ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ನಿಯಂತ್ರಣ ಮಂಡಳಿ ವರದಿಗೆ ಎನ್‌ಜಿಟಿ ಅಸಮಾಧಾನ

ಭುಜಂಗದಾಸನ ಹಳ್ಳಿ ಕೆರೆ ಪುನಶ್ಚೇತನ ಕಾರ್ಯ
Last Updated 5 ನವೆಂಬರ್ 2019, 19:48 IST
ಅಕ್ಷರ ಗಾತ್ರ

ನವದೆಹಲಿ: ಆನೇಕಲ್‌ ತಾಲ್ಲೂಕಿನ ಭುಜಂಗದಾಸನ ಹಳ್ಳಿಯಲ್ಲಿರುವ ಕೆರೆಯ ಪುನಶ್ಚೇತನಕ್ಕಾಗಿ ಕೈಗೊಳ್ಳಲಾದ ಕ್ರಮಗಳ ಕುರಿತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೆರೆಯ ದುಃಸ್ಥಿತಿ ಕುರಿತು ಸ್ಥಳೀಯ ನಿವಾಸಿ ವಿಜಯಕುಮಾರ್‌ ಅವರು ಸಲ್ಲಿಸಿರುವ ದೂರಿನ ವಿಚಾರಣೆ ನಡೆಸಿ ಕಳೆದ ಆಗಸ್ಟ್‌ನಲ್ಲಿ ಮಂಡಳಿಗೆ ನೋಟಿಸ್‌ ಜಾರಿ ಮಾಡಿದ್ದ ಎನ್‌ಜಿಟಿ, ಪುನಶ್ಚೇತನ ಕ್ರಮಗಳ ಬಗ್ಗೆ ಸಲ್ಲಿಸಲಾದ ವರದಿ ಸಮರ್ಪಕವಾಗಿಲ್ಲ ಎಂದು ಹೇಳಿದೆ.

ಕೆರೆಯ ಪುನಶ್ಚೇತನಕ್ಕೆ ಕೈಗೊಂಡ ಕ್ರಮಗಳು ತೃಪ್ತಿದಾಯಕವಾಗಿಲ್ಲ. ಕೆರೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡು, ಈ ಕುರಿತ ಪರಿಷ್ಕೃತ ವರದಿ ಸಲ್ಲಿಸಬೇಕು. ಕೂಡಲೇ ಕಾರ್ಯ ಪ್ರವೃತ್ತರಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸುವುದು ಅನಿವಾರ್ಯವಾಗಲಿದೆ ಎಂದು ನ್ಯಾಯಮೂರ್ತಿ ಆದರ್ಶಕುಮಾರ್‌ ನೇತೃತ್ವದ ಹಸಿರು ಪೀಠ ಎಚ್ಚರಿಸಿದೆ.

ಕೆರೆಗೆ ತ್ಯಾಜ್ಯ ಎಸೆಯುವುದನ್ನು ತಡೆಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಒತ್ತುವರಿ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಕೆರೆಯ ನೀರಿನ ಗುಣಮಟ್ಟ ನಿರ್ವಹಣೆ ಮತ್ತು ಮೇಲುಸ್ತುವಾರಿ ಬಗ್ಗೆ ವಿವರಿಸಲಾಗಿಲ್ಲ ಎಂದು ಪೀಠವು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ನೀರಿನ ಗುಣಮಟ್ಟದ ತಪಾಸಣೆಗಾಗಿ ಸಂಬಂಧಿಸಿದ ಯಾವುದೇ ಅಧಿಕಾರಿ ಕೆರೆಗೆ ಭೇಟಿ ನೀಡಿದ ವಿವರಗಳೂ ಇಲ್ಲ. ಕೆರೆಯ ಸಂರಕ್ಷಣೆ ನಿಟ್ಟಿನಲ್ಲಿ ಮಂಡಳಿಯು ಆಸಕ್ತಿ ತಾಳಿದ್ದು ಕಂಡುಬಂದಿಲ್ಲ. ಕೆರೆಯ ಸಂರಕ್ಷಣೆಗೆ ತಕ್ಷಣವೇ ಕ್ರಮ ಕೈಗೊಂಡು, ಪರಿಷ್ಕೃತ ವರದಿ ಸಲ್ಲಿಸುವಂತೆ ಸೂಚಿಸಿರುವ ಪೀಠ ನವೆಂಬರ್‌ 26ಕ್ಕೆ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT