ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕು ಮೂಡುವ ಮುನ್ನವೇ ಮೇಳೈಸಿದ ಸಂಭ್ರಮ

ನಗರದ ಹಲವೆಡೆ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ; ಕೇಕ್‌ ಕತ್ತರಿಸಿ ಖುಷಿಪಟ್ಟ ವಿತರಕರು
Last Updated 4 ಸೆಪ್ಟೆಂಬರ್ 2021, 21:21 IST
ಅಕ್ಷರ ಗಾತ್ರ

ಬೆಂಗಳೂರು: ಸೂರ್ಯನ ಹೊಂಗಿರಣಗಳು ಧರೆಗೆ ಮುತ್ತಿಕ್ಕುವ ಮುನ್ನವೇ ಮಹಾನಗರಿಯ ವಿವಿಧ ಭಾಗಗಳಲ್ಲಿ ಸಂಭ್ರಮ ಮೇಳೈಸಿತ್ತು. ಪ್ರತಿನಿತ್ಯ ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೆ ಕೆಲಸದಲ್ಲಿ ಮಗ್ನರಾಗಿರುತ್ತಿದ್ದ ಆ ಕಾಯಕ ಜೀವಿಗಳ ಮೊಗದಲ್ಲಿ ಮಂದಹಾಸ ಅರಳಿತ್ತು. ಅವರೆಲ್ಲಾ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಜೊತೆಗೆ ಸಿಹಿ ತಿನ್ನಿಸಿ ಖುಷಿಪಟ್ಟರು...

ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ ಕಾರಣದಿಂದ ನಗರದ ಹಲವೆಡೆ ಶನಿವಾರ ಮುಂಜಾನೆ ಕಂಡುಬಂದ ದೃಶ್ಯಗಳಿವು.

‌ಹಲವು ಸವಾಲುಗಳ ನಡುವೆಯೇ ನಿತ್ಯ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಈ ಶ್ರಮಜೀವಿಗಳು ನಸುಕಿನಲ್ಲೇ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ರಾಜರಾಜೇಶ್ವರಿ ನಗರದಲ್ಲಿ ಮಹಿಳಾ ಪತ್ರಿಕಾ ವಿತರಕರೂ ಕೇಕ್‌ ಕತ್ತರಿಸಿ ಖುಷಿಪಟ್ಟರು.

ವಿಜಯನಗರ, ಬಸವೇಶ್ವರ ನಗರ, ಇಂದಿರಾನಗರ, ಜಯನಗರ, ಹೆಬ್ಬಾಳ, ಯಲಹಂಕ, ಸಂಜಯನಗರ, ಜೆ.ಪಿ.ನಗರ, ಹನುಮಂತನಗರ, ಒಎಂಬಿಆರ್‌ ಬಡಾವಣೆ, ಎಚ್‌ಎಸ್‌ಆರ್‌ ಬಡಾವಣೆಗಳಲ್ಲಿ ಪತ್ರಿಕಾ ವಿತರಕರು ಮಕ್ಕಳಿಗೆ ಸಿಹಿ ಹಂಚಿದರು. ಹಲವು ವರ್ಷಗಳಿಂದ ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿತರಕರಿಗೆ ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು. ಕೆಲವೆಡೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

‘ಜೀವನ ಭದ್ರತೆ ಒದಗಿಸಲು ಕ್ರಮ’
ಬೆಂಗಳೂರು: ‘ಪತ್ರಿಕಾ ವಿತರಕರು ಅಪಾಯವನ್ನು ಮೈಮೇಲೆ ಎಳೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜೀವನ ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ಸಮಯದಲ್ಲೂ ಜೀವವನ್ನು ಲೆಕ್ಕಿಸದೆ ಕೆಲಸ ಮಾಡಿದವರನ್ನು ಕಡೆಗಣಿಸುವ ಮಾತೆ ಇಲ್ಲ. ವೃತ್ತಿಪರರಿಗೆ ಸಿಗುವ ಸವಲತ್ತುಗಳು ವಿತರಕರಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ವಿಜಯನಗರದಲ್ಲಿ ಶನಿವಾರ ಮುಂಜಾನೆ ಕೇಕ್‌ ಕತ್ತರಿಸಿ ಖುಷಿಪಟ್ಟ ವಿತರಕರು
ವಿಜಯನಗರದಲ್ಲಿ ಶನಿವಾರ ಮುಂಜಾನೆ ಕೇಕ್‌ ಕತ್ತರಿಸಿ ಖುಷಿಪಟ್ಟ ವಿತರಕರು

‘ವಿತರಕರು ಪತ್ರಿಕೆಯ ಅವಿಭಾಜ್ಯ ಅಂಗ’
‘ವಿತರಕರು ಪತ್ರಿಕೆಯ ಅವಿಭಾಜ್ಯ ಅಂಗ. ಪತ್ರಿಕೆಯ ಯಶಸ್ಸಿನಲ್ಲಿ ಸಂಪಾದಕರು ಹಾಗೂ ಸಂಪಾದಕೀಯ ವಿಭಾಗದಷ್ಟೇ ಮಹತ್ವದ ಪಾತ್ರ ವಿತರಕರದ್ದಾಗಿದೆ’ ಎಂದು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ತಿಳಿಸಿದರು.

‘ಆಹಾರ ಎಷ್ಟೇ ಸ್ವಾದಿಷ್ಟವಾಗಿರಲಿ, ಪ್ರೀತಿ ಹಾಗೂ ಕಾಳಜಿಯಿಂದ ಅದನ್ನು ಬಡಿಸದಿದ್ದರೆ ಅದು ನಾಲಿಗೆಗೆ ರುಚಿಸುವುದಿಲ್ಲ. ಹಾಗೆಯೇ ನಾವು ಎಷ್ಟೇ ಉತ್ತಮವಾದ ಪತ್ರಿಕೆ ರೂಪಿಸಿದರೂ ಕೂಡ ಅದನ್ನು ಸರಿಯಾದ ಸಮಯಕ್ಕೆ ಓದುಗರಿಗೆ ತಲುಪಿಸದಿದ್ದರೆ ಶ್ರಮ ವ್ಯರ್ಥ’ ಎಂದರು.

*
ಪತ್ರಿಕಾ ವಿತರಕರನ್ನು ಮುಖ್ಯವಾಹಿನಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅವರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗುತ್ತದೆ.
–ವಿ.ಸೋಮಣ್ಣ, ವಸತಿ ಸಚಿವ

ರಾಜರಾಜೇಶ್ವರಿ ನಗರದಲ್ಲಿ ಮಹಿಳಾ ಪತ್ರಿಕಾ ವಿತರಕರು ಕೇಕ್‌ ಕತ್ತರಿಸಿ ಸಂಭ್ರಮಿಸಿದರು
ರಾಜರಾಜೇಶ್ವರಿ ನಗರದಲ್ಲಿ ಮಹಿಳಾ ಪತ್ರಿಕಾ ವಿತರಕರು ಕೇಕ್‌ ಕತ್ತರಿಸಿ ಸಂಭ್ರಮಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT