ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಆಧಾರಿತ ಆರೋಗ್ಯ ಸಮೀಕ್ಷೆಗೆ ನಾಗರಿಕರ ಆಕ್ಷೇಪ

ಮತದಾರರಲ್ಲದವರಿಗೆ ಕೋವಿಡ್‌ 19 ಬರುವುದಿಲ್ಲವೇ– ಜನರ ಪ್ರಶ್ನೆ
Last Updated 11 ಮೇ 2020, 19:49 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌– 19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ಉದ್ದೇಶದಿಂದ ನಗರದಲ್ಲಿ ಸಮಗ್ರ ಆರೋಗ್ಯ ಸಮೀಕ್ಷೆ ನಡೆಸುವುದಾಗಿ ಹೇಳಿದ್ದ ಬಿಬಿಎಂಪಿ, ಈಗ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಕುಟುಂಬಗಳ ಆರೋಗ್ಯ ಮಾಹಿತಿಯನ್ನು ಮಾತ್ರ ಕಲೆಹಾಕುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರ ಮಾಹಿತಿಯನ್ನು ಸಮೀಕ್ಷಕರು ಏಕೆ ಸಂಗ್ರಹಿಸುತ್ತಿಲ್ಲ. ಅವರಿಗೆ ಕೋವಿಡ್‌ ಬರುವ ಸಾಧ್ಯತೆ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಶೀತ ಜ್ವರದ ಲಕ್ಷಣ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಎಸ್‌ಎಆರ್‌ಐ) ಮುಂತಾದ ಅನಾರೋಗ್ಯ ಸಮಸ್ಯೆಯನ್ನು ಹೊಂದಿರುವವರು, ಗರ್ಭಿಣಿಯರು, ಮಧುಮೇಹ ಇರುವವರು, 65 ವರ್ಷ ಮೇಲ್ಪಟ್ಟವರನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಮತಗಟ್ಟೆ ಅಧಿಕಾರಿ, ಬೂತ್‌ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಶಿಕ್ಷಕರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಶುಕ್ರವಾರದಿಂದ ಮನೆ ಮನೆಗೆ ತೆರಳಿ ಜನರ ಆರೋಗ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

‘ನಾನು ಅನೇಕ ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿನ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಯಾಗಿಲ್ಲ.ನಮ್ಮ ಮನೆಗೂ ಸಮೀಕ್ಷೆಯವರು ಬಂದಿದ್ದರು. ಮತದಾರರ ಪಟ್ಟಿಯಲ್ಲಿನನ್ನ ಹಾಗೂ ಕುಟುಂಬದವರ ಹೆಸರು ಇಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಯಾವುದೇ ಮಾಹಿತಿ ಪಡೆಯದೆಯೇ ಅವರು ಹೊರಟು ಹೋದರು’ ಎಂದು ಕುರುಬರಹಳ್ಳಿ ನಿವಾಸಿ ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ನಿಯಂತ್ರಣಕ್ಕಾಗಿ ಆರೋಗ್ಯ ಮಾಹಿತಿ ಕಲೆ ಹಾಕುವುದಾದರೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರನ್ನು ಹೊರಗಿಡುವುದು ಏಕೆ. ಬಾಡಿಗೆ ಮನೆಯಲ್ಲಿ ವಾಸಿಸುವ ಅನೇಕರು ಆಗಾಗ ವಾಸ್ತವ್ಯ ಬದಲಿಸುತ್ತಿರುತ್ತಾರೆ. ಅವರು ಪ್ರಸ್ತುತ ನೆಲೆಸಿರುವ ಕಡೆ ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದೇ ಹೋದರೆ ಅವರೂ ಸಮೀಕ್ಷೆಯಿಂದ ಹೊರಗುಳಿಯುತ್ತಾರೆ. ಇಂತಹ ಗೊಂದಲಮಯ ಸಮೀಕ್ಷೆಯಿಂದ ಸಾಧಿಸುವುದಾದರೂ ಏನು’ ಎಂದು ಅವರು ಪ್ರಶ್ನೆ ಮಾಡಿದರು.

ನಗರದಲ್ಲಿ 1.37 ಕೋಟಿ ಜನ ನೆಲೆಸಿದ್ದಾರೆ ಎಂಬುದು ಬಿಬಿಎಂಪಿ ಅಂದಾಜು. ಅದರಲ್ಲಿ ಮತದಾರರು 88.81 ಲಕ್ಷ ಮಾತ್ರ. ಈಗಿನ ಮಾದರಿಯಲ್ಲಿ ಆರೋಗ್ಯ ಸಮೀಕ್ಷೆ ನಡೆಸಿದರೆ 48.49 ಲಕ್ಷ ಮಂದಿ ಇದರಿಂದ ಹೊರಗುಳಿಯಲಿದ್ದಾರೆ. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಸದ್ಯಕ್ಕೆ ಸಮೀಕ್ಷೆ ನಡೆಯುತ್ತಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ‘ಸಮೀಕ್ಷೆಗಾಗಿ ಮತದಾರರ ಪಟ್ಟಿಯ ಆಧರಿಸಿದ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ ಸಮೀಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರ ಮಾಹಿತಿಯನ್ನು ಮಾತ್ರ ಕಲೆ ಹಾಕುತ್ತಿದ್ದಾರೆ’ ಎಂದರು.

‘ಸರ್ಕಾರದ ನಿರ್ದೇಶನದಂತೆ ಸಮೀಕ್ಷೆ ನಡೆಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರ ಆರೋಗ್ಯ ಮಾಹಿತಿಯನ್ನು ಕಲೆಹಾಕುವ ಬಗ್ಗೆ ನಿರ್ದೇಶನ ಬಂದಿಲ್ಲ’ ಎಂದರು.

ಮಾಹಿತಿ ದುರುಪಯೋಗ: ಆಮ್ ಆದ್ಮಿ ಪಕ್ಷ ಆತಂಕ

ಸಮೀಕ್ಷೆ ಮೂಲಕ ಕಲೆ ಹಾಕುವ ಮತದಾರರ ಮಾಹಿತಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಕ್ಷ ಆತಂಕ ವ್ಯಕ್ತಪಡಿಸಿದೆ.

‘ಮತದಾರರ ಆರೋಗ್ಯ ಮಾತ್ರ ಸರ್ಕಾರಕ್ಕೆ ಮುಖ್ಯವೇ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರ, ವಲಸೆ ಕಾರ್ಮಿಕರ ಆರೋಗ್ಯದ ಮಾಹಿತಿ ನಿಮಗೆ ಅಗತ್ಯವಿಲ್ಲವೆ’ ಎಂದು ಪಕ್ಷವು ಆರೋಗ್ಯ ಸಚಿವರನ್ನು ಪ್ರಶ್ನೆ ಮಾಡಿದೆ.

‘ಸಮೀಕ್ಷೆ ನಡೆಸುವವರು ರಾಜ್ಯ ಸರ್ಕಾರ ಅಭಿವೃದ್ಧಿ ಪಡಿಸಿದ ‘ಹೆಲ್ತ್‌ ವಾಚ್‌’ ಆ್ಯಪ್‌ ಅನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ನೇರವಾಗಿ ಮತದಾರರ ಆರೋಗ್ಯ ಮಾಹಿತಿ ತುಂಬಬಹುದು. ಈ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕಂಪ್ಯೂಟರ್‌ ಮೂಲಕ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸುರಕ್ಷಿತ’ ಎಂದು ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಪ್ರಶ್ನಿಸಿದ್ದಾರೆ.

‘ಮತದಾರರ ಆಧಾರ್‌ ಹಾಗೂ ಮೊಬೈಲ್‌ ಸಂಖ್ಯೆಯನ್ನು ಸಂಗ್ರಹಿಸುತ್ತಿರುವುದೇಕೆ. ಇದನ್ನು ಬಳಸಿ ಚುನಾವಣಾ ಅಕ್ರಮ ನಡೆದರೆ ಯಾರು ಹೊಣೆ’ ಎಂದು ಅವರು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT