ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಯಲ್ಲಿ ರಾಜಕೀಯ ಇಲ್ಲ: ಅಡ್ವೋಕೇಟ್‌ ಜನರಲ್‌

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ ಅರ್ಜಿ ವಿಚಾರಣೆ l ಸರ್ಕಾರದಿಂದ ನಿಲುವು ಪ್ರತಿಪಾದನೆ
Last Updated 9 ಸೆಪ್ಟೆಂಬರ್ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದಂತೆ 243 ವಾರ್ಡ್‌ಗಳ ಮೀಸಲು ನಿಗದಿಗೆ ಭೌಗೋಳಿಕ ವಿಸ್ತೀರ್ಣ ಮತ್ತು 2011ರ ಜನಗಣತಿ ಆಧಾರದಲ್ಲಿ ನ್ಯಾಯೋಚಿತ ಮಾರ್ಗಗಳನ್ನು ಅನುಸರಿಸಲಾಗಿದೆ‘ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ವಾರ್ಡ್‌ಗಳ ಮರು ವಿಂಗಡಣೆ ಅಧಿಸೂಚನೆ ಪ್ರಶ್ನಿಸಿ ಶಾಸಕರಾದ ಸೌಮ್ಯಾ ರೆಡ್ಡಿ ಮತ್ತು ಬಿ.ಝಡ್. ಜಮೀರ್ ಅಹ್ಮದ್ ಖಾನ್ ಸೇರಿ 10ಕ್ಕೂ ಹೆಚ್ಚು ‍ಪ್ರತ್ಯೇಕ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ‘ವಾರ್ಡ್ ಮರು ವಿಂಗಡಣೆ ವೇಳೆ ಜನಸಂಖ್ಯೆ ಪ್ರಮಾಣವನ್ನು ಪರಿಗಣಿಸುವಲ್ಲಿ ಸರ್ಕಾರ ತಾರತಮ್ಯ ಎಸಗಿದೆ ಮತ್ತು ಈ ಮೂಲಕ ಬಿಬಿಎಂಪಿ ಕಾಯ್ದೆ-2020ರ ಕಲಂ 7 ಅನ್ನು ಉಲ್ಲಂಘಿಸಲಾಗಿದೆ’ ಎಂಬ ಅರ್ಜಿದಾರರ ಆಕ್ಷೇಪಣೆಯನ್ನು ಬಲವಾಗಿ ಅಲ್ಲಗಳೆದರು.

‘ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವಾರ್ಡ್‌ ವಿಂಗಡಣೆಯನ್ನು
ಶೇ 10ರಂತೆ 34 ಸಾವಿರದಿಂದ 39 ಸಾವಿರ ಜನಸಂಖ್ಯೆಯ ಆಧಾರದಲ್ಲಿ ಮರು ವಿಂಗಡಣೆ ಮಾಡಲಾಗಿದೆ. ಕೆಲವೆಡೆ ವಾರ್ಡ್‌ಗಳು ಭೌಗೋಳಿಕವಾಗಿ ಪುಟ್ಟ ವಿಸ್ತೀರ್ಣದವಾಗಿದ್ದು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದರೆ, ಮತ್ತೆ ಕೆಲವೆಡೆ ಭೌಗೋಳಿಕವಾಗಿ ವಿಶಾಲವಾದ ವಾರ್ಡ್‌ಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಹೀಗಾಗಿ, ಈ ಅಸಮತೋಲನವನ್ನು ಶೇ 10ರ ಪ್ರಮಾಣದಂತೆ ಹೊಂದಿಸುವ ಮೂಲಕ ವಿಂಗಡಣೆ ನಡೆಸಲಾಗಿದೆ’ ಎಂದರು.

‘ಮರು ವಿಂಗಡಣೆಯಲ್ಲಿ ರಾಜಕೀಯ ದುರುದ್ದೇಶ ಅಡಗಿದೆ’ ಎಂಬ ಅರ್ಜಿದಾರ ಜಮೀರ್‌ ಅಹಮದ್‌ ಪರ ವಕೀಲರ ಆರೋಪವನ್ನು ತಳ್ಳಿ ಹಾಕಿದ ಪ್ರಭುಲಿಂಗ ನಾವದಗಿ, ‘ಪ್ರತಿಪಕ್ಷದ ಶಾಸಕರು ಪ್ರತಿನಿಧಿಸುತ್ತಿರುವ ಚಾಮರಾಜಪೇಟೆ, ಶಿವಾಜಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಿದ್ದರೆ, ಅದೇ ಪಕ್ಷದವರು ಪ್ರತಿನಿಧಿಸುತ್ತಿರುವ ಬ್ಯಾಟರಾಯನಪುರ, ಬಿಟಿಎಂ ಲೇಔಟ್, ಸರ್ವಜ್ಞ ನಗರ, ದಾಸರಹಳ್ಳಿ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ಸಮಜಾಯಿಷಿ ನೀಡಿದರು.

‘ಮರುವಿಂಗಡಣೆಯ ಮಾನ ದಂಡಗಳೇನು, ಯಾಕೆ ಇಷ್ಟೊಂದು ಅಂತರ’ ಎಂಬ ನ್ಯಾಯಪೀಠದ ಪ್ರಶ್ನೆಗೆ, ‘2011ರ ಜನಗಣತಿ ಆಧಾರದಲ್ಲೇ ಜನಸಂಖ್ಯೆ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದರು.

ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ‘ಆಯೋಗ ಈಗಾಗಲೇ ತನ್ನ ನಿಲುವನ್ನು ಕೋರ್ಟ್‌ಗೆ ಸ್ಪಷ್ಟವಾಗಿ ತಿಳಿಸಿದೆ. ಈ ವಿಚಾರದಲ್ಲಿ ಅರ್ಜಿದಾರರ ಪರ ವಕೀಲರು ಮತ್ತೆ ಮತ್ತೆ ತಕರಾರು ತೆಗೆಯುವುದು ಸಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ಈಗ ನಿಗದಿಪಡಿಸಲಾಗಿರುವ ಮರುವಿಂಗಡಣೆಯ ಅನುಸಾರವೇ ಚುನಾವಣೆ ನಡೆಸಬೇಕು. ಏನಾದರೂ ಆಕ್ಷೇಪಣೆ ಅಥವಾ ಲೋಪದೋಷಗಳು ಇದ್ದಲ್ಲಿ ಅದನ್ನು ಮುಂದಿನ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಬಹುದು. ಚುನಾಯಿತ ಪ್ರತಿನಿಧಿಗಳಲ್ಲದೆ ಪಾಲಿಕೆಯನ್ನು ಆಡಳಿತಾಂಗದ ಕೈಯಲ್ಲಿ ನಡೆಸಿಕೊಂಡು ಹೋಗುವುದು ಸೂಕ್ತವಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಕೋರ್ಟ್‌ ಕಲಾಪದ ಅವಧಿ ಪೂರ್ಣಗೊಂಡ ಕಾರಣ ನ್ಯಾಯಮೂರ್ತಿಗಳು ವಿಚಾರಣೆಯನ್ನು ಇದೇ 13ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT