ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಹಸ್ಯ ಸಭೆ ನಡೆಸಿದ್ದ ಆರೋಪ: ಬಂಧಿತ ನಕ್ಸಲ್‌ ಅನಿರುದ್ಧ್ ಗೆಳತಿಗೆ ನೋಟಿಸ್‌

Published : 12 ಸೆಪ್ಟೆಂಬರ್ 2024, 15:41 IST
Last Updated : 12 ಸೆಪ್ಟೆಂಬರ್ 2024, 15:41 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ರಹಸ್ಯ ಸಭೆ ನಡೆಸಿದ್ದ ಆರೋಪದ ಮೇಲೆ ಬಂಧಿಸಿರುವ ನಕ್ಸಲ್‌ ಅನಿರುದ್ಧ್‌ ರಾಜನ್‌ ಅವರ ಗೆಳತಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸಕ್ರಿಯ ಸದಸ್ಯರಾಗಿರುವ ಅನಿರುದ್ಧ್‌ ರಾಜನ್‌, ನಗರದ ಅಜ್ಞಾತ ಸ್ಥಳವೊಂದರಲ್ಲಿ ಮೂರು ದಿನ ಅಡಗಿದ್ದರು. ಇದೇ ವೇಳೆ ನಗರದಲ್ಲಿ ನೆಲಸಿರುವ ಗೆಳತಿಯನ್ನು ಭೇಟಿ ಮಾಡಿ, ಕೆಂಪೇಗೌಡ ಬಸ್ ನಿಲ್ದಾಣದ ಮೂಲಕ ಚೆನ್ನೈಗೆ ಪರಾರಿಯಾಗಲು ಮುಂದಾಗಿದ್ದರು. ಆಗ ಸಿಸಿಬಿ ಪೊಲೀಸರು ಹಾಗೂ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್‌) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದರು.

‘ಆರೋಪಿ ಸಿಸಿಬಿ ಕಸ್ಟಡಿಯಲ್ಲಿದ್ದು, ವಿಚಾರಣೆ ಮುಂದುವರಿದಿದೆ. ವಿಚಾರಣೆ ವೇಳೆ ಆತ ಪ್ರೇಯಸಿಯನ್ನು ಭೇಟಿ ಮಾಡಲು ಬಂದಿದ್ದೆ ಎಂದೂ ಹೇಳಿದ್ದಾರೆ. ಹೀಗಾಗಿ, ಆತನ ಪ್ರೇಯಸಿಗೆ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಪ್ರೇಯಸಿ ನೀಡುವ ಹೇಳಿಕೆ ಆಧರಿಸಿ ಮುಂದಿನ ತನಿಖೆ ನಡೆಸಲಾಗುವುದು. ಇಬ್ಬರಿಗೂ ಹೇಗೆ ಪರಿಚಯ? ಅನಿರುದ್ಧ್‌ ನಕ್ಸಲ್‌ ಸಂಘಟನೆಯ ಸದಸ್ಯ ಎಂಬುದು ಗೊತ್ತಿರಲಿಲ್ಲವೆ? ಆರೋಪಿ ಏನು ಕೆಲಸ ಮಾಡುತ್ತಿದ್ದರು? ಭೇಟಿ ವೇಳೆ ಯಾವ ವಿಷಯದ ಕುರಿತು ಚರ್ಚೆಯಾಗಿತ್ತು ಎಂಬ ಮಾಹಿತಿಯನ್ನೂ ವಿಚಾರಣೆ ವೇಳೆ ಕಲೆ ಹಾಕಲಾಗುವುದು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಅನಿರುದ್ಧ್‌ ಬಳಿಯಿಂದ ಎರಡು ಪೆನ್‌ಡ್ರೈವ್‌ ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ ಪರಿಶೀಲನೆ ವೇಳೆ ಗೆಳತಿಯೊಂದಿಗೆ ನಡೆಸಿರುವ ಚರ್ಚೆಯ ಮಾಹಿತಿ ಸಹ ಸಿಕ್ಕಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಅನಿರುದ್ಧ್‌ ಲೆಕ್ಕ ಪರಿಶೋಧಕ (ಸಿ.ಎ) ಪರೀಕ್ಷೆಯನ್ನು ಎದುರಿಸಿ, ಅನುತ್ತೀರ್ಣಗೊಂಡಿದ್ದರು. ನಂತರ, ನಕ್ಸಲ್ ಸಂಘಟನೆಗಳ ಜೊತೆಗೆ ಒಡನಾಟ ಹೊಂದಿದ್ದರು. ಸಂಘಟನೆ ಬಲಪಡಿಸಲು ದೇಣಿಗೆ ಸಂಗ್ರಹಿಸುವುದು ಹಾಗೂ ಆ ಹಣವನ್ನು ನಕ್ಸಲ್ ಸಂಘಟನೆಗಳಿಗೆ ಹಂಚಿಕೆ ಮಾಡುವ ಕೆಲಸ ಮಾಡುತ್ತಿದ್ದರು. ಆರೋಪಿ ಹಲವು ವರ್ಷ ಹರಿಯಾಣದಲ್ಲಿ ನೆಲೆಸಿದ್ದರು. ಅಲ್ಲಿಂದ ಭೂಗತ  ಚಟುವಟಿಕೆಗಳಲ್ಲಿ ತೊಡಗಿದ್ದರು. ಐದು ವರ್ಷಗಳಿಂದ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಹೆಚ್ಚು ಸಕ್ರಿಯ ಆಗಿರುವ ನಕ್ಸಲ್ ಗುಂಪಿನ ಜೊತೆ ಗುರುತಿಸಿಕೊಂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT