ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕಿತ ಉಗ್ರರ ಅಡ್ಡಗಳ ಮೇಲೆ ಏಕಕಾಲಕ್ಕೆ ಎನ್‌ಐಎ ದಾಳಿ

ಕರ್ನಾಟಕ ಮತ್ತು ತಮಿಳುನಾಡಿನ 25 ಕಡೆ ಶೋಧ
Last Updated 24 ಫೆಬ್ರುವರಿ 2020, 19:40 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆಯಿಂದ‍‍ಪ್ರೇರಣೆ ಪಡೆದು ಉಗ್ರಗಾಮಿ ಸಂಘಟನೆ ಹುಟ್ಟುಹಾಕಿ, ದೇಶದ್ರೋಹ ಚಟುವಟಿಕೆಗೆ ಸಂಚು ರೂಪಿಸಿದ್ದ ಶಂಕಿತ ಉಗ್ರರ 25ಕ್ಕೂ ಹೆಚ್ಚು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೋಮವಾರ ದಾಳಿ ನಡೆಸಿದೆ.

ಬೆಂಗಳೂರು, ಕೋಲಾರ ಸೇರಿದಂತೆ ಕರ್ನಾಟಕದ 15 ಸ್ಥಳಗಳು ಹಾಗೂ ತಮಿಳುನಾಡಿನ 10 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಆಗಿದ್ದು, ಶಂಕಿತ ಉಗ್ರರು ಹಿಂದೂ ಮುಖಂಡರನ್ನು ಕೊಲ್ಲುವ ಮೂಲಕ ಮತೀಯ ಗಲಭೆ ಹುಟ್ಟುಹಾಕಲು ಯೋಜನೆ ರೂಪಿಸಿದ್ದರು ಎಂದು ಎನ್‌ಐಎ ತಿಳಿಸಿದೆ.

ದಾಳಿಯ ವೇಳೆ 9 ಮೊಬೈಲ್, 5 ಸಿಮ್‌ ಕಾರ್ಡ್‌, 1 ಲ್ಯಾಪ್‌ಟಾ‍‍ಪ್‌, 2 ಹಾರ್ಡ್‌ ಡಿಸ್ಕ್‌, 4 ಸಿಡಿ/ಡಿವಿಡಿ ಡಿಸ್ಕ್‌, 18 ಪುಸ್ತಕಗಳು, ಒಂದು ಆಟೊ, ಸಿಡಿ ಮದ್ದು ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಶಂಕಿತ ಉಗ್ರರಾದ ಅಬ್ದುಲ್‌ ಸಮದ್‌, ಖ್ವಾಜಾ ಮೊಹಿದ್ದೀನ್‌, ಸೈಯದ್‌ ಅಲಿ ನವಾಸ್‌ ಹಾಗೂ ಜಾಫರ್‌ ಅಲಿ ಅವರು ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು.

ಈ ಸಂಬಂಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆ ನಂತರ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಮೆಹಬೂಬ್‌ ಪಾಷಾ, ಮೊಹಮ್ಮದ್ ಮನ್ಸೂರ್ ಅಲಿ ಖಾನ್‌, ಸಲೀಂ ಖಾನ್‌, ಜಬೀವುಲ್ಲಾ, ಸೈಯದ್‌ ಅಜ್ಮತ್‌ ಉಲ್ಲಾ ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ.

ವಶ‍ಪಡಿಸಿಕೊಂಡ ವಸ್ತುಗಳನ್ನು ಬೆಂಗಳೂರು ಮತ್ತು ಚೆನ್ನೈ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.

ಕೋಲಾರ ವರದಿ: ಶಂಕಿತ ಉಗ್ರನಿಗೆ ಆಶ್ರಯ ನೀಡಿದ ಆರೋಪದಡಿ ಬಂಧಿತರಾದವರ ಮನೆಗೆ ಎನ್‌ಐಎ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಆರು ಅಧಿಕಾರಿಗಳನ್ನು ಒಳಗೊಂಡ ಎನ್‌ಐಎ ತಂಡ ಶಂಕಿತ ಉಗ್ರನಿಗೆ ಆಶ್ರಯ ನೀಡಿದ ಕೋಲಾರದ ಪ್ರಶಾಂತ್ ನಗರದ ಮೊಹಮ್ಮದ್ ಜಹೀದ್ (24) ಹಾಗೂ ಬೀಡಿ ಕಾಲೊನಿ ನಿವಾಸಿ ಸಲೀಂ ಖಾನ್ (42) ಮನೆಯಲ್ಲಿ ತಪಾಸಣೆ ನಡೆಸಿತು. ಕಳೆದ ತಿಂಗಳು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಸಿಸಿಬಿ ಪೊಲೀಸರು ಶಂಕಿತ ಉಗ್ರ ಮೆಹಬೂಬ್ ಪಾಷನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತ ಕೋಲಾರದಲ್ಲಿ ಐದು ದಿನಗಳ ಕಾಲ ಆಶ್ರಯ ಪಡೆದಿದ್ದ ಮಾಹಿತಿ ಬಯಲಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT