ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ: ಡ್ರೋನ್, ಸಿ.ಸಿ ಟಿ.ವಿ ಕ್ಯಾಮೆರಾ ಕಣ್ಗಾವಲು

ಹೆಣ್ಣುಮಕ್ಕಳ ತಂಟೆಗೆ ಹೋದ್ರೆ ಸಹಿಸುವುದಿಲ್ಲ –ಪೊಲೀಸ್‌ ಕಮಿಷನರ್
Last Updated 28 ಡಿಸೆಂಬರ್ 2019, 21:58 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯ ಜೊತೆ ಅನುಚಿತ ವರ್ತನೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲಿದ್ದಾರೆ. ಈ ಸಲುವಾಗಿ 7 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಇದೇ 31ರಂದು ರಾತ್ರಿ ಹೆಚ್ಚು ಜನರು ಸೇರುವ ಬ್ರಿಗೇಡ್‌ ರಸ್ತೆ, ಎಂ.ಜಿ. ರಸ್ತೆ ಹಾಗೂ ಕೋರಮಂಗಲದಲ್ಲಿ ಭದ್ರತೆಗೆ ಒತ್ತು ನೀಡಲಾಗಿದೆ.

ಇಲ್ಲೆಲ್ಲ ಭದ್ರತಾ ಗೋಪುರ ಹಾಗೂ 500ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾ ಗಳನ್ನು ಅಳವಡಿಸಲಾಗುತ್ತಿದೆ. ಡ್ರೋನ್‌ ಕ್ಯಾಮೆರಾಗಳ ಮೂಲಕವೂ ನಿಗಾ ಇಡಲಾಗುತ್ತದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ವಶಕ್ಕೆ ಪಡೆಯಲಿದ್ದೇವೆ’ ಎಂದರು.

‘ಭದ್ರತೆಗಾಗಿ ಸಿಬ್ಬಂದಿಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಖಾಸಗಿ ಭದ್ರತಾ ಏಜೆನ್ಸಿಗಳ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ. 270 ಹೊಯ್ಸಳ ವಾಹನಗಳು ಗಸ್ತು ತಿರುಗಲಿವೆ. ಅಪಾಯದ ಸಂದರ್ಭದಲ್ಲಿ ಸುರಕ್ಷತಾ ಆ್ಯಪ್‌ ಮೂಲಕ ಅಥವಾ ‘ನಮ್ಮ 100’ಕ್ಕೆ ಕರೆ ಮಾಡಿದರೆ ತ್ವರಿತವಾಗಿ ಸ್ಪಂದಿಸಲಾಗುವುದು’ ಎಂದು ಅವರು ಹೇಳಿದರು.

‘ಮದ್ಯ ಕುಡಿದು ಗಲಾಟೆ ಮಾಡಿದರೆ ವಶಕ್ಕೆ ಪಡೆಯಲಾಗುವುದು. ಹೆಣ್ಣು ಮಕ್ಕಳ ಮೈ ಮೇಲೆ ಬಿದ್ದು ಕಿರುಕುಳ ನೀಡಿದರೆ ಹಾಗೂ ದೌರ್ಜನ್ಯ ಎಸಗಿದರೆ ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು. ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಖಡಕ್ ಎಚ್ಚರಿಕೆ ನೀಡಿದರು.

ಎಚ್ಚರ ವಹಿಸಿ: ‘ಅಪರಿಚಿತರ ಜೊತೆ ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಇರಬೇಕು. ಪಾರ್ಟಿಗೆ ಹೋಗುವಾಗಲೂ ನಂಬಿಕೆ ಇರುವವರ ಜೊತೆಯಷ್ಟೇ ಹೋಗಬೇಕು. ಅಪರಿಚಿತರು ಮದ್ಯ ಹಾಗೂ ಆಹಾರ ಕೊಟ್ಟರೆ ತಿನ್ನಬಾರದು’ ಎಂದು ಭಾಸ್ಕರ್ ರಾವ್ ಕಿವಿಮಾತು ಹೇಳಿದರು.

‘ಕೆಲ ಹೋಟೆಲ್‌ಗಳಲ್ಲಿ ಮದ್ಯದ ಜೊತೆ ಮಾದಕ ವಸ್ತು ಬೆರೆಸುತ್ತಿರುವ ಮಾಹಿತಿ ಇದೆ. ಯಾರಾದರೂ ಆ ರೀತಿ ಮಾಡಿದರೆ ಸಿಸಿಬಿ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಿದೆ’ ಎಂದರು.

ಬಾರ್‌ ವಹಿವಾಟು ಅವಧಿ ವಿಸ್ತರಣೆ
‘ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್‌ಗಳ ವಹಿವಾಟು ಅವಧಿಯನ್ನು ಇದೇ 31ರ ರಾತ್ರಿ 1 ಗಂಟೆಯಿಂದ 2 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ’ ಎಂದು ಭಾಸ್ಕರ್ ರಾವ್ ಹೇಳಿದರು.

ರಾತ್ರಿ 2ರವರೆಗೆ ಮೆಟ್ರೊ ರೈಲು
ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರಿಗೆ ಅನುಕೂಲ ಕಲ್ಪಿಸುವ ಪ್ರಯುಕ್ತ ಇದೇ 31ರ ರಾತ್ರಿಯಿಂದ ಜ.1ರ ನಸುಕಿನ ಜಾವ 2 ಗಂಟೆವರೆಗೆ ಮೆಟ್ರೊ ರೈಲು ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.

ವಿಸ್ತರಿತ ಅವಧಿಯಲ್ಲಿ ರೈಲುಗಳು ಪ್ರತಿ 15 ನಿಮಿಷಗಳಿಗೊಮ್ಮೆ ಸಂಚರಿಸಲಿವೆ. ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದಿಂದ ಜ.1ರ ನಸುಕಿನ 2 ಗಂಟೆಗೆ ಎಲ್ಲ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲುಗಳು ಹೊರಡುತ್ತವೆ. ಅಂದರೆ, ಬೈಯಪ್ಪನಹಳ್ಳಿ ನಿಲ್ದಾಣ ಮತ್ತು ಹಾಗೂ ಯಲಚೇನಹಳ್ಳಿ ಮೆಟ್ರೊ ನಿಲ್ದಾಣಗಳಿಂದ ನಸುಕಿನ ಜಾವ 1.35ಕ್ಕೆ ಮೈಸೂರು ರಸ್ತೆ ನಿಲ್ದಾಣದಿಂದ 1.40ಕ್ಕೆ, ನಾಗಸಂದ್ರದಿಂದ 1.30ಕ್ಕೆ ಕೊನೆಯ ರೈಲು ಹೊರಡುತ್ತದೆ ಎಂದು ನಿಗಮ ತಿಳಿಸಿದೆ.

ಡಿ.31ರ ರಾತ್ರಿ 11.30 ನಂತರ, ಎಂ.ಜಿ. ರಸ್ತೆ, ಟ್ರಿನಿಟಿ ಮತ್ತು ಕಬ್ಬನ್‌ ಪಾರ್ಕ್‌ ನಿಲ್ದಾಣಗಳಿಂದ ಇತರ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ₹50ರ ಕಾಗದದ ಟಿಕೆಟ್‌ಗಳನ್ನು ವಿತರಿಸಲಾಗುವುದು ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

*
ಅಪಾಯದ ಸಂದರ್ಭದಲ್ಲಿ ಸುರಕ್ಷತಾ ಆ್ಯಪ್‌ ಮೂಲಕ ಅಥವಾ ‘ನಮ್ಮ 100’ಕ್ಕೆ ಕರೆ ಮಾಡಿದರೆ ತ್ವರಿತವಾಗಿ ಸ್ಪಂದಿಸಲಾಗುವುದು.
-ಭಾಸ್ಕರ್ ರಾವ್, ಪೊಲೀಸ್‌ ಕಮಿಷನರ್

ಪೊಲೀಸ್ ಬಲ
ಡಿಸಿಪಿ - 11
ಎಸಿಪಿ -70
ಇನ್‌ಸ್ಪೆಕ್ಟರ್ – 230
ಸಿಬ್ಬಂದಿ – 7000ಕ್ಕೂ ಹೆಚ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT