ಬೆಂಗಳೂರು: ಹನ್ನೊಂದು ದಿನಗಳಿಂದ ನೀರು ಪೂರೈಸದಿರುವುದರಿಂದ ಬೇಸತ್ತಿರುವ ವಿದ್ಯಾರಣ್ಯಪುರ ನಿವಾಸಿಗಳು ಇದೇ 13ರಂದು ( ಸೋಮವಾರ) ಬೆಳಿಗ್ಗೆ 11ಕ್ಕೆ ಜಲಮಂಡಳಿಯ ಸ್ಥಳೀಯ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
‘ವಿದ್ಯಾರಣ್ಯಪುರ ಭಾಗದಲ್ಲಿ ತಿಂಗಳಿನಿಂದಲೇ ನೀರಿನ ಅಭಾವ ಸೃಷ್ಟಿಯಾಗಿದೆ. ಅದರಲ್ಲಿಯೂ, 11 ದಿನಗಳಿಂದ ಒಂದು ಹನಿ ನೀರನ್ನೂ ಸರಬರಾಜು ಮಾಡಿಲ್ಲ. ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ, ಆದೀಶ್ವರ ಶೋ ರೂಂ ಬಳಿ ಇರುವ ವಿದ್ಯಾರಣ್ಯಪುರ ಜಲಮಂಡಳಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು’ ಎಂದು ವಿದ್ಯಾರಣ್ಯಪುರ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಆರ್. ಅಶ್ವತ್ಥ್ ತಿಳಿಸಿದರು.
‘ಜಿಕೆವಿಕೆ ಬಳಿಯ ಪಂಪಿಂಗ್ ಸ್ಟೇಷನ್‌ನಲ್ಲಿ ಯಂತ್ರ ಕೆಟ್ಟಿರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 11 ದಿನಗಳಿಂದಲೂ ಇದೇ ಕಾರಣ ಹೇಳುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ನೀರಿಲ್ಲದೆ ಪರಿತಪಿಸುವಂತಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಎನ್‌ಐಟಿ ಬಡಾವಣೆ, ಬಿಇಎಲ್ ಬಡಾವಣೆ, ಎಚ್‌ಎಂಟಿ ಬಡಾವಣೆ ಸೇರಿ ಹಲವು ಪ್ರದೇಶಗಳ ಸುಮಾರು 6 ಸಾವಿರ ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ. ಒಂದು ಟ್ಯಾಂಕರ್‌ಗೆ ₹500ರಿಂದ ₹700ವರೆಗೆ ಕೊಡಬೇಕಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.