ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸೂರು: ಗುರುದ್ವಾರದಿಂದ ರಾಜಕಾಲುವೆ ಒತ್ತುವರಿ, ಎನ್‌ಜಿಟಿಗೆ ವರದಿ ಸಲ್ಲಿಕೆ

Last Updated 9 ನವೆಂಬರ್ 2022, 20:56 IST
ಅಕ್ಷರ ಗಾತ್ರ

ನವದೆಹಲಿ: ’ಹಲಸೂರಿನಲ್ಲಿ ಗುರುದ್ವಾರದ ಕಾಮಗಾರಿಗಾಗಿ ರಾಜಕಾಲುವೆ ಒತ್ತುವರಿ ಮಾಡಲಾಗಿದ್ದು, ಈ ಒತ್ತುವರಿಯನ್ನು ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್‌) ಸಹಕಾರದಲ್ಲಿ ತೆರವು ಮಾಡಲಾಗುತ್ತದೆ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ.

ಹಲಸೂರು ಕೆರೆಯ ಮೀಸಲು ಪ್ರದೇಶದಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಗುರುದ್ವಾರದವರು ಬಹು ಮಹಡಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಹಲಸೂರಿನ ಶಾಂತಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವಿವೇಕ್‌ ಎಂಬುವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಂಟಿ ಸಮಿತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಎನ್‌ಜಿಟಿ ನಿರ್ದೇಶನ ನೀಡಿತ್ತು. ಈ ಬಗ್ಗೆ ವರದಿ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೂ ಸೂಚನೆ ನೀಡಿತ್ತು. ಮಂಡಳಿಯು ಎನ್‌ಜಿಟಿಗೆ ಇದೀಗ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಒತ್ತುವರಿಯ ಬಗ್ಗೆ ಉಲ್ಲೇಖ ಇದೆ.

‘ಗುರುದ್ವಾರದ ಆಡಳಿತ ಮಂಡಳಿಯು 10 ಸಾವಿರ ಚದರ ಮೀಟರ್‌ ಪ್ರದೇಶದಲ್ಲಿ ‘ಗುರುದ್ವಾರ ಗುರು ಸಿಂಗ್‌ ಸಭಾ’ ಕಟ್ಟಡ ನಿರ್ಮಾಣ ಮಾಡುತ್ತಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನೂ ನಿರ್ಮಿಸುತ್ತಿದೆ. ರಾಜಕಾಲುವೆಯಲ್ಲಿ ಈ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಮಂಡಳಿಯಿಂದ ಅನುಮತಿ ಪಡೆಯದೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಬಗ್ಗೆ ಮಂಡಳಿಯು ಗುರುದ್ವಾರದ ಆಡಳಿತ ಮಂಡಳಿಗೆ ಜೂನ್‌ನಲ್ಲೇ ನೋಟಿಸ್‌ ನೀಡಿತ್ತು. ಈ ನೋಟಿಸ್‌ಗೆ ಈವರೆಗೆ ಉತ್ತರ ನೀಡಿಲ್ಲ’ ಎಂದು ಮಂಡಳಿಯ ಹಿರಿಯ ಪರಿಸರ ಅಧಿಕಾರಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ರಾಜಕಾಲುವೆ ಒತ್ತುವರಿ ಮಾಡಿರುವ ವಿಚಾರವು ಬಿಬಿಎಂಪಿಯ ಪೂರ್ವ ವಿಭಾಗದ ಮುಖ್ಯ ಎಂಜಿನಿಯರ್‌ (ಪೂರ್ವ ವಿಭಾಗ) ಅವರ ಗಮನಕ್ಕೆ 2021ರ ಫೆಬ್ರುವರಿಯಲ್ಲೇ ಬಂದಿತ್ತು. ಈ ಬಗ್ಗೆ ಅವರು ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಎಂಜಿನಿಯರ್‌ಗೆ ಸೂಚನೆ ನೀಡಿದ್ದರು. ರಾಜಕಾಲುವೆ ಗಡಿ ಗುರುತು ಮಾಡಲು ಸರ್ವೆ ನಡೆಸಬೇಕಿದ್ದು, ಸರ್ವೆಯರ್‌ಗಳನ್ನು ಒದಗಿಸುವಂತೆ ಮುಖ್ಯ ಎಂಜಿನಿಯರ್ ಅವರು ಜಿಲ್ಲಾಧಿಕಾರಿ ಅವರಿಗೆ ಈ ವರ್ಷದ ಜೂನ್‌ನಲ್ಲಿ ಪತ್ರ ಬರೆದಿದ್ದರು. ಆದರೆ, ಜಿಲ್ಲಾಡಳಿತ ಸರ್ವೆಯರ್‌ಗಳನ್ನು ಒದಗಿಸಿರಲಿಲ್ಲ. ಬಳಿಕ ಮತ್ತೊಮ್ಮೆ ಪತ್ರ ಬರೆದು ನೆನಪಿಸಲಾಗಿದೆ. ಸರ್ವೆಯರ್‌ಗಳು ಗಡಿ ಗುರುತು ಮಾಡಿದ ಬಳಿಕ ಒತ್ತುವರಿ ತೆರವು ಮಾಡಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ’ ಎಂದೂ ವರದಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುರುದ್ವಾರ ಆಡಳಿತ ಮಂಡಳಿ, ‘ಕಟ್ಟಡವನ್ನು 5 ಸಾವಿರ ಚದರ ಮೀಟರ್ ಜಾಗದಲ್ಲಷ್ಟೇ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯ ಇಲ್ಲ. ಜತೆಗೆ, ಗುರುದ್ವಾರವು ಹಲಸೂರು ಕೆರೆಯ ಕೆಳಭಾಗದಲ್ಲಿ ಇದೆ. ರಾಜಕಾಲುವೆಯ ಒತ್ತುವರಿಯನ್ನೂ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT