‘ಆನ್‌ಲೈನ್‌ ಸೇವೆಗೆ ಆದ್ಯತೆ’

ಗುರುವಾರ , ಜೂಲೈ 18, 2019
29 °C
ಬಿಡಿಎ ನೂತನ ಆಯುಕ್ತೆ ಮಂಜುಳಾ ಅಧಿಕಾರ ಸ್ವೀಕಾರ

‘ಆನ್‌ಲೈನ್‌ ಸೇವೆಗೆ ಆದ್ಯತೆ’

Published:
Updated:
Prajavani

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಚೇರಿಗಳಿಗೆ ಜನ ಪದೇ ಪದೇ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಆನ್‌ಲೈನ್‌ ಸೇವೆಗಳನ್ನು ಆರಂಭಿಸಲು ಆದ್ಯತೆ ನೀಡುತ್ತೇನೆ’ ಎಂದು ಬಿಡಿಎ ನೂತನ ಆಯುಕ್ತೆ ಎನ್.ಮಂಜುಳಾ ತಿಳಿಸಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜನರು ಕಚೇರಿಗೆ ಬರುವ ಬದಲು, ಆದಷ್ಟು ಮನೆಯಲ್ಲಿ ಕುಳಿತೇ ಸೇವೆ ಪಡೆಯುವಂತಾಗಬೇಕು. ಇದನ್ನು ಸಾಧಿಸುವುದಕ್ಕೆ ಅನೇಕ ಅವಕಾಶಗಳಿವೆ. ಅವುಗಳನ್ನು ಬಳಸಿಕೊಳ್ಳಬೇಕಷ್ಟೇ’ ಎಂದರು.

‘ನಗರಾಭಿವೃದ್ಧಿ ಹೊಣೆ ನನಗೆ ಹೊಸದೇನಲ್ಲ. ಹಿಂದೆ ಪೌರಾಡಳಿತ ನಿರ್ದೇಶನಾಲಯದಲ್ಲಿ ಮೂರು ವರ್ಷ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಬಿಡಿಎ ರಾಜ್ಯದ ಅತ್ಯಂತ ದೊಡ್ಡ ನಗರಾಭಿವೃದ್ಧಿ ಪ್ರಾಧಿಕಾರ. 1 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಈ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ವಿಚಾರಗಳಿವೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ನನ್ನ ಹೆಗಲಿಗೆ ದೊಡ್ಡ ಹೊಣೆ ವಹಿಸಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ತಂಡದ ಜೊತೆ ಸಮನ್ವಯದಿಂದ ಕೆಲಸ ಮಾಡುತ್ತೇನೆ’ ಎಂದರು.

ಬಿಡಿಎ ಜಮೀನುಗಳ ಕುರಿತು ಅಕ್ರಮ ದಾಖಲೆ ಸೃಷ್ಟಿಸಿ ಅನ್ಯರಿಗೆ ಮಾರಾಟ ಮಾಡಿದ್ದ ಪ್ರಕರಣಗಳನ್ನು ತನಿಖೆ ನಡೆಸುವಂತೆ ಈ ಹಿಂದಿನ ಆಯುಕ್ತ ರಾಕೇಶ್‌ ಸಿಂಗ್‌ ಸೂಚಿಸಿದ್ದರು. ಬಿಡಿಎಗೆ ಸೇರಿದ ಜಮೀನುಗಳ ಲೆಕ್ಕಪರಿಶೀಲನೆ ಪ್ರಕ್ರಿಯೆಯನ್ನೂ ಆರಂಭಿಸಿದ್ದರು.

‘ಇಂತಹ ಕಾರ್ಯಕ್ರಮಗಳ ಬಗ್ಗೆ ಅನುಭವಿ ಅಧಿಕಾರಿ ರಾಕೇಶ್‌ ಸಿಂಗ್‌ ಬಳಿ ಚರ್ಚಿಸುತ್ತೇನೆ. ಸುಧಾರಣಾ ಕಾರ್ಯಕ್ರಮಗಳನ್ನು ಮುಂದುವರಿಸುವ ಬಗ್ಗೆ ಅವರ ಸಲಹೆ ಪಡೆಯುತ್ತೇನೆ’ ಎಂದರು. 

ಎನ್‌.ಮಂಜುಳಾ ಅವರು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆಯಾಗಿ ಹಾಗೂ ಸಹಕಾರ ಸಂಘ‌ಗಳ ರಿಜಿಸ್ಟ್ರಾರ್‌ ಆಗಿಯೂ ಮುಂದುವರಿದಿದ್ದಾರೆ.    

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !