ನವದೆಹಲಿ: ಕೋರಮಂಗಲ ಕಣಿವೆಯ ರಾಜಕಾಲುವೆ ವ್ಯಾಪ್ತಿಯಲ್ಲಿನ ಎಲ್ಲ ರೀತಿಯ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಉಸ್ತುವಾರಿ ಸಮಿತಿ ಸೂಚನೆ ನೀಡಿದೆ.
ಚಿಕ್ಕಲಾಲ್‌ಬಾಗ್‌ನಿಂದ ವರ್ತೂರು ಕೆರೆಯವರೆಗಿನ 11.4 ಕಿಲೋ ಮೀಟರ್ ಉದ್ದದ ಕೋರಮಂಗಲ ಕಣಿವೆಯ ರಾಜಕಾಲುವೆ ಅಭಿವೃದ್ಧಿಗೆ ಅಧಿಕಾರಿಗಳು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.
ರಾಜಕಾಲುವೆ ಅಭಿವೃದ್ಧಿ ಕುರಿತು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೇತೃತ್ವದ ಉಸ್ತುವಾರಿ ಸಮಿತಿ ಎನ್‌ಜಿಟಿಗೆ ವರದಿ ಸಲ್ಲಿಸಿದೆ.
ರಾಜಕಾಲುವೆಗಳ ಮೂಲ ಅಗಲವನ್ನು ಕಾಪಾಡಿಕೊಳ್ಳಬೇಕು ಮತ್ತು ಭಾರಿ ಮಳೆಯಾದ ಸಂದರ್ಭದಲ್ಲಿ ಪ್ರವಾಹವಾಗದಂತೆ ಯೋಜನೆ ರೂಪಿಸಬೇಕು. ಜತೆಗೆ, ರಾಜಕಾಲುವೆಗೆ ತ್ಯಾಜ್ಯ ಪ್ರವೇಶಿಸದಂತೆ ಸುಸ್ಥಿರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮಿತಿ ಸೂಚಿಸಿದೆ.
ಬೆಳ್ಳಂದೂರು ಕೆರೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಎನ್‌ಜಿಟಿ ಈ ಸಮಿತಿಯನ್ನು ರಚಿಸಿತ್ತು.