ಮಂಗಳವಾರ, ನವೆಂಬರ್ 19, 2019
22 °C
ಸೋಲದೇವನಹಳ್ಳಿಯಲ್ಲಿ ಸ್ಫೋಟಕ ವಶಪಡಿಸಿಕೊಂಡ ಪ್ರಕರಣ; ಎನ್‌ಐಎ ಕ್ರಮ

ಕೋರ್ಟ್‌ಗೆ ಶಂಕಿತ ಉಗ್ರರು ಹಾಜರು

Published:
Updated:

ಬೆಂಗಳೂರು: ಚಿಕ್ಕಬಾಣಾವರದ ಹಳೇ ರೈಲ್ವೆ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ಈಚೆಗೆ ದಾಳಿ ನಡೆಸಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ಜಪ್ತಿ ಮಾಡಿ ಬಂಧಿಸಲಾಗಿದ್ದ ಆರು ಶಂಕಿತ ಉಗ್ರರ ಪೈಕಿ ಒಂದನೇ ಆರೋಪಿ ನಜೀರ್‌ ಶೇಖ್‌ ಹಾಗೂ ಐದನೇ ಆರೋಪಿ ಜಹೀದುಲ್ಲಾ ಇಸ್ಲಾಂ ಅವರನ್ನು ಶನಿವಾರ ಇಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಇನವಳ್ಳಿ ಅವರ ಮುಂದೆ ಭಾರಿ ಬಿಗಿ ಭದ್ರತೆಯಲ್ಲಿ ಹಾಜರುಪಡಿಸಲಾಯಿತು.

ನ್ಯಾಯಾಧೀಶರು ಆರೋಪಿಗಳನ್ನು ಸೋಮವಾರದವರೆಗೆ ಎನ್‌ಐಎ ವಶಕ್ಕೆ ನೀಡಿದ್ದಾರೆ. ಆನಂತರ ಈ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ. ಎರಡನೇ ಶನಿವಾರ ಕೋರ್ಟ್‌ಗೆ ರಜೆ ಇದ್ದುದ್ದರಿಂದ ನ್ಯಾಯಾಧೀಶರ ಗೃಹ ಕಚೇರಿಯಲ್ಲಿ ಆರೋಪಿಗಳನ್ನು ಹಾಜರುಪಡಿಸಲಾಯಿತು. ಎನ್‌ಐಎ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪಿ. ಪ್ರಸನ್ನ ಕುಮಾರ್‌ ಹಾಜರಾಗಿದ್ದರು.

ಹತ್ತು ಪೊಲೀಸರು, ಮೂವರು ಕಮಾಂಡೋಗಳು ಹಾಗೂ ಎನ್‌ಐಎ ಅಧಿಕಾರಿಗಳ ಬಿಗಿ ಬಂದೋಬಸ್ತ್‌ನಲ್ಲಿ ಆರೋಪಿಗಳನ್ನು ಬಿಹಾರದಿಂದ ಕರೆತರಲಾಗಿತ್ತು. ಬೆಂಗಳೂರು ಹಾಗೂ ಸುತ್ತಮುತ್ತಲ ಹಲವು ಸ್ಥಳಗಳಲ್ಲಿ ಬಾಂಬ್‌ ಸ್ಫೋಟಿಸಲು ಇವರು ಸಂಚು ರೂಪಿಸಿದ್ದರು’ ಎಂಬುದಾಗಿ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಸಂಬಂಧ ಬಂಧಿಸಿರುವ ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ (30) ಎಂಬಾತನನ್ನು ದೊಡ್ಡಬಳ್ಳಾಪುರದಲ್ಲಿ ಜೂನ್ 25ರಂದು ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಆಧರಿಸಿ ಎನ್‌ಐಎ ಅಧಿಕಾರಿಗಳು, ಚಿಕ್ಕಬಾಣಾವರದ ನಿವಾಸಿ ಮಸ್ತಾನ್ ಎಂಬುವರಿಗೆ ಸೇರಿದ್ದ ಬಾಡಿಗೆ ಮನೆ ಮೇಲೆ ದಾಳಿ ಮಾಡಿದ್ದರು.

‘ಶಂಕಿತ ಉಗ್ರ ಹಬೀಬುರ್‌ ಹಾಗೂ ಐವರು ಸಹಚರರು ಈ ಮನೆಯಲ್ಲಿ ವಾಸವಿದ್ದರು. ಮನೆಯಲ್ಲಿ ಶೋಧ ನಡೆಸಿದಾಗ, ಬಾಂಬ್‌ ತಯಾರಿಸಲು ಬೇಕಾದ ವಸ್ತುಗಳು, ಪುಸ್ತಕ ಹಾಗೂ ಪಿಸ್ತೂಲ್‌, ರಾಕೆಟ್‌ ಲಾಂಚರ್‌ ಪತ್ತೆಯಾಗಿದ್ದವು ಎಂದು ಎನ್‌ಐಎ ಅಧಿಕಾರಿಯೊಬ್ಬರು ದೂರು ನೀಡಿದ್ದರು. 

‘ಜಮಾತ್‌–ಉಲ್‌– ಮುಜಾ ಹಿದ್ದೀನ್‌ ಬಾಂಗ್ಲಾದೇಶ (ಜೆಎಂಬಿ)' ಸಂಘಟನೆಯ ಹಬೀಬುರ್‌  ಮತ್ತು ಆ ಸಂಘಟನೆಯ ಐವರು ಶಂಕಿತರ ವಿರುದ್ಧ ಅಪರಾಧ ಸಂಚು (ಐಪಿಸಿ 34), ದೇಶದ್ರೋಹ (121ಎ), ಹತ್ಯೆಯ ಸಂಚು (ಐಪಿಸಿ 120ಬಿ) ಹಾಗೂ ಕಾನೂನುಬಾಹಿರ ಚಟುವಟಿಕೆ ಪ್ರತಿಬಂಧಕ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

‘ವ್ಯಾಪಾರಿಗಳ ಸೋಗಿನಲ್ಲಿ ಶಂಕಿತರು ಮನೆ ಬಾಡಿಗೆಗೆ ಪಡೆದಿದ್ದರು. ‘ಪಶ್ಚಿಮ ಬಂಗಾಳದ ಐಜುಲ್ ಮೊಂಡಲ್ ಎಂಬಾತನ ಹೆಸರಿನಲ್ಲಿ ಮನೆ ಬಾಡಿಗೆಗೆ ಕೊಟ್ಟಿದ್ದೆ. ಆರಂಭದಲ್ಲಿ ಇಬ್ಬರೇ ಮನೆಯಲ್ಲಿ ಇರುವುದಾಗಿ ಹೇಳಿದ್ದರು. ಆನಂತರ ಯಾರ‍್ಯಾರೂ ಮನೆಗೆ ಬಂದು ಹೋಗುತ್ತಿದ್ದರು’ ಎಂದು ಹೇಳಿಕೆ ನೀಡಿರುವ ಮನೆ ಮಾಲೀಕ, ಶಂಕಿತ ಭಾವಚಿತ್ರಗಳನ್ನು ನೋಡಿ ಶಂಕಿತರನ್ನು ಗುರುತಿಸಿದ್ದರು.

ಪ್ರತಿಕ್ರಿಯಿಸಿ (+)