ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಪೂರ್ಣಗೊಳ್ಳದೆ ನೋಂದಣಿ ಇಲ್ಲ: ರೇರಾ ಮಧ್ಯಂತರ ಆದೇಶ

Last Updated 30 ಸೆಪ್ಟೆಂಬರ್ 2020, 19:46 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಯೋಜನೆ ಅಥವಾ ಕಟ್ಟಡ ಪೂರ್ಣಗೊಂಡು, ಎಲ್ಲ ಮೂಲಸೌಲಭ್ಯ ಕಲ್ಪಿಸುವವರೆಗೆ ಕ್ರಯಪತ್ರಅಥವಾ ನೋಂದಣಿ ಮಾಡಿಸಲು ಬಿಲ್ಡರ್‌ಗಳು ಖರೀದಿದಾರರ ಮೇಲೆ ಒತ್ತಡ ಹೇರಬಾರದು ಎಂದು ಕರ್ನಾಟಕ ರಿಯಲ್‌ ಎಸ್ಟೇಟ್‌ ಪ್ರಾಧಿಕಾರ (ರೇರಾ) ಬುಧವಾರ ಮಧ್ಯಂತರ ಆದೇಶ ನೀಡಿದೆ.

ಜೈನ್‌ ಹೈಟ್ಸ್‌ನ ಮೆಟ್ರಿಕ್‌ ಇನ್‌ಫ್ರಾ ಪ್ರಾಜೆಕ್ಸ್‌ ಕಂಪನಿಯ ವಿರುದ್ಧ ಜೈನ್‌ ಹೈಟ್ಸ್‌ ಈಸ್ಟ್‌ ಪರೇಡ್‌ ಖರೀದಿದಾರರ ಕ್ಷೇಮಾಭಿವೃದ್ಧಿ ಸಂಸ್ಥೆಯ ಸದಸ್ಯರು ನೀಡಿದ ದೂರಿಗೆ ಸಂಬಂಧಿಸಿದಂತೆ ರೇರಾ ಈ ಆದೇಶ ನೀಡಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಕಗ್ಗದಾಸಪುರದ 7 ಎಕರೆ ಪ್ರದೇಶದಲ್ಲಿ ‘ಜೈನ್‌ ಹೈಟ್ಸ್ ಈಸ್ಟ್‌ ಪರೇಡ್‌’ ಅಪಾರ್ಟ್‌ಮೆಂಟ್ ಸಮುಚ್ಚಯ ತಲೆ ಎತ್ತಿದೆ.

‘ಈ ಅಪಾರ್ಟ್‌ಮೆಂಟ್‌ನಲ್ಲಿ ಒಳಚರಂಡಿ ವ್ಯವಸ್ಥೆ, ವಿದ್ಯುತ್‌ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ಒದಗಿಸಿಲ್ಲ. 200 ಮನೆಗಳಲ್ಲಿ ಜನ ವಾಸವಾಗಿದ್ದಾರೆ. ಉಳಿದ ಮನೆಗಳು ಪೂರ್ಣಗೊಂಡಿಲ್ಲ. ಬಿಲ್ಡರ್‌ಗಳು ಎಲ್ಲರೂ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಒತ್ತಡ ಹೇರುತ್ತಿದ್ದರು. ಹೀಗಾಗಿ, ನಿವಾಸಿಗಳು ರೇರಾ ಮೊರೆ ಹೋಗಿದ್ದರು’ ಎಂದು ಮನೆ ಖರೀದಿದಾರರ ಪರ ಹೋರಾಡುವ ‘ಫೋರಂ ಫಾರ್‌ ಪೀಪಲ್‌ ಕಲೆಕ್ಟಿವ್ ಎಫರ್ಟ್ಸ್‌’ನ ಸ್ಥಾಪಕ ಸದಸ್ಯರಾದ ಭಾಗ್ಯಲಕ್ಷ್ಮಿ ಹೇಳಿದರು.

‘ಸ್ವಾಧೀನಾನುಭವ ಪತ್ರ ಕೊಡದೆ ನೋಂದಣಿ ಮಾಡಿಸಬಾರದು ಎಂದು ಪ್ರಾಧಿಕಾರ ಹೇಳಿದೆ. ಅಲ್ಲದೆ, ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ರಿಜಿಸ್ಟ್ರೇಶನ್‌ ಅವರ (ಐಜಿಆರ್‌) ಗಮನಕ್ಕೂ ಈ ಪ್ರಕರಣವನ್ನು ತಂದಿದ್ದು, ಇಂತಹ ಬಿಲ್ಡರ್‌ಗಳು ಯೋಜನೆಗಳನ್ನು ಪೂರ್ಣಗೊಳಿಸದೆ ಇದ್ದರೆ ಅಥವಾ ಮೂಲಸೌಲಭ್ಯ ಕಲ್ಪಿಸದೆ ಇದ್ದರೆ ನೋಂದಣಿಗೆ ಅವಕಾಶ ನೀಡಬಾರದು ಎಂದು ಹೇಳಲಾಗಿದೆ’ ಎಂದು ಅವರು ತಿಳಿಸಿದರು.

‘ಯೋಜನೆಗಳನ್ನು ಪೂರ್ಣಗೊಳಿಸದೆ ಇರುವ ಬಿಲ್ಡರ್‌ಗಳಿಗೆ ಈ ಆದೇಶದಿಂದ ಒಂದು ಸ್ಪಷ್ಟ ಸಂದೇಶ ಹೋದಂತಾಗಿದೆ. ಖರೀದಿದಾರರ ಹಿತ ಕಾಪಾಡಿದಂತಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ರೇರಾ ಮುಖ್ಯಸ್ಥ ಎಂ.ಆರ್. ಕಾಂಬ್ಳೆ ನೇತೃತ್ವದಲ್ಲಿ ಸದಸ್ಯರಾದ ಡಾ.ವಿಷ್ಣುವರ್ಧನ ರೆಡ್ಡಿ ಹಾಗೂ ಅದೋನಿ ಸೈಯದ್‌ ಸಲೀಂ ಒಳಗೊಂಡ ವಿಚಾರಣಾ ಪೀಠ ಈ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT