ಸೋಮವಾರ, ಮೇ 23, 2022
27 °C

ಕರಗದಲ್ಲಿ ಸಂಪ್ರದಾಯದ ಬದಲಾವಣೆ ಇಲ್ಲ: ಆರ್‌. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಕರಗ ಉತ್ಸವದ ಸಂಪ್ರದಾಯಗಳಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ. ಹಿಂದಿನಂತೆಯೇ ಉತ್ಸವ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಬೆಂಗಳೂರು ಕರಗಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದೆ ಹೇಗೆ ಉತ್ಸವ ನಡೆಯುತ್ತಿತ್ತೋ ಈಗಲೂ ಹಾಗೆಯೇ ನಡೆಯಬೇಕು. ಈ ವಿಚಾರದಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ. ಕರಗ ಉತ್ಸವ ಸಮಿತಿ ಅದನ್ನು ಈಗಾಗಲೇ ಸ್ಪಷ್ಟಪಡಿಸಿದೆ’ ಎಂದರು.

‘ದರ್ಗಾ ಆಮಂತ್ರಣದ ಮೇರೆಗೆ ಕರಗ ಉತ್ಸವ ದರ್ಗಾದ ಎದುರು ಸಾಗುತ್ತದೆ. ಅಲ್ಲಿ ಕರಗ ಸಾಗುವುದಕ್ಕೆ ಯಾವುದೇ ಸಮಸ್ಯೆಯೂ ಆಗಬಾರದು. ಗೃಹ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಕರಗದ ವೇಳೆ ಯಾವುದೇ ಗೊಂದಲ ಸೃಷ್ಟಿಯಾಗಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ಉತ್ಸವದಲ್ಲಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಅದ್ಯತೆ. ಕರಗ ಆಚರಣೆ ಸಂಬಂಧ ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಜತೆಗೂ ಚರ್ಚಿಸಲಾಗಿದೆ. ಬೆಂಗಳೂರಿನ ಕರಗಕ್ಕೆ ಕೆಂಪೇಗೌಡರ ಕೊಡುಗೆ ಇದೆ. ಅವರು ಬೆಂಗಳೂರನ್ನು ಕಟ್ಟಿದಾಗ ಇಲ್ಲಿರುವ ಎಲ್ಲ ಸಮುದಾಯಗಳ ಜನರಿಗೂ ವ್ಯಾಪಾರ, ವಹಿವಾಟು ನಡೆಸಲು ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದರು.

‘ಕೋಮು ಗಲಭೆಗೆ ಅವಕಾಶವಿಲ್ಲ’

‘ರಾಜ್ಯದಲ್ಲಿ ಕೋಮು ಗಲಭೆಗೆ ಅವಕಾಶ ನೀಡುವುದಿಲ್ಲ. ವ್ಯಾಪಾರ, ವಹಿವಾಟು ಹಿಂದೆ ಹೇಗೆ ನಡೆಯುತ್ತಿತ್ತೋ ಹಾಗೆಯೇ ಮುಂದುವರಿಯಬೇಕು’ ಎಂದು ಅಶೋಕ ಹೇಳಿದರು.

‘ಮಾವು ಖರೀದಿ ವಿಚಾರದಲ್ಲಿ ರೈತರು ಜಿಲ್ಲಾಧಿಕಾರಿ, ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ರೈತರು ಬೆಳೆದ ಹಣ್ಣುಗಳನ್ನು ಯಾರು ಬೇಕಾದರೂ ಖರೀದಿ ಮಾಡಬಹುದು. ಈ ವಿಚಾರದಲ್ಲಿ ಗೊಂದಲ ಇರಬಾರದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು