ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆಗಳಿಂದ ಕಟ್ಟಡ ತ್ಯಾಜ್ಯ ತೆರವಿಗೆ ಡಿ.ಕೆ. ಶಿವಕುಮಾರ್‌ ಸೂಚನೆ

ಒಳಚರಂಡಿ, ಚರಂಡಿ ಸ್ವಚ್ಛಗೊಳಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ
Published : 12 ಆಗಸ್ಟ್ 2024, 16:22 IST
Last Updated : 12 ಆಗಸ್ಟ್ 2024, 16:22 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಸುರಿದಿರುವ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ತೆರೆವುಗೊಳಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಎಲ್ಲಾ ಕಡೆ ರಸ್ತೆ ಬದಿ ಚರಂಡಿಗಳು ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಆದೇಶಿಸಿದರು.

ಸೋಮವಾರ ಬೆಳಗಿನ ಜಾವ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೆಬ್ಬಾಳ ಸಮೀಪದ ಯೋಗೇಶ್ವರ ನಗರ, ನಾಗವಾರ ಜಂಕ್ಷನ್ ಹಾಗೂ ಎಚ್‌ಬಿಆರ್ ಲೇಔಟ್ 5ನೇ ಬ್ಲಾಕ್, ಸಿಲ್ಕ್ ಬೋರ್ಡ್, ಜಯದೇವ ಜಂಕ್ಷನ್ ಸೇರಿದಂತೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು.

‘ರಾಜಕಾಲುವೆ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ’

‘ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ, ಎಲ್ಲೆಲ್ಲಿ ಬಿಎಂಆರ್‌ಸಿಎಲ್ ಅವರು ಕಾಮಗಾರಿ ನಡೆಸುವಾಗ ಕಟ್ಟಡ ತ್ಯಾಜ್ಯಗಳು ರಾಜಕಾಲುವೆಯಲ್ಲಿ ಉಳಿದಿದ್ದರೇ ಕೂಡಲೇ ತೆರವು ಮಾಡಬೇಕು. ಕೆಲವೊಂದು ಕಡೆ ನೀರು ಹರಿಯುವ ಜಾಗಗಳು ಕಿರಿದಾಗಿದ್ದು, ಅವುಗಳನ್ನು ವಿಸ್ತರಿಸುವಂತೆ ಸೂಚಿಸಲಾಗಿದೆ’ ಎಂದು ಶಿವಕುಮಾರ್‌ ತಿಳಿಸಿದರು.

ಬಾಣಸವಾಡಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಮರದ ಕೊಂಬೆ ಬಿದ್ದು ಗಾಯಗೊಂಡಿರುವವರ ಆರೋಗ್ಯ ವಿಚಾರಿಸಿದರು. ಚಿಕಿತ್ಸೆ ವೆಚ್ಚವನ್ನು ಬಿಬಿಎಂಪಿಯಿಂದ ಭರಿಸಲಾಗುವುದು ಎಂದರು.

ನಗರದಾದ್ಯಂತ ಒಣಗಿದ ಮರಗಳನ್ನು ಕೂಡಲೇ ತೆರವು ಮಾಡಲಾಗುವುದು. ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕಾಡಿದ ರಸ್ತೆ ಗುಂಡಿಗಳು

ಮಳೆಯಿಂದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ರಸ್ತೆ ಗುಂಡಿಗಳು ಕಾಡಿದವು. ಗುಂಡಿಗಳು ಯಾವ ರೀತಿಯಲ್ಲಿವೆ ಎಷ್ಟು ಸಂಕಷ್ಟ ತಂದೊಡ್ಡುತ್ತಿವೆ ಎಂಬ ಅರಿವೂ ಅವರಿಗಾಯಿತು. ‘ನಗರ ಸಂಚಾರದ ವೇಳೆ ಸಾಕಷ್ಟು ರಸ್ತೆಗುಂಡಿಗಳು ಕಂಡು ಬಂದವು. ಮಳೆ ಹೆಚ್ಚಾದ ಕಾರಣಕ್ಕೆ ಸುಮಾರು ಅರ್ಧ ಅಡಿಗೂ ಆಳದ ಗುಂಡಿಗಳಾಗಿವೆ. ಇವುಗಳನ್ನು ಕೂಡಲೇ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎಲ್ಲಿಲ್ಲಿ ರಸ್ತೆಗುಂಡಿಗಳಿವೆ ಅದರ ಬಗ್ಗೆ ಮಾಹಿತಿ ನೀಡಬೇಕು ಎಂದು  ಪೊಲೀಸರಿಗೂ ತಿಳಿಸಿದ್ದೇನೆ. ಈಗಾಗಲೇ ಆ್ಯಪ್‌ (ರಸ್ತೆ ಗುಂಡಿ ಗಮನ) ಬಿಡುಗಡೆ ಮಾಡಿದ್ದು ಅಲ್ಲಿ ಫೋಟೊ ತೆಗೆದು ಹಾಕಿದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶಿವಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT