ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡವಿಲ್ಲದೇ ವ್ಯಾಪಾರವಿಲ್ಲ.. ಟ್ವಿಟರ್‌ನಲ್ಲಿ ಒಕ್ಕೊರಲ ಕೂಗು

Last Updated 31 ಡಿಸೆಂಬರ್ 2019, 2:46 IST
ಅಕ್ಷರ ಗಾತ್ರ

ಬೆಂಗಳೂರು: ‘ನೀವು ಮಾಹಿತಿಯನ್ನು ಕನ್ನಡದಲ್ಲಿ ನೀಡುವುದಿಲ್ಲವೇ, ಹಾಗಾದರೆ ನಿಮ್ಮ ಬಳಿ ವ್ಯಾಪಾರ ಮಾಡುವುದಿಲ್ಲ...’

ರಾಜ್ಯದಲ್ಲಿ ವ್ಯಾಪಾರದಲ್ಲಿ ತೊಡಗಿಸಿಕೊಂಡ ಕಂಪನಿಗಳಿಗೆ ಹಾಗೂ ಮಳಿಗೆಗಳಿಗೆ ಕನ್ನಡ ಪರ ಕಾಳಜಿ ಹೊಂದಿರುವ ಟ್ವಿಟ್ಟಿಗರು ಸೋಮವಾರ ನೀಡಿದ ಸಂದೇಶವಿದು. ‘ಕನ್ನಡ ಗ್ರಾಹಕರ ಕೂಟ’ ಹಮ್ಮಿಕೊಂಡಿದ್ದ ‘ಕನ್ನಡವಿಲ್ಲದೇ ವ್ಯಾಪಾರವಿಲ್ಲ’ (ನೋ ಕನ್ನಡ ನೋ ಬ್ಯುಸಿನೆಸ್‌ ಹ್ಯಾಷ್‌ಟ್ಯಾಗ್‌) ಟ್ವಿಟರ್‌ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಈ ಅಭಿಯಾನದಲ್ಲಿ ಕೈಜೋಡಿಸಿದಟ್ವಿಟ್ಟಿಗರು, ಅಂಗಡಿಗಳ ಹಾಗೂ ಸೇವಾ ಕಂಪನಿಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಎಂಬ ಬಿಬಿಎಂಪಿಯ ಆದೇಶವನ್ನು ಸಮರ್ಥಿಸಿಕೊಂಡರು. ನೆಲದ ಭಾಷೆಯಲ್ಲೇ ವ್ಯವಹರಿಸುವುದು ಏಕೆ ಅನಿವಾರ್ಯ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಕನ್ನಡದಲ್ಲಿ ವ್ಯವಹಾರ ನಡೆಸದ ಕಂಪನಿಗಳ ಹೆಸರನ್ನು ಉಲ್ಲೇಖಿಸಿ, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

‘ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರಬೇಕು ಎಂಬ ಆದೇಶ ಪ್ರಶ್ನಿಸಿ ಕೆಲವು ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿವೆ. ಕರ್ನಾಟಕದ ನೆಲ– ಜಲ ಬಳಸುವ ಕಂಪನಿಗಳು, ಈ ನಾಡಿನ ಭಾಷೆಯಲ್ಲಿ ಸೇವೆ ನೀಡುವುದಿಲ್ಲ ಎನ್ನುವುದು ದಾರ್ಷ್ಟ್ಯದ ಮಾತು. ಗ್ರಾಹಕರಿಲ್ಲದೇ ಯಾವುದೇ ವ್ಯವಹಾರ ನಡೆಸಲು ಸಾಧ್ಯವಿಲ್ಲ. ಕನ್ನಡ ಬಳಕೆಗೆ ಹಿಂದೇಟು ಹಾಕುವವರಿಗೆ ಗ್ರಾಹಕರ ಶಕ್ತಿ ಏನೆಂಬುದನ್ನು ತೋರಿಸಿಕೊಡುವ ಉದ್ದೇಶದಿಂದಲೇ ಈ ಟ್ವಿಟರ್‌ ಅಭಿಯಾನ ಆಯೋಜಿಸಿದ್ದೇವೆ’ ಎಂದು ಕನ್ನಡ ಗ್ರಾಹಕರ ಕೂಟದ ಬಾಬು ಅಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ ಸಿಗುವ ನಿಟ್ಟಿನಲ್ಲಿ ಸರ್ಕಾರ ಮತ್ತಷ್ಟು ಕಠಿಣ ಕಾನೂನು ರೂಪಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಕನ್ನಡ ಬಳಕೆ ಹೆಚ್ಚಿಸಲು ಸರ್ಕಾರ ನೀತಿ ನಿಯಮ ರೂಪಿಸುವುದು ಒಂದು ಕಡೆಯಾದರೆ, ಗ್ರಾಹಕರಿಂದ ಒತ್ತಡ ಹೇರುವುದು ಇದರ ಇನ್ನೊಂದು ಭಾಗ. ದುಡ್ಡು ಕೊಡುವವರು ಕೇಳಿದರೆ, ಅವರ ಭಾಷೆಯಲ್ಲೇ ಸೇವೆ ನೀಡುವುದು ಯಾವುದೇ ಕಂಪನಿಗಾದರೂ ಅನಿವಾರ್ಯ. ಡಬ್ಬಿಂಗ್‌ ಕುರಿತ ಹೋರಾಟದಲ್ಲಿ ನಾವಿದನ್ನು ನಿರೂಪಿಸಿ ತೋರಿಸಿದ್ದೇವೆ. ಕನ್ನಡ ನಾಡಿನಲ್ಲಿರುವ ಎಲ್ಲ ಮಳಿಗೆಗಳಲ್ಲೂ ಕನ್ನಡದಲ್ಲೇ ಸೇವೆ ನೀಡಿದರೆ ಅವರಿಗೇ ಒಳ್ಳೆಯದು’ ಎಂದು ಸಾಫ್ಟ್‌ವೇರ್ ತಂತ್ರಜ್ಞ ವಸಂತ ಶೆಟ್ಟಿ ಅಭಿಪ್ರಾಯಪಟ್ಟರು.

ಬಿಬಿಎಂಪಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಸಂಸ್ಥೆಯೊಂದು ಅಹಮದಾಬಾದ್‌ನಲ್ಲಿ ಹೊಂದಿರುವ ಮಳಿಗೆಯಲ್ಲಿ ಗುಜರಾತಿ ಭಾಷೆಯಲ್ಲಿ ನಾಮಫಲಕ ಹಾಕಿರುವ ಚಿತ್ರವನ್ನು ಟ್ವೀಟ್‌ ಮಾಡಿರುವ ಕಿರಣ್‌, ‘ನೀವು ಗುಜರಾತ್‌ನಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದೀರಾ? ಪ್ರದೇಶದಿಂದ ಪ್ರದೇಶಕ್ಕೆ ನಿಮ್ಮ ನಿಲುವು ಬದಲಾಗುತ್ತದೆಯೇ‘ ಎಂದು ಪ್ರಶ್ನೆ ಮಾಡಿದ್ದಾರೆ.

ರಮೇಶ್‌ ಬಿ.ಎನ್‌. ರಾವ್‌ ಅವರು, ‘ಕಾಸ್ಮೊಪಾಲಿಟನ್‌ ನಗರ’ ಎಂಬ ನೆಪ ಹೇಳಿ ಕಂಪನಿಗಳು ಸುರಕ್ಷತೆ ಮತ್ತು ಭದ್ರತಾ ಸಂದೇಶಗಳನ್ನೂ ಕನ್ನಡದಲ್ಲಿ ನೀಡದಿದ್ದರೆ ಹೇಗೆ? ಬೆಂಗಳೂರು ಎಂದರೆ ಕರ್ನಾಟಕವಲ್ಲ.ಪ್ಯಾರಿಸ್‌, ಟೋಕಿಯೊ, ಮ್ಯಾಡ್ರಿಡ್‌, ಬರ್ಲಿನ್‌, ಆ್ಯಮ್‌ಸ್ಟರ್‌ಡ್ಯಾಂನಂತಹ ಕಾಸ್ಮೊಪೊಲಿಟನ್‌ ನಗರಗಳಲ್ಲೂ ಜನರೂ ಸ್ಥಳೀಯ ಭಾಷೆಯಲ್ಲೇ ವ್ಯವಹರಿಸುತ್ತಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ನಿಮ್ಮದು ಸ್ಥಳೀಯ ಬ್ರ್ಯಾಂಡೋ ಅಥವಾ ಜಾಗತಿಕ ಬ್ರ್ಯಾಂಡೋ ಎಂಬುದು ಮುಖ್ಯವಲ್ಲ. ಇಲ್ಲಿ ಮಳಿಗೆ ಆರಂಭಿಸಿದ್ದೀರಿ ಎಂದರೆ ನೀವು ಸ್ಥಳೀಯ ಗ್ರಾಹಕರ ನೆಲೆಯನ್ನು ಗುರಿಯಾಗಿಸಿಕೊಂಡಿದ್ದೀರಿ ಎಂದರ್ಥ. ಬೆಂಗಳೂರು ಕನ್ನಡ ಗ್ರಾಹಕರ ನೆಲೆ. ನಮ್ಮ ಜೊತೆ ಕನ್ನಡದಲ್ಲಿ ವ್ಯವಹರಿಸದೇ ನಷ್ಟ ಅನುಭವಿಸುವುದು ನಿಮ್ಮ ಆಯ್ಕೆ’ ಎಂದು ಸುಹೃತ್‌ ಯಜಮಾನ್‌ ಅವರು ಸೂಚ್ಯವಾಗಿ ತಿಳಿಸಿದ್ದಾರೆ.

*
‘ಟ್ರೆಂಡಿಂಗ್‌ನಲ್ಲಿ ಆರನೇ ಸ್ಥಾನ’
ದೇಶದಲ್ಲಿ ಟ್ವಿಟರ್‌ ಟ್ರೆಂಡಿಂಗ್‌ನಲ್ಲಿ ‘ನೋ ಕನ್ನಡ ನೋ ಬ್ಯುಸಿನೆಸ್‌’ ಹ್ಯಾಷ್‌ಟ್ಯಾಗ್‌ ಆರನೇ ಸ್ಥಾನಕ್ಕೇರಿತ್ತು. ಈ ಅಭಿಯಾನ ಆರಂಭವಾದ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಟ್ರೆಂಡಿಂಗ್‌ನಲ್ಲಿ ಮುಂಚೂಣಿಯಲ್ಲಿತ್ತು. 300ಕ್ಕೂ ಅಧಿಕ ಖಾತೆದಾರರು ಈ ಹ್ಯಾಷ್‌ಟ್ಯಾಗ್‌ ಬಳಸಿ 6 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಹಂಚಿಕೊಂಡಿದ್ದರು.

**
ಗಮನ ಸೆಳೆದ ಟ್ವೀಟ್‌ಗಳು
ಕನ್ನಡಿಗರು ಮೃದು ಸ್ವಭಾವದವರು, ಸಂಘಟಿತರಲ್ಲ. ರಾಷ್ಟ್ರೀಯತೆಯ ಅಮಲಿನಲ್ಲಿದ್ದಾರೆ. ಹಿಂದಿ ಹೇರಿಕೆಗೆ ಒಗ್ಗಿ ಹೋಗಿದ್ದಾರೆ. ರಾಜಕೀಯವಾಗಿ ಬಲಹೀನರು. ಕನ್ನಡ ಪರ ಹೋರಾಟಗಾರರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ. ಈ ಎಲ್ಲವೂ ಉದ್ಯಮಿಗಳ ಕನ್ನಡ ವಿರೋಧಿ ನಿಲುವುಗಳಿಗೆ ಕಾರಣ.
-ಗಣೇಶ್‌ ಚೇತನ್‌

*
ಎಲ್ಲ ಟೆಲಿಕಾಲ್‌ಗಳಿಗೆ ಕನ್ನಡದಲ್ಲೇ ಉತ್ತರಿಸಿ. ಇದರಿಂದ ಮೂರು ಪ್ರಯೋಜನಗಳಿವೆ.
1. ಕನ್ನಡಿಗರಿಗೆ ಉದ್ಯೋಗ ಸಿಗುತ್ತದೆ.
2. ಕನ್ನಡೇತರರು ಕನ್ನಡ ಕಲಿಯಲು ಉತ್ತೇಜನ ನೀಡಿದಂತಾಗುತ್ತದೆ.
3. ವ್ಯವಹರಿಸುವಾಗ ನಿಮಗೆ ಅರ್ಥವಾಗದ ಭಾಷೆಯಿಂದಾಗಿ ನೀವು ವಂಚನೆಗೊಳಗಾಗುವುದು ತಪ್ಪುತ್ತದೆ.
–ನಂದಿ ಜೆ.ಹೂವಿನ ಹೊಳೆ

**
ಅಲ್ಲ ಸಿವಾ ಅಂಗಡಿ ಹೆಸರೇ ತಿಳಿಯದೆ ಇದ್ದರೆ ಯಾವ ಅಂಗಡಿ ಅಂತ ಹೇಗೆ ಗೊತ್ತಾಗೋದು? ಬ್ರ್ಯಾಂಡ್ ಬ್ರ್ಯಾಂಡ್ ಅಂತ ಬಡ್ಕೋತೀರಾ, ಬ್ರ್ಯಾಂಡ್ ಹೆಸರು ಗೊತ್ತಾಗೋದು ಬೇಡ್ವಾ?
–ಸುಹೃತ ಯಜಮಾನ್‌

**
ಸ್ಥಳೀಯ ಭಾಷೆಯನ್ನು ಕಡೆಗಣಿಸುವ ಗ್ರಾಹಕರು ಕಠಿಣ ನಿರ್ಧಾರ ತಳೆಯಬೇಕು. ಬೇರೆ ದೇಶಗಳಲ್ಲಿ ಸ್ಥಳೀಯ ಭಾಷೆ ಬಳಸುವುದಕ್ಕೆಈ ಕಂಪನಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕರ್ನಾಟಕದಲ್ಲಿ ಈ ವಿಚಾರದಲ್ಲಿ ಹಿಂದೇಟು ಹಾಕುವುದು ಪಕ್ಷಪಾತಿ ಧೋರಣೆಯಲ್ಲದೇ ಮತ್ತೇನೂ ಅಲ್ಲ.
–ಮೋಹನ ಮೂರ್ತಿ

**
ಮಳಿಗೆಗಳ ಹಾಗೂ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ಬಿಬಿಎಂಪಿ ನಿರ್ಧಾರ ಸರಿಯಾದುದು. ಇದನ್ನು ಪ್ರಶ್ನಿಸುವ ಸಂಸ್ಥೆಗಳಿಗೆ ‘ಕನ್ನಡವಿಲ್ಲದೇ ವ್ಯಾಪಾರವಿಲ್ಲ’ ಎಂದು ಕನ್ನಡಿಗರೆಲ್ಲರೂ ಸಂದೇಶ ರವಾನಿಸಬೇಕು.
–ಸಂದೀಪ್‌ ಕಂಬಿ

**
ಕರ್ನಾಟಕದ ಯಾವುದೇ ಮೂಲೆಯಲ್ಲಿ ಯಾರು ಬೇಕಾದರೂ ವ್ಯಾಪಾರ ಮಾಡಬಹುದು, ಆದರೆ, ಈ ನೆಲದ ಭಾಷೆಯನ್ನು ಗೌರವಿಸುವ ಕನಿಷ್ಠ ಸಾಮಾನ್ಯ ಜ್ಞಾನವನ್ನು ಅವರು ಹೊಂದಿರಬೇಕು. ಇಲ್ಲಿ ಕನ್ನಡ ಕರ್ನಾಟಕ ಮತ್ತು ಕನ್ನಡಿಗನೇ ಮೊದಲು.
–ಪುನೀತ್‌ ಗೌಡ

**
ನೀವು ವ್ಯಾಪಾರ ನಡೆಸುವ ನೆಲದ ಭಾಷೆಯನ್ನು ಹಾಗೂ ಜನರನ್ನು ಗೌರವಿಸದಿದ್ದರೆ ಅದು ಸ್ವಯಂವಿನಾಶಕ್ಕೆ ದಾರಿಯಾಗಲಿದೆ.
–ರತೀಶ ಬಿ.ಆರ್‌

**
ವ್ಯಾಪಾರದಲ್ಲಿ ಯಶಸ್ಸುಗಳಿಸುವಲ್ಲಿ ಮಹತ್ತರ ಪಾತ್ರವಹಿಸುವುದು ‘ಗ್ರಾಹಕರ ಸಂತೃಪ್ತಿ’. ನೀವು ನಿಮ್ಮ ಗ್ರಾಹಕರ ಭಾವನೆಗಳಿಗೆ ಅಗೌರವ ತೋರಿಸುತ್ತೀರಿ ಎಂದಾದರೆ ಅದರ ಪರಿಣಾಮವನ್ನು ಎದುರಿಸುತ್ತೀರಿ.
–ಶರತ್ ದುಂಡಳ್ಳಿ ಲಿಂಗರಾಜೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT