ಶನಿವಾರ, ಸೆಪ್ಟೆಂಬರ್ 18, 2021
29 °C
4 ವರ್ಷದ ಮಕ್ಕಳಿಗೂ ದಿನಕ್ಕೆ ಐದು ತಾಸು ಬೋಧನೆ * ಆರೋಗ್ಯ ತೊಂದರೆ ಎದುರಿಸುತ್ತಿರುವ ಚಿಣ್ಣರು

ಆನ್‌ಲೈನ್‌ ತರಗತಿ: ಈವರೆಗೆ ಮಾರ್ಗಸೂಚಿಯೇ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳೇ ಕಳೆದಿದ್ದರೂ, ಆನ್‌ಲೈನ್‌ ತರಗತಿಗಳನ್ನು ಹಮ್ಮಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸದ ಕಾರಣ ವಿದ್ಯಾರ್ಥಿಗಳು, ಪೋಷಕರು ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ ವರ್ಷ ರಾಜ್ಯ ಸರ್ಕಾರ ಆನ್‌ಲೈನ್‌ ತರಗತಿಗಳನ್ನು ನಡೆಸುವ ಕುರಿತು ಶಾಲೆಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ, ಈ ಬಾರಿ ಅಂತಹ ಯಾವುದೇ ಕ್ರಮವನ್ನು ಈವರೆಗೆ ಕೈಗೊಂಡಿಲ್ಲ. ಆನ್‌ಲೈನ್ ತರಗತಿಗಳನ್ನು ನಡೆಸುವ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಹೊಣೆಯನ್ನು ಖಾಸಗಿ ಶಾಲೆಗಳಿಗೇ ನೀಡಿರುವುದರಿಂದ ಮಕ್ಕಳ ಆರೋಗ್ಯದ ಕುರಿತು ಪೋಷಕರು ಆತಂಕಗೊಂಡಿದ್ದಾರೆ. ಕೆಲವು ಖಾಸಗಿ ಶಾಲೆಗಳು 4ರಿಂದ 6 ವರ್ಷಗಳ ಮಕ್ಕಳಿಗೆ ದಿನಕ್ಕೆ ಐದು ತಾಸಿನವರೆಗೆ ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಳ್ಳುತ್ತಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು  2020–21ನೇ ಶೈಕ್ಷಣಿಕ ವರ್ಷದಲ್ಲಿ ಪ್ರೊ.ಎಂ.ಕೆ. ಶ್ರೀಧರ್‌ ಸಮಿತಿಯು ನೀಡಿದ ವರದಿಯ ಆಧಾರದ ಮೇಲೆ ಆನ್‌ಲೈನ್‌ ತರಗತಿಯ ನಡೆಸುವ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿತ್ತು.

‘ಈವರೆಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸದ ಕಾರಣ ಖಾಸಗಿ ಶಾಲೆಗಳು ತಮಗೆ ತಿಳಿದಂತೆ ಆನ್‌ಲೈನ್‌ ತರಗತಿ ತೆಗೆದುಕೊಳ್ಳುತ್ತಿವೆ. ಮೊದಲನೇ ತರಗತಿಯ ವಿದ್ಯಾರ್ಥಿಗಳಿಗೇ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ನಿರಂತರವಾಗಿ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಕ್ಕಳಿಗೆ ತುಂಬಾ ಹೊರೆಯಾಗುತ್ತಿದೆ’ ಎಂದು ಪೋಷಕ ಪ್ರಶಾಂತ್ ರಾವ್‌ ದೂರಿದರು.

‘ಮಕ್ಕಳ ಕಲಿಕೆಗೆ ಇದು ಅಗತ್ಯ ಎಂದು ಶಾಲೆಯವರು ಹೇಳುತ್ತಿದ್ದಾರೆ. ಆದರೆ, ಮಕ್ಕಳು ನಿರಂತರವಾಗಿ ಮೊಬೈಲ್‌ ಫೋನ್‌ ಅಥವಾ ಕಂಪ್ಯೂಟರ್‌ ಪರದೆ ನೋಡುತ್ತಿರುವುದರಿಂದ ಕಣ್ಣಿಗೆ ತೊಂದರೆಯಾಗುತ್ತಿದೆ. ವೃಥಾ ಕಣ್ಣೀರು ಬರುತ್ತಿದೆ. ಬೆನ್ನು ಮತ್ತು ತಲೆನೋವು ಎಂದು ಮಕ್ಕಳು ಹೇಳುತ್ತಿದ್ದಾರೆ’ ಎಂದು ಅವರು ಹೇಳಿದರು. 

‘3ರಿಂದ 6 ವರ್ಷದ ಮಕ್ಕಳನ್ನು ಅಷ್ಟು ಬೇಗ ಸಜ್ಜುಗೊಳಿಸಿ, ಗಂಟೆಗಳ ಗಟ್ಟಲೇ ಕಂಪ್ಯೂಟರ್‌ ಮುಂದೆ ಕೂರಿಸುವುದು, ಕಲಿಸುವುದು ಉದ್ಯೋಗ ನಿರತ ಪೋಷಕರಿಗೆ ಸವಾಲೆನಿಸುತ್ತಿದೆ. ತೊಂದರೆಯೂ ಆಗುತ್ತಿದೆ’ ಎಂದು ಮತ್ತೊಬ್ಬ ಪೋಷಕಿ ರಿಶಿತಾ ರೈ ಹೇಳಿದರು.

‘ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸುತ್ತೇವೆ. ಶ್ರೀಧರ್‌ ಸಮಿತಿಯ ಶಿಫಾರಸುಗಳು ಈ ವರ್ಷವೂ ಅನ್ವಯವಾಗುತ್ತವೆಯೇ ಎಂದು ತಿಳಿದುಕೊಳ್ಳುತ್ತೇವೆ. ಅದೇ ಶಿಫಾರಸುಗಳು ಈ ವರ್ಷವೂ ಅನ್ವಯವಾಗುತ್ತವೆ ಎಂದರೆ, ಕೂಡಲೇ ಮಾರ್ಗಸೂಚಿಗಳನ್ನು ಹೊರಡಿಸುತ್ತೇವೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು