ಭಾನುವಾರ, ಡಿಸೆಂಬರ್ 8, 2019
21 °C

ಮೆಟ್ರೊದಲ್ಲಿ ಸಿಬ್ಬಂದಿ ಇಲ್ಲ: ಪ್ರಯಾಣಿಕರ ಕಷ್ಟ ಕೇಳೋರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟ್ರಾಫಿಕ್‌ ಕಿರಿಕಿರಿ ತಪ್ಪಿಸಿ, ಸಮಯವನ್ನು ಉಳಿತಾಯ ಮಾಡುವ ಮೂಲಕ ನಗರದ ಜನರಿಗೆ ವರವಾದ ‘ನಮ್ಮ ಮೆಟ್ರೊ’ ರೈಲು ಈಗೀಗ ಸಮಸ್ಯೆಗಳ ಆಗರವೇ ಆಗುತ್ತಿದೆ. ತಾಂತ್ರಿಕ ದೋಷಗಳಿಂದ ಅನೇಕ ಬಾರಿ ಟ್ರ್ಯಾಕ್‌ನ ಮಧ್ಯದಲ್ಲೇ ನಿಲ್ಲುವುದು, ಪಿಲ್ಲರ್‌ಗಳಲ್ಲಿನ ಸಮಸ್ಯೆಯಿಂದ ಅಲ್ಲಲ್ಲೇ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ಇದರೊಂದಿಗೆ ಈಗ, ರೀಚಾರ್ಜ್ ಕೌಂಟರ್‌ಗಳಲ್ಲಿನ ಸಿಬ್ಬಂದಿ ಕೊರತೆ ಪ್ರಯಾಣಿಕರಿಗೆ ಸಮಸ್ಯೆ ತಂದೊಡ್ಡಿದೆ.

ಮೊದಲು, ಮೆಟ್ರೊ ರೀಜಾರ್ಚ್ ಕೌಂಟರ್‌ಗಳಲ್ಲಿ ಇಬ್ಬರಿಂದ ಮೂವರು ಸಿಬ್ಬಂದಿ ಇರುತ್ತಿದ್ದರು. ಆದರೆ ಈಗ ಒಬ್ಬರೇ ಇರುತ್ತಾರೆ. ಗ್ರಾಹಕರ ಸಹಾಯಕ ಕೌಂಟರ್‌ನಲ್ಲೂ ಮೊದಲು ರೀಜಾರ್ಚ್ ಮಾಡಿಸಬಹುದಾಗಿದ್ದು, ಈಗ ಆ ಅವಕಾಶವೂ ಇಲ್ಲವಾಗಿದೆ.

ಬೈಯ್ಯಪ್ಪನಹಳ್ಳಿ, ಎಂ.ಜಿ. ರಸ್ತೆ, ಮೈಸೂರು ರಸ್ತೆ, ಮೆಜೆಸ್ಟಿಕ್‌ನಂತಹ ಪ್ರಮುಖ ನಿಲ್ದಾಣಗಳಲ್ಲಿ ಎರಡು ಟಿಕೆಟ್ ಕೌಂಟರ್‌ಗಳಿದ್ದರೂ ಬೆಳಗಿನ ಹೊತ್ತು ಒಂದು ಕೌಂಟರ್ ಸಂಪೂರ್ಣವಾಗಿ ಮುಚ್ಚಿರುತ್ತದೆ. ಕೇವಲ ಮಧ್ಯಾನ್ಹದ ನಂತರ ಕೆಲ ನಿಲ್ದಾಣಗಳಲ್ಲಿ ಕೌಂಟರ್ ತೆರೆದಿರುತ್ತವೆ.

ಜನನಿಬಿಡ ಪ್ರದೇಶವಾದ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಒಂದು ಭಾಗದ ಸ್ವಯಂಚಾಲಿತ ಶುಲ್ಕ ಸಂಗ್ರಹ ಗೇಟ್ (ಎಎಫ್‌ಸಿ) ಸಂಪೂರ್ಣವಾಗಿ ಮುಚ್ಚಿ ನಾಲ್ಕೈದು ತಿಂಗಳುಗಳೇ ಕಳೆದಿವೆ.

ಸಿಬ್ಬಂದಿ ಕೊರತೆಯ ಬಗ್ಗೆ ಮೆಟ್ರೊ ಸಿಬ್ಬಂದಿಯನ್ನು ಕೇಳಿದರೆ ‘ಜನದಟ್ಟಣೆ ಇರುವ ಸಮಯದಲ್ಲಿ ಕೌಂಟರ್‌ಗಳಲ್ಲಿ ಇಬ್ಬರು ಇರುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ಒಬ್ಬರೇ ಇರುತ್ತಾರೆ’ ಎನ್ನುತ್ತಾರೆ.

ಸಂಜೆ ವೇಳೆ, ವಾರಾಂತ್ಯದಲ್ಲಿ ಹೆಚ್ಚುವ ಸರತಿ ಸಾಲು

ಸಂಜೆ ಹಾಗೂ ವಾರಾಂತ್ಯದ ವೇಳೆ ಬೈಯ್ಯಪ್ಪನಳ್ಳಿ, ಮೆಜೆಸ್ಟಿಕ್, ಎಂ.ಜಿ.ರಸ್ತೆ, ಮಂತ್ರಿ ಮಾಲ್, ಮೈಸೂರು ರಸ್ತೆ, ಜಯನಗರದಂತಹ ಪ್ರಮುಖ ನಿಲ್ದಾಣಗಳಲ್ಲಿ ಟೋಕನ್ ಪಡೆದುಕೊಳ್ಳಲು ಜನ ಹೆಚ್ಚು ಹೊತ್ತು ಸಾಲಿನಲ್ಲಿ ನಿಂತಿರುತ್ತಾರೆ. ಕಾರ್ಡ್ ಪಡೆದು ಪಯಣಿಸಿ, ಇದರಿಂದ ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಬಹುದು ಎಂದು ಮೆಟ್ರೊ ನಿಲ್ದಾಣಗಳಲ್ಲಿ ಘೋಷಣೆ ಮಾಡಲಾಗುತ್ತದೆ. ಆದರೆ ಅಪರೂಪಕ್ಕೊಮ್ಮೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ಗ್ರಾಹಕರು ‘ನಮಗೆ ಕಾರ್ಡ್‌ನ ಅವಶ್ಯಕತೆ ಇಲ್ಲ, ಟೋಕನ್‌ ಉತ್ತಮ. ಆದರೆ ಸರದಿಯಲ್ಲಿ ನಿಲ್ಲುವುದು ಕಷ್ಟ’ ಎನ್ನುತ್ತಾರೆ.

'ಕೌಂಟರ್‌ನಲ್ಲಿ ಒಬ್ಬರೇ ಟಿಕೆಟ್ ನೀಡುವವರು ಇರುವ ಕಾರಣಕ್ಕೆ ತೊಂದರೆಯಾಗುತ್ತಿದೆ. ಕೆಲವೊಮ್ಮೆ 10–15 ನಿಮಿಷಗಳ ಕಾಲ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪ್ರಯಾಣಿಕ ಸುಜಯ್‌.

ಗ್ರಾಹಕ ಸೇವಾ ಕೇಂದ್ರ ಸಮಸ್ಯೆ

ಪ್ರತಿ ನಿಲ್ದಾಣಗಳಲ್ಲೂ ಎರಡರಿಂದ ಮೂರು ಗ್ರಾಹಕ ಸೇವಾ ಕೇಂದ್ರಗಳಿವೆ. ಮೊದಲೆಲ್ಲಾ ಪ್ರತಿ ಕೇಂದ್ರದಲ್ಲೂ ಸಿಬ್ಬಂದಿಗಳಿರುತ್ತಿದ್ದರು. ಈ ಕೇಂದ್ರವು ಎಎಫ್‌ಸಿ ಗೇಟ್‌ ಬಳಿಯೇ ಇರುವುದರಿಂದ ಗೇಟ್ ತೆರೆದುಕೊಳ್ಳುವಲ್ಲಿ, ಟೋಕನ್ ಅಥವಾ ಕಾರ್ಡ್‌ನಲ್ಲಿ ಸಮಸ್ಯೆ ಬಂದಲ್ಲಿ ತಕ್ಷಣ ಸಿಬ್ಬಂದಿ ನೆರವಿಗೆ ಧಾವಿಸುತ್ತಿದ್ದರು. ಆದರೆ ಈಗ ಅನೇಕ ನಿಲ್ದಾಣಗಳಲ್ಲಿ ಒಂದು ಗ್ರಾಹಕ ಸೇವಾ ಕೇಂದ್ರದಲ್ಲಿ ಮಾತ್ರ ಸಿಬ್ಬಂದಿ ಇರುತ್ತಾರೆ. ಕೆಲವೊಮ್ಮೆ ಟೋಕನ್, ಕಾರ್ಡ್‌ನಲ್ಲಿ ಸಮಸ್ಯೆಯಾಗಿ ಗೇಟ್ ತೆರೆಯುವುದೇ ಇಲ್ಲ. ಟೋಕನ್ ಕಳೆದು ಹೋಗಬಹುದು. ಅಂತಹ ಸಂದರ್ಭದಲ್ಲಿ ಕಣ್ಣೆದುರೇ ಮೆಟ್ರೊ ರೈಲು ನಿಂತಿದ್ದರೂ ಹೋಗಲು ಸಾಧ್ಯವಾಗುವುದಿಲ್ಲ. ಆಗ ಇನ್ನೊಂದು ಬದಿಯಲ್ಲಿರುವ ಗ್ರಾಹಕ ಕೇಂದ್ರಕ್ಕೆ ತೆರಳಿ ಸಮಸ್ಯೆ ಪರಿಹರಿಸಿಕೊಳ್ಳಬೇಕು.

ಅಪ್‌ಡೇಟ್‌ ಆಗದ ತಂತ್ರಜ್ಞಾನ

ತಂತ್ರಜ್ಞಾನಕ್ಕೆ ತಕ್ಕಂತೆ ಮುಂದುವರಿದಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ ಸಿಎಲ್) ಆನ್‌ಲೈನ್ ರೀಚಾರ್ಜ್ ವ್ಯವಸ್ಥೆ ಜಾರಿಗೊಳಿಸಿದೆ. ನಿಗಮದ ವೈಬ್‌ಸೈಟ್‌ಗೆ ತೆರಳಿ ಅಲ್ಲಿ ನಿಮ್ಮ ಕಾರ್ಡ್ ಸಂಖ್ಯೆ ನಮೂದಿಸಿ ರೀಚಾರ್ಜ್‌ ಮಾಡಿಕೊಳ್ಳಬಹುದು. ಆದರೆ ಸಮಸ್ಯೆ ಎಂದರೆ, ರೀಚಾರ್ಜ್‌ ಮಾಡಿಸಿಕೊಂಡ ಒಂದು ಗಂಟೆಯ ನಂತರ ಮೊತ್ತ ನಿಮ್ಮ ಕಾರ್ಡ್‌ಗೆ ಕ್ರೆಡಿಟ್ ಆಗುತ್ತದೆ. ತಕ್ಷಣಕ್ಕೆ ಬೇಕೆಂದರೆ ನಾವು ಕೌಂಟರ್ ಬಳಿ ಹೋಗಿಯೇ ನಿಲ್ಲಬೇಕು, ಅಲ್ಲಿ ಸರದಿಯಲ್ಲಿ ಕಾಯಲೇಬೇಕು. ದೇಶದ ಉಳಿದ ಕೆಲವು ಮೆಟ್ರೊ ನಿಗಮಗಳಲ್ಲಿ ಪೇಟಿಎಂ, ಫೋನ್ ಪೇ ಮುಂತಾದ ಆ್ಯಪ್‌ಗಳ ಮೂಲಕ ಕಾರ್ಡ್ ರೀಜಾರ್ಚ್ ಮಾಡುವ ವ್ಯವಸ್ಥೆ ಇದ್ದು ‘ನಮ್ಮ ಮೆಟ್ರೊ’ದಲ್ಲೂ ಈ ವ್ಯವಸ್ಥೆ ಜಾರಿಗೊಳಿಸಿದರೆ ಜನರ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಗಬಹುದು.

ಇದ್ದರೂ ಇಲ್ಲದಂತಿರುವ ಮಷಿನ್

ಮಾನವ ಸಂಪನ್ಮೂಲ ಕಡಿಮೆ ಮಾಡುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಪ್ರತಿ ನಿಲ್ದಾಣದಲ್ಲೂ ರೀಜಾರ್ಚ್ ಮಷಿನ್‌ಗಳನ್ನು ಇರಿಸಿದೆ. ಆದರೆ ಅದು ಇರಿಸಿದ ದಿನದಿಂದ ಇಂದಿನವರೆಗೆ ಒಂದು ದಿನವೂ ಕಾರ್ಯ ನಿರ್ವಹಿಸಿಲ್ಲ. ಈ ಬಗ್ಗೆ ಮೆಟ್ರೊ ಸಿಬ್ಬಂದಿಯನ್ನು ಕೇಳಿದರೆ ತಾಂತ್ರಿಕ ಕಾರಣಗಳಿಂದ ಸದ್ಯಕ್ಕೆ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ಅದರ ಬಳಕೆ ನಿಮಗೆ ಲಭ್ಯವಾಗುತ್ತದೆ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು