ಶುಕ್ರವಾರ, ನವೆಂಬರ್ 15, 2019
20 °C
ಕಟಕಟೆಯಲ್ಲಿ ಕೂರಿಸಿ ವಿಚಾರಣೆ ನಡೆಸಲು ಸಿಟಿ ಸಿವಿಲ್ ಕೋರ್ಟ್‌ ಸುತ್ತೋಲೆ

ಆರೋಪಿಗಳು ಕೈಕಟ್ಟಿ ನಿಲ್ಲಬೇಕಿಲ್ಲ

Published:
Updated:
Prajavani

ಬೆಂಗಳೂರು: ನ್ಯಾಯಾಲಯಗಳಲ್ಲಿ ವಿಚಾರಣೆ ವೇಳೆ ಆರೋಪಿಗಳು ಇನ್ನು ಮುಂದೆ ಕಟಕಟೆಯಲ್ಲಿ ಕೈಕಟ್ಟಿ ನಿಲ್ಲಬೇಕಿಲ್ಲ.

‘ಆರೋಪಿಗಳನ್ನು ಕಟಕಟೆಯಲ್ಲಿ ಕೂರಿಸಿಯೇ ವಿಚಾರಣೆ ನಡೆಸಬೇಕು. ಅವರನ್ನು ನಿಲ್ಲಿಸಬೇಕು ಎಂದಾದರೆ ಅದಕ್ಕೆ ನಿರ್ದಿಷ್ಟ ಕಾರಣ ಇರಬೇಕು. ಉದಾಹರಣೆಗೆ ಸಾಕ್ಷಿಗಳು ಆರೋಪಿ ಗಳನ್ನು ಗುರುತಿಸುವ ಸಂದರ್ಭದಲ್ಲಿ ನಿಲ್ಲುವಂತೆ ನ್ಯಾಯಾಧೀಶರು ಸೂಚಿಸ ಬಹುದು’ ಎಂದು ಸಿಟಿ ಸಿವಿಲ್ ಕೋರ್ಟ್‌ ರಿಜಿಸ್ಟ್ರಾರ್ ಅವರು ಅಕ್ಟೋಬರ್‌ 4ರಂದು ಸುತ್ತೋಲೆ ಹೊರಡಿಸಿದ್ದಾರೆ. 1982ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಸಾಲುಗಳನ್ನೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲಾ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಕೈಗಾರಿಕಾ ನ್ಯಾಯಮಂಡಳಿ, ಮ್ಯಾಜಿಸ್ಟ್ರೇಟ್ ಕೋರ್ಟ್‌, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಸೇರಿದಂತೆ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ಸುತ್ತೋಲೆಯ ಪ್ರತಿಯನ್ನು ಕಳುಹಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

ನ್ಯಾಯಾಲಯಗಳಲ್ಲಿ ಆರೋಪಿಗಳನ್ನು ನಿಲ್ಲಿಸಿಯೇ ವಿಚಾರಣೆ ನಡೆಸಲಾಗುತ್ತಿದ್ದು, ಈ ರೀತಿ ವಿಚಾರಣೆ ನಡೆಸಲು ಇರುವ ಕಾನೂನಿನ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ವಿಶ್ವ ಕನ್ನಡ ಸಮಾಜದ ಸಂಸ್ಥಾಪಕ ಎಸ್‌. ಆನಂದ್ ಅವರು ಸಿಟಿ ಸಿವಿಲ್ ನ್ಯಾಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮನವಿ ಸಲ್ಲಿಸಿದ್ದರು.

ಅವರು ಮಾಹಿತಿ ಒದಗಿಸದ ಕಾರಣ ಆನಂದ್ ಅವರು ರಾಜ್ಯ ಮಾಹಿತಿ ಆಯೋಗದ ಕದ ತಟ್ಟಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಾಹಿತಿ ಆಯುಕ್ತ ಎಲ್.ಕೃಷ್ಣಮೂರ್ತಿ ಅವರು, ಆನಂದ್ ಕೇಳಿರುವ ಮಾಹಿತಿ ಒದಗಿಸುವಂತೆ ಸೂಚಿಸಿದ್ದರು.

‘ಮೊದಲಿಗೆ ಮಾಹಿತಿ ಲಭ್ಯವಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್‌ ಉತ್ತರ ನೀಡಿತ್ತು. ಆದರೆ, ಈ ರೀತಿಯ ಉತ್ತರ ಬೇಡ, ಆರೋಪಿಗಳನ್ನು ಕೂರಿಸಿ ವಿಚಾರಣೆ ನಡೆಸಲು ಕಾನೂನಿನಲ್ಲಿ ಅವಕಾಶ ಇದೆಯೋ, ಇಲ್ಲವೋ ಎಂಬ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದೆವು. ಅಂತಿಮವಾಗಿ ಸಿಟಿ ಸಿವಿಲ್ ಕೋರ್ಟ್‌ ರಿಜಿಸ್ಟ್ರಾರ್‌ ಸುತ್ತೋಲೆ ಹೊರಡಿಸಿ ಮಾಹಿತಿ ನೀಡಿದ್ದಾರೆ’ ಎಂದು ಎಲ್. ಕೃಷ್ಣಮೂರ್ತಿ ತಿಳಿಸಿದರು.

ಪ್ರತಿಕ್ರಿಯಿಸಿ (+)