ಬುಧವಾರ, ಸೆಪ್ಟೆಂಬರ್ 29, 2021
19 °C
ನಿತ್ಯ ಸಂಚಾರ ಸದಾ ಕಿರಿಕಿರಿ

ಸಂದರ್ಶನ l ಕಿರಿಕಿರಿ ಆರೋಪ ಮುಕ್ತಿಗೆ ಹೊಸ ವ್ಯವಸ್ಥೆ -ಬಿ.ಆರ್. ರವಿಕಾಂತೇಗೌಡ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಂಚಾರ ಪೊಲೀಸರು ವಾಹನಗಳನ್ನು ವಿನಾಕಾರಣ ಅಡ್ಡಗಟ್ಟಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಆರೋಪಗಳು ಹಲವು ದಿನಗಳಿಂದಲೂ ಕೇಳಿಬರುತ್ತಿವೆ. ಇಂಥ ಆರೋಪಗಳಿಂದ ಮುಕ್ತಿ ಪಡೆಯಲು ಹೊಸ ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೆ ತರಲು ಸಿದ್ಧತೆ ನಡೆದಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹೇಳಿದರು.

‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ‘ನಿತ್ಯ ಸಂಚಾರ – ಸದಾ ಕಿರಿಕಿರಿ’ ಸರಣಿ ವರದಿಗಳಿಗೆ ಪ್ರತಿಕ್ರಿಯಿಸಿರುವ ಅವರು, ವಿಶೇಷ ಸಂದರ್ಶನ ನೀಡಿದ್ದಾರೆ. ಅದರ ವಿವರ ಇಲ್ಲಿದೆ.

l ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪವಿದೆ. ಈ ಬಗ್ಗೆ ಕ್ರಮವೇನು?

ರವಿಕಾಂತೇಗೌಡ; ಕಣ್ಣಿಗೆ ಕಾಣುವ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಮಾತ್ರ ವಾಹನ ನಿಲ್ಲಿಸಿ ತಪಾಸಣೆ ನಡೆಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ದಟ್ಟಣೆ ಇರುವ ಸಮಯದಲ್ಲಿ ವಾಹನ ತಡೆಯದಂತೆಯೂ ಎಚ್ಚರಿಸಲಾಗಿದೆ. ಆಕಸ್ಮಾತ್, ಯಾರಾದರೂ ಪೊಲೀಸರು ವಿನಾಕಾರಣ ವಾಹನ ತಡೆದರೆ ನನಗೆ ದೂರು ನೀಡಬಹುದು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

l ವರ್ಷಗಟ್ಟಲೇ ಕಾದು ಪೊಲೀಸರು ದಂಡ ಸಂಗ್ರಹಿಸುತ್ತಿದ್ದಾರೆ. ಮೊದಲ ಬಾರಿಯೇ ಉಲ್ಲಂಘನೆ ಪ್ರಕರಣ ಗಮನಕ್ಕೆ ತಂದರೆ ಸಾರ್ವಜನಿಕರು ಮತ್ತೊಮ್ಮೆ ತಪ್ಪು ಮಾಡುವುದಿಲ್ಲ. ದಂಡ ಸಂಗ್ರಹ ಪ್ರಕ್ರಿಯೆ ಇಷ್ಟು ನಿಧಾನ ಏಕೆ?

ರವಿಕಾಂತೇಗೌಡ: ಪೊಲೀಸರು ಏಕಾಏಕಿ ವಾಹನ ಅಡ್ಡಗಟ್ಟಿ ಹಳೇ ಪ್ರಕರಣಗಳ ದಂಡ ಕೇಳುತ್ತಾರೆಂಬ ದೂರುಗಳು ಇವೆ. ತಮ್ಮ ವಾಹನದ ಮೇಲೆ ದಂಡ ಇರುವ ಮಾಹಿತಿಯೇ ತಮಗೆ ಗೊತ್ತಿರುವುದಿಲ್ಲವೆಂದು ಕೆಲವರು ತಿಳಿಸುತ್ತಿದ್ದಾರೆ. ಇದಕ್ಕೆ ಒಂದೇ ಪರಿಹಾರ, ನಿಯಮ ಉಲ್ಲಂಘನೆ  ಹಳೇ ಪ್ರಕರಣಗಳನ್ನು ವಾರಕ್ಕೊಮ್ಮೆ ಪರಿಶೀಲಿಸಿಕೊಳ್ಳುವುದು. ನಮ್ಮ ಜಾಲತಾಣದಲ್ಲಿ (http://bangaloretrafficpolice.gov.in) ಸಾಕ್ಷ್ಯ ಸಮೇತ ದಂಡ ಮಾಹಿತಿ ದೊರೆಯುತ್ತದೆ. ಜಾಲತಾಣದಲ್ಲಿ ವಾಹನದ ನೋಂದಣಿ ಸಂಖ್ಯೆ ನಮೂದಿಸಿ ಪ್ರಕರಣ ಪರಿಶೀಲಿಸಬಹುದು. ತಪ್ಪು ಮಾಹಿತಿ ದಾಖಲಾಗಿದ್ದರೆ ದೂರು ನೀಡಬಹುದು.

l ಕಮಿಷನರ್ ಹಾಗೂ ನೀವು ಸೂಚನೆ ನೀಡಿದರೂ ಸಂಚಾರ ಪೊಲೀಸರ ಕಿರಿಕಿರಿ ಮುಂದುವರಿದಿದೆ. ಇದಕ್ಕೆ ಪರಿಹಾರವಿಲ್ಲವೇ?

ರವಿಕಾಂತೇಗೌಡ: ಖಂಡಿತ ಇದೆ. ಇದಕ್ಕೊಂದು ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ನಿಯಮ ಉಲ್ಲಂಘಿಸುವ ಸಾರ್ವಜನಿಕರ ಮೊಬೈಲ್‌ಗೆ ತ್ವರಿತವಾಗಿ ಎಸ್‌ಎಂಎಸ್ ಕಳುಹಿಸಲು ತಯಾರಿ ನಡೆದಿದೆ. ಮುಖ್ಯಮಂತ್ರಿಯವರ ಬೆಂಗಳೂರು ವಿಷನ್–2022 ಅಡಿ ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ) ಹಾಗೂ ಹೆಚ್ಚು ದಟ್ಟಣೆಯ 12 ರಸ್ತೆಗಳಲ್ಲಿ ನಿಯಮ ಉಲ್ಲಂಘನೆಗಳನ್ನು ಸಂಪರ್ಕರಹಿತವಾಗಿ ಪತ್ತೆ ಮಾಡುವುದು ಹಾಗೂ ಸಂಪರ್ಕರಹಿತವಾಗಿ ದಂಡ ಸಂಗ್ರಹಿಸುವ ವ್ಯವಸ್ಥೆಯು ಸದ್ಯದಲ್ಲೇ ಜಾರಿಗೆ ಬರಲಿದೆ.

lದಂಡ ಸಂಗ್ರಹಿಸಲು ಪೊಲೀಸರಿಗೆ ಗುರಿ ನೀಡಲಾಗಿದೆಯಾ?

ರವಿಕಾಂತೇಗೌಡ; ದಂಡ ಸಂಗ್ರಹಿಸಲು ನಮಗೆ ಆಸಕ್ತಿ ಇಲ್ಲ. ದಂಡ ಹಾಕದ ರೀತಿಯಲ್ಲಿ ವಾಹನ ಸವಾರರು ರಸ್ತೆ ಮೇಲೆ ನಡೆದುಕೊಂಡರೆ ಅದಕ್ಕಿಂತ ಖುಷಿ ಸಂಗತಿ ಮತ್ತೊಂದಿಲ್ಲ. ಎಲ್ಲರೂ ನಿಯಮ ಪಾಲನೆ ಮಾಡಿದರೆ, ಅಪಘಾತಗಳು ಕಡಿಮೆಯಾಗಿ ಸಾವು ನೋವುಗಳು ತಪ್ಪುತ್ತವೆ.

lಸಿಗ್ನಲ್‌ಗಳು ಹಾಗೂ ಸಂಚಾರ ಸೂಚನಾ ಗುರುತುಗಳ ಎಡವಟ್ಟಿನಿಂದ ತಪ್ಪು ಮಾಡದವರಿಗೂ ದಂಡ ಬೀಳುತ್ತಿದೆಯಲ್ಲ?

ರವಿಕಾಂತೇಗೌಡ: ನಗರದ ಬಹುತೇಕ ಕಡೆ ಸಿಗ್ನಲ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆ. ಕ್ಯಾಮೆರಾಗಳು ಉತ್ತಮವಾಗಿವೆ. ಯಾವುದಾದರೂ ನಿರ್ದಿಷ್ಟ ಪ್ರಕರಣವಿದ್ದರೆ ನನಗೆ ದೂರು ನೀಡಬೇಕು. ತಪ್ಪು ಮಾಡದಿದ್ದರೆ ದಂಡ ಪಾವತಿಸುವ ಅಗತ್ಯವೂ ಇರುವುದಿಲ್ಲ.

lದಂಡ ಸಂಗ್ರಹಿಸುವ ಪೊಲೀಸರ ಮೇಲೆ ‘ಕ್ಯಾಮೆರಾ’ ಕಣ್ಣು ಏಕಿಲ್ಲ?

ರವಿಕಾಂತೇಗೌಡ: ದಂಡ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಪ್ರಯತ್ನಿಸಲಾಗುತ್ತಿದೆ. ಪ್ರತಿಯೊಬ್ಬ ಸಿಬ್ಬಂದಿಗೂ ಬಾಡಿವೋರ್ನ್‌ ಕ್ಯಾಮೆರಾ ನೀಡಲು ತೀರ್ಮಾನಿಸಲಾಗಿದೆ. ಮೂರು ತಿಂಗಳಿನೊಳಗೆ ಎಲ್ಲರಿಗೂ ಕ್ಯಾಮೆರಾ ವಿತರಿಸಲಾಗುವುದು. ದಂಡ ಸಂಗ್ರಹ ಪ್ರಕ್ರಿಯೆ ಕ್ಯಾಮೆರಾದಲ್ಲಿ ಸೆರೆಯಾಗಲಿದ್ದು, ಅದನ್ನು ಪರಿಶೀಲಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧವೂ ಕ್ರಮ ಜರುಗಿಸಲಾಗುವುದು.

lತಂತ್ರಜ್ಞಾನ ಬಹಳ ಬೆಳೆದಿದೆ. ದಂಡ ಪಾವತಿಸಿದ ರಶೀದಿ ಆನ್‌ಲೈನ್‌ನಲ್ಲಿ ಏಕೆ ಸಿಗುವುದಿಲ್ಲ?

ರವಿಕಾಂತೇಗೌಡ: ಈ ಬಗ್ಗೆ ಪರಿಶೀಲಿಸಲಾಗುವುದು.

l ಟೋಯಿಂಗ್ ಸಿಬ್ಬಂದಿ ದುರ್ವರ್ತನೆ ಹೆಚ್ಚುತ್ತಿದ್ದು, ಅದಕ್ಕೆ ಕೊನೆ ಇಲ್ಲವೇ?

ರವಿಕಾಂತೇಗೌಡ: ವಾಹನಗಳ ಟೋಯಿಂಗ್ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಲಾಗಿದೆ. ದುರ್ವರ್ತನೆ ಬಗ್ಗೆ ದೂರುಗಳು ಬಂದಾಗ, ಅಂಥ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಲಂಚ ಕೊಡುವುದನ್ನು ನಿಲ್ಲಿಸಿ’

‘ಸಂಚಾರ ನಿಯಮ ಉಲ್ಲಂಘನೆ ಮಾಡುವುದಲ್ಲದೇ, ಪೊಲೀಸರಿಗೆ ಲಂಚ ಕೊಟ್ಟು ವಾಹನ ಬಿಡಿಸಿಕೊಂಡು ಹೋಗುವವರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕಿದೆ. ಯಾರಿಗೂ ಲಂಚ ಕೊಡುವ ಅಗತ್ಯವಿಲ್ಲ. ಮೊದಲು ಲಂಚ ಕೊಡುವುದನ್ನು ನಿಲ್ಲಿಸಿ. ಒತ್ತಾಯದಿಂದ ಯಾರಾದರೂ ಪೊಲೀಸರು ಲಂಚ ಕೇಳಿದರೆ ನೇರವಾಗಿ ನನಗೆ ದೂರು ನೀಡಿ’ ಎಂದು ರವಿಕಾಂತೇಗೌಡ ಹೇಳಿದರು.

‘ದಂಡದ ಮೊತ್ತ ಹೆಚ್ಚಳವಾದಾಗಿನಿಂದ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ‘ಇದ್ದಷ್ಟು ಕೊಟ್ಟು ಹೋಗಿ’ ಎನ್ನುತ್ತಿದ್ದಾರಲ್ಲ’ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ‘ಜಾಲತಾಣ ಹಾಗೂ ಇ–ಮೇಲ್‌ ಮೂಲಕವೂ ದೂರು ನೀಡಬಹುದು. ಹೆಸರು ಗೋಪ್ಯವಾಗಿರಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ನಿಯಮ ಉಲ್ಲಂಘನೆ ಮಾಡುವ ಜನರು ಯಾರಿಗೂ ಲಂಚ ನೀಡಬಾರದು. ದಂಡವನ್ನು ಪಾವತಿಸಿ ರಶೀದಿ ಪಡೆಯಬೇಕು‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು