ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಅನರ್ಹತೆಗೆ ನೋಟಿಸ್ ಅಗತ್ಯವಿಲ್ಲ: ಹೈಕೋರ್ಟ್ ಆದೇಶ

ಆಸ್ತಿ ವಿವರಗಳನ್ನು ಸಲ್ಲಿಸದ ಗ್ರಾ.ಪಂ‌ಚಾಯಿತಿ ಸದಸ್ಯರ ಪ್ರಕರಣ
Published : 9 ಜುಲೈ 2023, 16:05 IST
Last Updated : 9 ಜುಲೈ 2023, 16:05 IST
ಫಾಲೋ ಮಾಡಿ
Comments

ಬೆಂಗಳೂರು: ‘ಆಸ್ತಿ ವಿವರಗಳನ್ನು ಸಲ್ಲಿಸದ ಗ್ರಾಮ ಪಂಚಾಯಿತಿ ಸದಸ್ಯರನ್ನು ಅವರ ಸ್ಥಾನದಿಂದ ಅನರ್ಹಗೊಳಿಸಲು ಷೋಕಾಸ್ ನೋಟಿಸ್ ನೀಡುವ ಅಗತ್ಯ ಇಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮೋಘಾ (ಕೆ) ಗ್ರಾಮ ಪಂಚಾಯಿತಿ ಸದಸ್ಯೆ ಲಲಿತಾ ಬಾಯಿ ಕೋಂ ಮಲ್ಕಣ್ಣ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಪೀಠದಲ್ಲಿದ್ದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

‘ಅರ್ಜಿದಾರರು ಆಸ್ತಿ ವಿವರ ಸಲ್ಲಿಸುವುದು ಸಾಂವಿಧಾನಿಕ ಕರ್ತವ್ಯ. ಈ ಪ್ರಕರಣದಲ್ಲಿ ಆ ಕರ್ತವ್ಯ ನಿಭಾಯಿಸಿಲ್ಲ. ಆದಾಗ್ಯೂ, ಚುನಾವಣಾ ಆಯೋಗ ಅನರ್ಹತೆ ಆದೇಶವನ್ನು ನಿಗದಿತ ಅವಧಿ ಮುಗಿದ ನಂತರಅಂದರೆ, 10 ತಿಂಗಳ ಬಳಿಕ ಹೊರಡಿಸಿದೆ. ಈ ಕ್ರಮದಲ್ಲಿ ಲೋಪವಿಲ್ಲ. ಒಂದು ವೇಳೆ ಸದಸ್ಯರು ನಿಯಮ ಪಾಲಿಸಿ ಅದರಲ್ಲಿ ಲೋಪವಾಗಿದ್ದರೆ ಷೋಕಾಸ್ ನೋಟಿಸ್ ಕುರಿತಂತೆ ತಕರಾರು ಎತ್ತಬಹುದಿತ್ತು’ ಎಂದಿದೆ.

‘ಒಂದು ವೇಳೆ ತಡವಾಗಿ ಆಸ್ತಿ ವಿವರ ಸಲ್ಲಿಸಿ ಅದು ಸ್ವೀಕೃತವಾಗಿರದಿದ್ದರೆ ಅಥವಾ ಸಲ್ಲಿಸಿದ ವಿವರಗಳು ಸುಳ್ಳಾಗಿದ್ದರೆ ಅಂತಹ ಸಂದರ್ಭದಲ್ಲಿ ಷೋಕಾಸ್ ನೋಟಿಸ್ ನೀಡಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೆ, ಈ ಪ್ರಕರಣದಲ್ಲಿ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?: ಅರ್ಜಿದಾರರು ಮೋಘಾ (ಕೆ) ಗ್ರಾಮ ಪಂಚಾಯಿತಿಗೆ 2020ರ ಡಿಸೆಂಬರ್ 22ರಂದು ನಡೆದಿದ್ದ ಚುನಾವಣೆಯಲ್ಲಿ ಚುನಾಯಿತರಾಗಿದ್ದರು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ಕಲಂ 43 ಬಿ (1) ಅಡಿಯಲ್ಲಿ ನಿಗದಿತ ಅವಧಿಯಲ್ಲಿ ಆಸ್ತಿ ವಿವರವನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ರಾಜ್ಯ ಚುನಾವಣಾ ಆಯೋಗ 2022ರ ಫೆಬ್ರುವರಿ 14ರಂದು ಅವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿತ್ತು. ಅರ್ಜಿದಾರರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ಪ್ರಕರಣದಲ್ಲಿ 2020ರ ಡಿ. 20ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅರ್ಜಿದಾರರು 2021ರ ಜನವರಿ 18ರಂದು ಮೊದಲ ಸಭೆಗೆ ಹಾಜರಾಗಿದ್ದಾರೆ. ಅಂದೇ ಎಲ್ಲ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜತೆಗೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯೂ ನಡೆದಿದೆ. ಮೂರು ತಿಂಗಳಲ್ಲಿ ಅಂದರೆ 2021ರ ಏಪ್ರಿಲ್ 18 ರೊಳಗೆ ಅವರು ಆಸ್ತಿ ವಿವರಗಳನ್ನು ಸಲ್ಲಿಸಬೇಕಿತ್ತು. ಆದರೆ, ಸಲ್ಲಿಸಿರಲಿಲ್ಲ. ಹಾಗಾಗಿ 2022 ರ ಡಿಸೆಂಬರ್ 31ರಂದು ಅರ್ಜಿದಾರರಿಗೆ ಮೊದಲ ನೋಟಿಸ್ ನೀಡಿ 2022ರ ಜನವರಿ 15ರೊಳಗೆ ವಿವರಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ಆ ಅವಧಿಯಲ್ಲೂ ಅವರು ಆಸ್ತಿ ವಿವರಗಳನ್ನು ಸಲ್ಲಿಸಿರಲಿಲ್ಲ ಎಂಬುದನ್ನು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ನಿಯಮ ಹೇಳುವುದೇನು?: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ- 1993 ರ ಕಲಂ 43ಬಿ (1) ಅನುಸಾರ ಗ್ರಾಮ ಪಂಚಾಯಿತಿ ಸದಸ್ಯರು ಚುನಾಯಿತರಾದ ದಿನಾಂಕ ಅಥವಾ ಅಧಿಕಾರ ವಹಿಸಿಕೊಂಡ ಮೂರು ತಿಂಗಳಲ್ಲಿ ರಾಜ್ಯ ಚುನಾವಣಾ ಆಯೋಗ ನಿಗದಿ ಪಡಿಸಿರುವ ನಮೂನೆಯಲ್ಲಿ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಆಸ್ತಿ ವಿವರಗಳನ್ನು ಸಲ್ಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT