ಶನಿವಾರ, ಸೆಪ್ಟೆಂಬರ್ 18, 2021
24 °C
ಇಂದು ಪತ್ರಿಕಾ ವಿತರಕರ ದಿನ

ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಲು ಪತ್ರಿಕಾ ವಿತರಕರ ಹಕ್ಕೊತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳಿಗ್ಗೆ ಬಾಗಿಲು ತೆರೆಯುವ ಮುನ್ನ ದಿನ ಪತ್ರಿಕೆಗಳು ಮನೆ ಬಾಗಿಲಿಗೆ ತಲುಪಿರುತ್ತವೆ. ಎಲ್ಲರೂ ನಿದ್ರೆಯಿಂದ ಎಚ್ಚರವಾಗುವ ವೇಳೆಗೆ ಅವರ ಕೈಗೆ ಪತ್ರಿಕೆ ಸೇರುವಂತೆ ಮಾಡುವುದರ ಹಿಂದಿನ ಶ್ರಮ ಪತ್ರಿಕೆ ವಿತರಕರದ್ದು.

ಮಧ್ಯರಾತ್ರಿ ವೇಳೆಗೆ ಬಂದಿಳಿಯುವ ಪತ್ರಿಕೆಗಳನ್ನು ಬೆಳಗಿನ ಜಾವದ ಹೊತ್ತಿಗೆ ಮನೆ–ಮನೆಗಳಿಗೆ ತಲುಪಿಸುವ ಕೆಲಸವನ್ನು ಪತ್ರಿಕಾ ವಿತರಕರು ಮಾಡುತ್ತಿದ್ದಾರೆ. ಬೈಸಿಕಲ್‌ನ ಎರಡೂ ಕಡೆಯ ಹ್ಯಾಂಡಲ್‌ಗಳಿಗೆ ಪತ್ರಿಕೆಗಳು ತುಂಬಿದ ಬ್ಯಾಗ್ ನೇತು ಹಾಕಿಕೊಂಡು ಹೊರಟರೆ ಗುರಿ ತಲುಪುವುದೊಂದೇ ತವಕ.

ಕೊರೆವ ಚಳಿ ಇರಲಿ, ಸುರಿವ ಮಳೆಯಿರಲಿ ಲೆಕ್ಕಿಸದೆ ಮುನ್ನುಗುವ ಈ ಕಾಯಕ ನಿಷ್ಠರ ತೊಟ್ಟಿಕ್ಕುವ ಬೆವರ ಹನಿಗಳಿಗೆ ಲೆಕ್ಕವಿಲ್ಲ. ಮನೆ–ಮನೆಗೆ ಪತ್ರಿಕೆ ಹಂಚಿ ಮುಂದೆ ಸಾಗಿದಷ್ಟು ಸೈಕಲ್ ಮೇಲಿನ ಭಾರ ಮತ್ತು ಎದೆ ಭಾರ ಎರಡೂ ಇಳಿಯುತ್ತಾ ಸಾಗುತ್ತದೆ.

ದಾರಿಯಲ್ಲಿ ಸೈಕಲ್ ಚಕ್ರದ ಗಾಳಿ ಹೋಗಲಿ, ಚೈನು ತುಂಡಾಗಲಿ ಓದುಗ ನಿದ್ರೆಯಿಂದೇಳುವ ಹೊತ್ತಿಗೆ ಅವರ ಕೈಗೆ ಪತ್ರಿಕೆ ಮುಟ್ಟಿಸುವುದಷ್ಟೇ ವಿತರಕನ ಗುರಿ. ತನ್ನ ಗುರಿ ತುಲುಪುವ ತನಕ ಉಸಿರುಗಟ್ಟಿ ಸೈಕಲ್ ತುಳಿಯುವ ಈ ಪತ್ರಿಕಾ ವಿತರಕರ ಬುದುಕಿಗೆ ಭದ್ರತೆಯೇ ಇಲ್ಲ. ಈಗ ಕೆಲವರು ದ್ವಿಚಕ್ರ ವಾಹನಗಳನ್ನು ಬಳಸಿದರೂ ದುಡಿದ ಹಣದಲ್ಲಿ ಬಹುಪಾಲು ಪೆಟ್ರೋಲ್ ಖರ್ಚಿಗೆ ಸಮವಾಗುತ್ತಿದೆ.

ಬಹುತೇಕ ಬೆಳಗಾಗುವಷ್ಟರಲ್ಲಿ ಪತ್ರಿಕೆ ಹಂಚಿ ಮರೆಯಾಗುವ ಈ ಶ್ರಮ ಜೀವಿಗಳ ಬದುಕು ಮತ್ತು ಬವಣೆ ಸಮಾಜ ಮತ್ತು ಸರ್ಕಾರದ ಅರಿವಿಗೆ ಬರುವುದೇ ಇಲ್ಲ. ಅರಿವಿಗೆ ಬಂದರೂ ಕಿವಿಗೊಡುವ, ಜೊತೆಗೂಡುವ ಮನಗಳಿಲ್ಲ. ಪತ್ರಿಕೆಗಳ ಆರಂಭವಾದ ದಿನದಿಂದ ಈ ವೃತ್ತಿ ನಿರ್ವಹಿಸುತ್ತಿದ್ದರೂ, ಈ ಕಾಯಕ ಯೋಗಿಗಳು ಈ ತನಕ ಅಸಂಘಟಿತ ಕಾರ್ಮಿಕರ ಪಟ್ಟಿಯಲ್ಲೂ ಸೇರಿಲ್ಲ. ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಬೇಕು ಎಂಬ ಕೂಗು ಈ ವಲಯದಿಂದ ಆರಂಭವಾಗಿದೆ.

*
ಪತ್ರಿಕಾ ವಿತರಕರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ. ಲಾಕ್‌ಡೌನ್ ಸಂದರ್ಭದಲ್ಲೂ ಯಾವ ಸಹಾಯ ದೊರಕಲಿಲ್ಲ. ಕೂಲಿ ಕಾರ್ಮಿಕರ ರೀತಿ ಕಾರ್ಡ್‌ ಕೊಟ್ಟರೆ ಸರ್ಕಾರದಿಂದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ.
-ಸಂತೋಷ್ ಶೆಟ್ಟಿ, ವಿದ್ಯಾರಣ್ಯಪುರ

*
1970ನೇ ಇಸವಿಯಿಂದ ಪತ್ರಿಕೆ ವಿತರಕನ ಕೆಲಸ ಮಾಡುತ್ತಿದ್ದೇನೆ. ಅಂದಿನಿಂದ ಈವರೆಗೆ ಸರ್ಕಾರದಿಂದ ಯಾವುದೇ ಸವಲತ್ತು ನಮಗೆ ದೊರೆತಿಲ್ಲ. ನಮ್ಮ ವೃತ್ತಿ ಮತ್ತು ಕಷ್ಟಗಳನ್ನೂ ಸರ್ಕಾರ ಗುರುತಿಸಬೇಕು.
-ಆರ್. ಮುದ್ದುವೀರಯ್ಯ, ಬಸವನಗುಡಿ

*
ಈ ಕೆಲಸವನ್ನೇ ನಂಬಿದ ಸಾಕಷ್ಟು ಜನರಿದ್ದಾರೆ. ಆಟೋ ರಿಕ್ಷಾದವರಿಗೆ ನೀಡಿದಂತೆ ಪತ್ರಿಕಾ ವಿತರಿಕರಿಗೂ ಪ್ರೋತ್ಸಾಹಧನ ನೀಡಿದ್ದರೆ ಅನುಕೂಲ ಆಗು ತ್ತಿತ್ತು. ವಿಮಾ ಸೌಲಭ್ಯ ನೀಡಿದರೆ ಕುಟುಂಬಕ್ಕೆ ಅನುಕೂಲ ಆಗಲಿದೆ.
-ಎಂ.ಗೋಪಾಲಪ್ಪ, ಇಂದಿರಾನಗರ

*
ಪತ್ರಿಕಾ ವಿತರಕರನ್ನು ಮುಖ್ಯವಾಹಿನಿಗೆ ತರುವ ಕೆಲಸ ಈವರೆಗೆ ಆಗಿಲ್ಲ. ಅವರ ಬದುಕು,ವೃತ್ತಿಗೆ ಯಾವುದೇ ಭದ್ರತೆ ಇಲ್ಲ. ಬೆಳಗಿನ ಜಾವ ನಾಯಿ ಕಚ್ಚಿದರೂ ವೈದ್ಯಕೀಯ ನೆರವು ದೊರೆಯುತ್ತಿಲ್ಲ. ಕನಿಷ್ಠ ವಿಮಾ ಸೌಲಭ್ಯವನ್ನಾದರೂ ಸರ್ಕಾರ ಕಲ್ಪಿಸಬೇಕು.
-ನಾಗೇಶ್, ವೈಟ್‌ಫೀಲ್ಡ್

*
ಸರ್ಕಾರದ ಯಾವುದೇ ಸವಲತ್ತುಗಳು ನಮಗೆ ಸಿಕ್ಕಿಲ್ಲ. ಯಾರಿಗೆ ಕೇಳಬೇಕು ಎಂಬುದೂ ಗೊತ್ತಿಲ್ಲ. ಸರ್ಕಾರ ಅನು ದಾನ ನಿಗದಿ ಮಾಡಿತ್ತು ಎಂಬುದು ಗೊತ್ತು. ಆದರೆ, ಅದರಿಂದ ನಮಗೆ ಯಾವುದೇ ಸವಲತ್ತು ಬಂದಿಲ್ಲ.
-ಪುಟ್ಟರಾಜು, ಪದ್ಮನಾಭನಗರ

*
ಕೋವಿಡ್ ಸಂದರ್ಭದಲ್ಲಿ ಪತ್ರಿಕಾ ವಿತರಕರ ಆದಾಯಕ್ಕೆ ಹೊಡೆತ ಬಿದ್ದಿದೆ. ಎರಡು ವರ್ಷಗಳಿಂದ ಸಮಸ್ಯೆ ಹೇಳತೀರದಾಗಿದೆ. ಸರ್ಕಾರದಿಂದ ಯಾವುದೇ ಸಹಕಾರ ದೊರೆತಿಲ್ಲ. ಈಗಲಾದರೂ ಸರ್ಕಾರ ಪರಿಗಣಿಸಲಿ.
-ಬಸವರಾಜ ಪಾಟೀಲ, ರಾಜರಾಜೇಶ್ವರಿನಗರ

*
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪತ್ರಿಕಾ ವಿತರಕರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ನಿಗದಿ ಮಾಡಿದ್ದರು. ಆದರೆ, ಅದು ನಮ್ಮ ಸಮುದಾಯಕ್ಕೆ ತಲುಪಲೇ ಇಲ್ಲ. ನಮಗೂ ಸರ್ಕಾರ ಎಲ್ಲರಂತೆ ಸವಲತ್ತು ನೀಡಬೇಕು.
–ರಾಘವೇಂದ್ರ, ಪ್ಯಾಲೇಸ್ ಗುಟ್ಟಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು