಕಾವೇರಿ- ಹೀಗೆ ಎರಡು ನೀರಾವರಿ ಕೊಳ್ಳಗಳು ಹಾದು ಹೋಗುವ ತಿಪಟೂರು ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದ ಚಿತ್ರಣ.

’ಆರೇಳು ವರ್ಷಗಳ ಹಿಂದೆ ಯಾರೂ ಊರು ಬಿಟ್ಟು ಹೋಗಿರಲಿಲ್ಲ. ಕೃಷಿ,  ತೋಟಗಾರಿಕೆ ಸಮೃದ್ಧವಾಗಿತ್ತು. ಎಲ್ಲರೂ ತೆಂಗು–ಅಡಿಕೆ ತೋಟಗ ಳ ಮಾಲೀಕರಿದ್ದರು. ಆದರೆ ಈಗ ನಮ್ಮೂರು ಮಾತ್ರವಲ್ಲ, ಈ ಭಾಗದ ಯಾವ ಹಳ್ಳಿಗೆ ಹೋದರೂ ಇಂಥದೇ ಚಿತ್ರಣ.ನಿರಂತರ ಬರಗಾಲ,ಅಂತರ್ಜಲ ಕುಸಿತ ತಾಲ್ಲೂಕಿನ ಹಳ್ಳಿಗಳನ್ನು ಸಾವಿನ ದವಡೆಗೆ ನೂಕಿತು’ ಎಂದು ಹೇಳಿ ಚಿಕ್ಕಬಿದರೆಯ ಬಾಲಕೃಷ್ಣ ಮೌನಕ್ಕೆ ಶರಣಾದರು.

ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ನೀರಿನ ಹಂಚಿಕೆಯಾಗಿರುವ ತಾಲ್ಲೂಕು ತಿಪಟೂರು. ಏಷ್ಯಾದ ಅತಿ  ದೊಡ್ಡ ಕೊಬ್ಬರಿ ಮಾರುಕಟ್ಟೆಯ ಖ್ಯಾತಿ ಇದ್ದರೂ ನೀರಿನ ವಿಷಯದಲ್ಲಿ ತಾಲ್ಲೂಕು ಹಿಂದೆ ಉಳಿದಿದೆ. ತೆಂಗನ್ನೇ ನಂಬಿರುವ ತಾಲ್ಲೂಕಿನ ಕೃಷಿಕರು ಈಗ ತೋಟಗಳನ್ನು ಉಳಿಸಿಕೊಳ್ಳಲಾಗದೆ ಮನೆ–ಮಠ ಮಾರಿಕೊಂಡು ಊರು ಬಿಟ್ಟಿದ್ದಾರೆ.ಇನ್ನೂ ಕೆಲವಡೆ, ಒಣಗಿದ ತೋಟಗಳನ್ನು ಬಿಟ್ಟು ಸಣ್ಣಪುಟ್ಟ ಕೂಲಿ ಕೆಲಸ, ತರಕಾರಿ ಮಾರಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಚಿಕ್ಕಬಿದರೆಯ ಈ ಸಣ್ಣ ಗ್ರಾಮಕ್ಕೆ ಕಾಲಿಟ್ಟವರು ಕಣ್ಣೀರಾಗದೆ ಈಚೆ ಬರಲಾರರು ಎಂಬಂಥ ದೃಶ್ಯಗಳು ಕಣ್ಣಿಗೆ  ಬೀಳುತ್ತವೆ. ಮನೆ ತೊರೆದು ಹೋದವರೆಲ್ಲರ ಕಥೆಯೂ ಭಿನ್ನ. ಒಬ್ಬೊಬ್ಬರದು ಒಂದು ಕರುಣಾಜನಕ ಕಥೆ.

’ಹೊನ್ನವಳ್ಳಿ ಏತ ನೀರಾವರಿ ಯೋಜನೆಯಡಿ ಚಿಕ್ಕಬಿದರೆ ಗ್ರಾಮದ ಕೆರೆಗೆ ನೀರು ಬರಲಿದೆ ಎಂದು ದಶಕದ ಹಿಂದೆಯೇ ಹೇಳಲಾಗಿತ್ತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ವಿಧಾನಸಭೆ– ಯಾವುದೇ ಚುನಾವಣೆ ಬಂದರೂ ಪ್ರಚಾರಕ್ಕೆ ಬರುವ ರಾಜಕಾರಣಿಗಳು ಕೆರೆಗೆ ನೀರು ತರುವುದಾಗಿ ಹೇಳುತ್ತಾರೆ.ಆದರೆ ನೀರು ಮಾತ್ರ ಬರಲಿಲ್ಲ’ ಎಂದು
ಗ್ರಾಮದ ಬೈರೇಶ್‌ ನೆನಪು ಮಾಡಿಕೊಂಡರು.

'ಅಂತರ್ಜಲ 800 ಅಡಿಯಿಂದ 1200 ಅಡಿಗೆ ಕುಸಿದಿದೆ. ಒಬ್ಬೊಬ್ಬರು ನಾಲ್ಕು– ಐದು ಕೊಳವೆಬಾವಿ ಕೊರೆಸಿದ್ದಾರೆ. ಇನ್ನೂ ಸಾಧ್ಯವೇ ಇಲ್ಲ ಎಂದಾಗ ತೋಟವನ್ನು ಒಣಗಲು ಬಿಟ್ಟು ನಗರಕ್ಕೆ ವಲಸೆ ಹೋಗಿದ್ದಾರೆ. 300 ಕೊಳವೆಬಾವಿ ಇದ್ದವು. ಈಗ 20 ರಿಂದ30 ಕೊಳವೆಬಾವಿಗಳಲ್ಲಿ ಮಾತ್ರ ನೀರಿದೆ. ಅದೂ, ದಿನದಲ್ಲಿ ಎರಡು–ಮೂರು ಗಂಟೆ ಮಾತ್ರ ನೀರು ನೀಡುತ್ತಿವೆ. ನಂತರ ನಿಲ್ಲುತ್ತಿವೆ' ಎನ್ನುತ್ತಾರೆ ಗ್ರಾಮಸ್ಥರು.

’ಗ್ರಾಮದ ಎಲ್ಲರಿಗೂ ಸೇರಿ 375 ಎಕರೆ ತೆಂಗಿನ ತೋಟ ಇತ್ತು. 15 ಸಾವಿರ ಮರಗಳಿದ್ದವು. 12 ಸಾವಿರ ಮರಗಳು ಒಣಗಿವೆ’– ಹೀಗೆ, ಗ್ರಾಮದ ಬರದ ಬವಣೆಯ ಇಂಚಿಂಚು ಲೆಕ್ಕ ಹೇಳುತ್ತಾರೆ ಬಾಲಕೃಷ್ಣ , ’ನಮ್ಮೂರಿಗೆ ಏನಾದರು ಮಾಡಿ. ಜಿಲ್ಲೆಯ ಅತ್ಯಂತ ಬರಪೀಡಿತ ಗ್ರಾಮ ಇದು’ ಎಂದು ಗೋಗರೆದರು.

ಚಿಕ್ಕಬಿದರೆ ನಂತರ ಸಿಗುವ ಗೌಡನಕಟ್ಟೆ, ಗುರುಗದಹಳ್ಳಿ, ಬೇಲೂರನಹಳ್ಳಿ, ಶಿವರ, ಅಳಲೇಹಳ್ಳಿ, ಬೆಣ್ಣೇನಹಳ್ಳಿ, ಹೊನ್ನೇನಹಳ್ಳಿ, ಲಿಂಗದಹಳ್ಳಿ, ಮಡೆನೂರು, ಸಿಂಗೇನಹಳ್ಳಿ, ತಡಸೂರು, ಬನ್ನಿಹಳ್ಳಿ, ಅನಗೊಂಡನಹಳ್ಳಿ, ಹೊಸಹಳ್ಳಿ, ಕೆರೆಗೋಡಿ ಗ್ರಾಮಗಳಲ್ಲೂ ಪರಿಸ್ಥಿತಿ ಭಿನ್ನವಾಗೇನು ಇಲ್ಲ. ಮತ್ತೂ ಭೀಕರ ಎನಿಸುವಂಥ ಸ್ಥಿತಿ. ಒಣಗಿ ತಲೆಬಿದ್ದು ಹೋಗಿರುವ ತೆಂಗಿನ ಮರಗಳು, ಒಣಗಿದ ಅಡಿಕೆ ಮರಗಳು, ಅಲ್ಲಲ್ಲಿ ಬೀಗ ಹಾಕಿರುವ ಮನೆಗಳು.

’ಈಗಷ್ಟೆ ಮದುವೆಯಾದವರು, ಚಿಕ್ಕಮಕ್ಕಳಿದ್ದವರೂ ಸಹ ಊರು ಬಿಟ್ಟು ಬೆಂಗಳೂರಿನ ಕೊಳೆಗೇರಿಗಳು, ಸಣ್ಣಪುಟ್ಟ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿರುವ ಎಷ್ಟೋ ಮಂದಿ ಅದೇ ಕಟ್ಟಡಗಳಲ್ಲಿ ಪಾಲಿಥಿನ್‌ ಚೀಲದ ಸೂರು ಕಟ್ಟಿಕೊಂಡು ಜೀವ ಸಾಗಿಸುತ್ತಿದ್ದಾರೆ’ ಎಂದು ರೈತ ಸಂಘದ ಬಿ.ಎಸ್‌.ದೇವರಾಜು ಹೇಳುತ್ತಾರೆ.

’ತಾಲ್ಲೂಕಿನ ನೀರಿನ ಬವಣೆಗೆ ಉತ್ತರವೇ ಸಿಗುತ್ತಿಲ್ಲ. ಅರ್ಧದಲ್ಲೇ ಕಾಲೇಜು ತೊರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಹೇಮಾವತಿ ನಾಲೆಯಿಂದ ತಾಲ್ಲೂಕಿನ  ಕೆರೆಗಳನ್ನು ತುಂಬಿಸಿದರೆ ಮಾತ್ರ ಪರಿಹಾರ ಸಿಗಬಹುದು. ನೀರಿನ ಹಂಚಿಕೆಯಲ್ಲೂ ತಾಲ್ಲೂಕಿಗೆ ಅನ್ಯಾಯವಾಗಿದೆ’ ಎಂದು ಹೇಳುತ್ತಾರೆ ಬೆಲೆ ಕಾವಲು ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಕೆಳಗಿನಹಟ್ಟಿ.

ನಮಗೆ ಏಕೆ ಈ ಅನ್ಯಾಯ?

’ಉದ್ದೇಶಿತ ಎತ್ತಿನಹೊಳೆ ಯೋಜನೆಯಿಂದಲೂ ತಾಲ್ಲೂಕಿಗೆ ಯಾವುದೇ ಪ್ರಯೋಜವಿಲ್ಲ. ಕೇವಲ 300 ಎಂಸಿಎಫ್‌ಟಿ ನೀರು ಮಾತ್ರ ಹಂಚಿಕೆ ಮಾಡಲಾಗಿದೆ. ಅದೂ ಸಹ ಕುಡಿಯುವ ನೀರಿಗಾಗಿ ಮಾತ್ರ. ಅಂತರ್ಜಲ ವೃದ್ಧಿಗೆ ನೀರು ಹಂಚಿಕೆ ಪರಿಗಣಿಸಿಲ್ಲ’ ಎನ್ನುತ್ತಾರೆ ಶ್ರೀಕಾಂತ ಕೆಳಹಟ್ಟಿ.

ಕೃಷ್ಣಾಕೊಳ್ಳದಲ್ಲಿ ಬರುವ ಚಿಕ್ಕನಾಯಕಹಳ್ಳಿ, ಮಧುಗಿರಿ, ಶಿರಾ, ಕೊರಟಗೆರೆಗೆ ಈಗಾಗಲೇ ಹೇಮಾವತಿ ನೀರು ಕುಡಿಯಲು ನೀಡಲಾಗಿದೆ. ಎತ್ತಿನಹೊಳೆ ಯೋಜನೆಯಿಂದಲೂ ಕುಡಿಯಲು ಹಾಗೂ ಅಂತರ್ಜಲ ವೃದ್ಧಿಗೆ ನೀರು ಹಂಚಿಕೆ ಮಾಡಲಾಗಿದೆ. ಆದರೆ ತಿಪಟೂರಿಗೆ ಏಕೆ ಈ ಅನ್ಯಾಯ’ ಎಂದು ಪ್ರಶ್ನಿಸಿದರು.

ನೀರಿನ ವಿಷಯದಲ್ಲಿ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇನ್ನೊಂದು ದಶಕದಲ್ಲಿ ಇಲ್ಲಿನ ತೆಂಗಿನ ಮರಗಳೆಲ್ಲ ಒಣಗಿ ತಾಲ್ಲೂಕು ಮರುಭೂಮಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ಎಚ್ಚರಿಸಿದರು.

’ಇಲ್ಲಿನ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲಿನ ಜನರ ಹಿತಾಸಕ್ತಿ ಬೇಕಾಗಿಲ್ಲ. ಹೀಗಾಗಿಯೇ ತಾಲ್ಲೂಕಿಗೆ ಹೆಚ್ಚು ನೀರು ಹಂಚಿಕೆ ಮಾಡಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ’ ಎಂದು ತಾಲ್ಲೂಕು ರೈತ ಸಂಘದ ಯೋಗೀಶ್ವರಸ್ವಾಮಿ ಹೇಳುತ್ತಾರೆ.

’ಜಿಲ್ಲೆಯ ಎಲ್ಲ ಹತ್ತು ತಾಲ್ಲೂಕುಗಳನ್ನು ತೆಗೆದುಕೊಂಡರೆ, ತಿಪಟೂರು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳಿಗೆ ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಭದ್ರಾ ಯೋಜನೆಗಳಿಂದ ಕುಡಿಯಲು ಹಾಗೂ ಅಂತರ್ಜಲ ವದ್ಧಿಪಡಿಸಲು ನೀರು ಹಂಚಿಕೆಯಾಗಿದೆ. ತಿಪಟೂರು ವಿಷಯದಲ್ಲಿ ಮಾತ್ರ ಮಲತಾಯಿ ಧೋರಣೆ  ತಳೆಯಲಾಗಿದೆ. ಇಲ್ಲಿನ ಜನರಿಗೆ ಅಂತರ್ಜಲ ಬೇಡವೇ?’  ಎನ್ನುತ್ತಾರೆ ಬೆಲೆ ಕಾವಲು ಸಮಿತಿ ಅಧ್ಯಕ್ಷ ಎಸ್‌.ಗಂಗಾಧರಯ್ಯ.

ಯಗಚಿ ಉತ್ತರವೇ?

ತಿಪಟೂರಿಗೆ ಯಗಚಿ ಜಲಾಶಯದಿಂದ ನೀರು ತರಬೇಕೆಂಬ ಆಂದೋಲನ ದಶಕದಿಂದ ಮೌನವಾಗಿ ನಡೆಯುತ್ತಿದೆ. ಈ ಯೋಜನೆಯಿಂದ ತಾಲ್ಲೂಕಿನ ನೀರಿನ ಕಷ್ಟ ಬಗೆಹರಿಸಬಹುದು ಎಂದು ಬೆಲೆ ಕಾವಲು ಸಮಿತಿ ಅಭಿಪ್ರಾಯಪಟ್ಟಿದೆ.

ನೀರಾವರಿ ಹೋರಾಟಗಾರ ಪ್ರೊ.ಕೆ.ಆರ್.ಬಸವರಾಜು ಅವರ ನೇತೃತ್ವದ ’ಯಗಚಿ ನದಿ ಹೆಚ್ಚುವರಿ ಪ್ರವಾಹ ನೀರನ್ನು ಕೆರೆಗಳಿಗೆ ತುಂಬಿಸುವ ಹೋರಾಟ ಸಮಿತಿ’ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಹ  ನೀಡಿದೆ. ಇದಕ್ಕೆ ರೈತ ಸಂಘದವರ ಬೆಂಬಲವೂ ಇತ್ತು. ಆದರೂ ಯೋಜನೆ ಜಾರಿಗೆ ಬರಲಿಲ್ಲ.

ಬೇಲೂರು ಬಳಿ ಹೇಮಾವತಿ ಉಪನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಗಚಿ ಜಲಾಶಯ ತುಂಬಿ ಹರಿದಾಗಲೆಲ್ಲ ಅದರ ಪ್ರವಾಹ ನೀರನ್ನು ತಾಲ್ಲೂಕಿಗೆ ತರಬಹುದಾಗಿದೆ.  ಅರಸೀಕೆರೆ ಮಾರ್ಗವಾಗಿ ಗುರುತ್ವಾಕರ್ಷಣೆಯ ಮೂಲಕವೇ ನೀರು ತರಬಹುದು. ಈ ಬಗ್ಗೆ ಹೆಚ್ಚಿನ ಅಧ್ಯಯನ, ಚರ್ಚೆಯಾಗಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

’ಜಲಾಶಯ ತುಂಬಿ ಹರಿದಾಗ 2 ರಿಂದ 3 ಟಿಎಂಸಿ ಅಡಿ ನೀರು ತರಬಹುದು. ಇಷ್ಟು ನೀರಿನಿಂದ ತಾಲ್ಲೂಕಿನ ಅಷ್ಟೂ ಕೆರೆಗಳನ್ನು ತುಂಬಿಸಬಹುದು. ಐದು ವರ್ಷಕ್ಕೊಮ್ಮೆ  ನೀರು ಕೊಟ್ಟರೂ ಸಾಕು’  ಎನ್ನುತ್ತಾರೆ ಬಸವರಾಜು.

ಯಗಚಿ ಜಲಾಶಯದಿಂದ ಹೊಳೆನರಸೀಪುರ, ಚಿಕ್ಕಮಗಳೂರು ಜಿಲ್ಲೆಯ ಕೆಲವು ಗ್ರಾಮಗಳಿಗೆ ನೀರು ಕೊಡಲಾಗಿದೆ. ಜಲಾಶಯ 3.5 ಟಿಎಂಸಿ ಅಡಿ ನೀರಿನ ಸಾಮರ್ಥ್ಯ ಹೊಂದಿದೆ. ಪ್ರವಾಹದ ಸಂದರ್ಭಗಳಲ್ಲಿ 9 ಟಿಎಂಸಿ ಅಡಿಯಷ್ಟು ನೀರು ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯಗಚಿಯ ಹಿಂಭಾಗದಲ್ಲಿ ಬರುವ ರಣಘಟ್ಟ ಗ್ರಾಮದಿಂದ ಪ್ರವಾಹ ನೀರನ್ನು ಬೇಲೂರು, ಅರಸೀಕೆರೆ ಮೂಲಕ ತಾಲ್ಲೂಕಿಗೆ ತರಬಹುದಾಗಿದೆ. ಹೈದರಾಬಾದ್‌ನ ಅಲ್ಟ್ರಾ ಕಂಪೆನಿಯವರು ಈ ಬಗ್ಗೆ ಸೆಟಲೈಟ್‌ ಸರ್ವೆ ಮಾಡಿ ವರದಿ ಸಹ ಸಿದ್ಧಪಡಿಸಿದ್ದರು.

ಜಲಾಶಯದಲ್ಲಿ ನೀರು ಇದ್ದರೂ ನೀರಿನ ಲಭ್ಯತೆ ಎಂದೇ ಕಾವೇರಿ ನೀರಾವರಿ  ನಿಗಮದ ಅಧಿಕಾರಿಗಳು ವಾದಿಸುತ್ತಿದ್ದಾರೆ. ಒಮ್ಮೆ, ನಿಗಮದವರೇ ₹120 ಕೋಟಿ ವೆಚ್ಚದ ಯೋಜನೆ ತಯಾರಿಸಿ ಕಡೇ ಗಳಿಗೆಯಲ್ಲಿ  ತಿಪಟೂರು ಕೈ ಬಿಟ್ಟರು. ಈ ಯೋಜನೆಯಡಿ ಬೇಲೂರಿಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ.  ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ  ಮುಖ್ಯಮಂತ್ರಿ ಇದ್ದಾಗ ಯೋಜನೆ ಜಾರಿ ಮಾಡುವ ಭರವಸೆ ನೀಡಿದ್ದರು. ಆದರೆ ಅದು ಕಾರ್ಯಗತಗೊಳ್ಳಲಿಲ್ಲ ಎಂದು ಹೋರಾಗಾರ ಕೆ.ಆರ್‌.ಬಸವರಾಜ ಹೇಳಿದರು.

’ ಕಾಂಗ್ರೆಸ್‌ ಸರ್ಕಾರ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರಿಗೂ ಮನವಿ ನೀಡಲಾಗಿತ್ತು.   ಅವರೂ ಸಹ ಭರವಸೆ ನೀಡಿದ್ದರು. ಆದರೂ ಯೋಜನೆ ಜಾರಿಯಾಗಲಿಲ್ಲ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು  ಬೇಸರ ವ್ಯಕ್ತಪಡಿಸಿದರು.

ತಿಪಟೂರಿಗೆ ಎಷ್ಟು ನೀರು ಬೇಕು?

ತಾಲ್ಲೂಕಿನಲ್ಲಿ  227 ಗ್ರಾಮಗಳಿವೆ. ವಾಡಿಕೆ 503 ಮಿಲಿ ಮೀಟರ್‌ ಮಳೆಯಾಗುತ್ತಿದೆ. ಒಟ್ಟು 161 ಕೆರೆಗಳಿವೆ. 1.057
ಟಿಎಂಸಿ ಅಡಿ ನೀರಿನಲ್ಲಿ ಇಷ್ಟೂ ಕೆರೆಗಳನ್ನು ತುಂಬಿಸಬಹುದು. ಒಟ್ಟು 50 ಸಾವಿರ ಹೆಕ್ಟೇರ್‌ನಲ್ಲಿ ಕೃಷಿ ನಡೆಯುತ್ತಿದೆ. ತಾಲ್ಲೂಕಿನ ಇಷ್ಟೂ ಕೃಷಿ ಭೂಮಿಯನ್ನು ನೀರಾವರಿಗೆ ಒಳಪಡಿಸಲು 8.170 ಟಿಎಂಸಿ ಅಡಿ ನೀರಿನ ಅಗತ್ಯವಿದೆ.

(ಆಧಾರ: ಪರಮಶಿವಯ್ಯ ವರದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT