ಶನಿವಾರ, ಮಾರ್ಚ್ 25, 2023
27 °C
ಎರಡು ಡಜನ್‌ ಖಾತೆಗಳಿಗೆ ಕೋಟಿಗಟ್ಟಲೆ ರೂಪಾಯಿ ಸಾಲ ವಿತರಣೆ

ಸಾಲ ಪಡೆದು ಮರಳಿಸದ ಪ್ರಭಾವಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾವಿರಾರು ಗ್ರಾಹಕರ ಠೇವಣಿ ಮರಳಿಸಲಾಗದೆ ಪರದಾಡುತ್ತಿರುವ ಬಸವನಗುಡಿಯ ಶ್ರೀ ‌ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಎರಡು ಡಜನ್‌ಗಳಷ್ಟು ಪ್ರಭಾವಿಗಳಿಗೆ ವಿತರಿಸಿದ ನೂರಾರು ಕೋಟಿ ಸಾಲ ವಸೂಲಾಗದಿರುವುದು ಬಿಕ್ಕಟ್ಟಿಗೆ ಕಾರಣ ಎಂಬ ಸಂಗತಿ ವಿಚಾರಣೆಯಿಂದ ಬಯಲಾಗಿದೆ.

ರಿಸರ್ವ್ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಕಚೇರಿ ಅಧಿಕಾರಿಗಳ ವಿಚಾರಣೆಯಿಂದ ಈ ಮಾಹಿತಿ ಬಹಿರಂಗವಾಗಿದೆ. ಬ್ಯಾಂಕಿನ ಹಣಕಾಸು ಸ್ಥಿತಿಗತಿ ಪರಿಶೀಲಿಸಲು ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳ ಸಮ್ಮುಖ
ದಲ್ಲಿ ಈಚೆಗೆ ಸೇರಿದ್ದ ಸಭೆಯಲ್ಲೂ ಇದು ಚರ್ಚೆಯಾಗಿದೆ.

ಬ್ಯಾಂಕಿನಿಂದ ಸಾಲ ಪಡೆದ ನೂರಾರು ಮಂದಿ ಮರುಪಾವತಿ ಮಾಡಿಲ್ಲ. ಅದರಲ್ಲೂ 24 ಪ್ರಭಾವಿಗಳು ಪಡೆದಿರುವ ಸಾಲವೇ ₹ 700 ಕೋಟಿಗಳಿಂದ ₹800 ಕೋಟಿಗಳಿಷ್ಟಿದೆ. ಚಿತ್ರ ನಿರ್ಮಾಪಕರಾದ ರಘುನಾಥ್‌ ಹಾಗೂ ಉದ್ಯಮಿ ಜಸ್ವಂತ್ ರೆಡ್ಡಿ ಪಡೆದಿರುವ ಸಾಲದ ಮೊತ್ತವೇ ಸುಮಾರು ₹ 300 ಕೋಟಿ. ಉಳಿದ 22 ಪ್ರಭಾವಿಗಳೂ ಕೋಟಿಗಟ್ಟಲೆ ರೂಪಾಯಿ ಸಾಲ ಕಟ್ಟಬೇಕು ಎಂದು ಮೂಲಗಳು ಹೇಳಿವೆ.

ಸಾಲ ಪಡೆದಿರುವ 24 ವ್ಯಕ್ತಿಗಳು ಹಾಗೂ ಖಾತೆಗಳ ನಡುವೆ ಸಂಬಂಧಗಳಿವೆ. ಒಂದು ಖಾತೆಯಲ್ಲಿ ಪಡೆದ ಸಾಲ ಮರುಪಾವತಿಸಲು ಇನ್ನೊಂದು ಖಾತೆಯಿಂದ ಸಾಲ ಪಡೆಯಲಾಗಿದೆ. ಎರಡಂಕಿಗಳಲ್ಲಿ (ಕೋಟಿಗಳಲ್ಲಿ) ಪಡೆದ ಸಾಲ, ಬಡ್ಡಿ, ಸುಸ್ತಿ ಸೇರಿಕೊಂಡು ಮೂರಂಕಿ ದಾಟಿದೆ. ಸಾಲ ವಸೂಲಾತಿ ಕ್ರಮಗಳ ಕುರಿತು ಪರಿಶೀಲಿಸಲಾಗುತ್ತಿದೆ. ಸದ್ಯದಲ್ಲೇ ವಸೂಲಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ವಜಾಗೊಂಡ ಬ್ಯಾಂಕಿನ ಆಡಳಿತ ಮಂಡಳಿ ಭದ್ರತೆಯನ್ನೇ ಪಡೆಯದೆಯೇ ಸಾಲ ಮಂಜೂರು ಮಾಡುವ ಮೂಲಕ ಎಡವಟ್ಟು ಮಾಡಿದೆ. ಬಹಳಷ್ಟು ಖಾತೆಗಳಿಗೆ ದಾಖಲೆಗಳೇ ಇಲ್ಲದಿರುವುದರಿಂದ ತೀವ್ರ ಗೊಂದಲ ಉಂಟಾಗಿದೆ.

ಈಚೆಗೆ ಬ್ಯಾಂಕಿನ ಪ್ರಧಾನ ಕಚೇರಿ, ಬಸವನಗುಡಿ ಶಾಖೆ, ಶ್ರೀ ಗುರುಸಾರ್ವಭೌಮ ಸೌಹಾರ್ದ ಸಹಕಾರ ಸಂಘ ಸೇರಿದಂತೆ ಹಲವೆಡೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳವೂ ಸಾಲ ಕಟ್ಟದೆ ವಂಚಿಸಿರುವ ವ್ಯಕ್ತಿಗಳ ಪಟ್ಟಿ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು