ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರನ್ನು ಪ್ರತಿವರ್ಷ ಕಾಡುವ ‘ಕುರುಡು ಚಿತ್ತಾ’

10 ವರ್ಷಗಳಿಂದ ಕಾಡುತ್ತಿರುವ ಅಕ್ಟೋಬರ್ ಮಳೆ
Last Updated 22 ಅಕ್ಟೋಬರ್ 2020, 20:33 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ಟೋಬರ್ ಎಂದರೆ ಬೆಂಗಳೂರಿಗೆ ಮಹಾಮಳೆಯ ತಿಂಗಳು. ಇದೇ 10ರಿಂದ ಆರಂಭವಾಗಿರುವ ಚಿತ್ತಾ ಮಳೆ ನಗರವನ್ನು ‘ಕುರುಡಾಗಿ’ ಕಾಡಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ಮುಂಗಾರು ಮಳೆ ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತದೆ. ಅಕ್ಟೋಬರ್‌ ನಂತರ ಆರಂಭವಾಗುವ ಹಿಂಗಾರು ಮಳೆ ಒಳನಾಡಿನಲ್ಲಿ ಅಬ್ಬರಿಸಲಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಬೆಂಗಳೂರು ನಗರಕ್ಕೆ ಅಕ್ಟೋಬರ್ ತಿಂಗಳು ಕಳೆದ 10 ವರ್ಷಗಳಿಂದ ಹೆಚ್ಚು ಕಾಡುತ್ತಿದೆ.

ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಅತೀ ಹೆಚ್ಚು ಮಳೆಯಾಗುತ್ತಿತ್ತು. ಕೆಲ ವರ್ಷಗಳಿಂದ ಅದು ಅಕ್ಟೋಬರ್‌ಗೆ ಬದಲಾಗಿದೆ ಎಂಬುದನ್ನು ಹವಾಮಾನ ತಜ್ಞರು ಕಂಡುಕೊಂಡಿದ್ದಾರೆ.

‘ಹಿಂಗಾರಿನ ಮೊದಲ ಮಳೆಯಾಗಿರುವ ‘ಚಿತ್ತಾ’ ಮಳೆಯನ್ನು ಹಿಂದಿನಿಂದಲೂ ‘ಕುರುಡು ಚಿತ್ತಾ’ ಎಂದೇ ಕರೆಯಲಾಗುತ್ತದೆ. ಈ ಮಳೆಗೆ ಕಣ್ಣಿಲ್ಲ, ಯಾವಾಗ ಬೇಕಾದರೂ, ಎಷ್ಟು ಬೇಕಾದರೂ ಸುರಿಯುತ್ತದೆ ಎಂಬುದನ್ನು ಅಂದಾಜಿಸಿ ಹೀಗೆ ಅಡ್ಡ ಹೆಸರಿನಿಂದ ಪೂರ್ವಜರು ಕರೆದಿದ್ದಾರೆ’ ಎಂದು ಹವಾಮಾನ ತಜ್ಞ ಶಿವರಾಂ ಹೇಳುತ್ತಾರೆ.

ಅಕ್ಟೋಬರ್ ನಂತರ ಈಶಾನ್ಯ ಮಾರುತಗಳು ಆರಂಭವಾಗುತ್ತವೆ. ಚಂಡಮಾರುತಗಳು ಏಳುತ್ತವೆ, ಹೀಗಾಗಿ ರಾಜ್ಯದ ಒಳನಾಡಿನಲ್ಲಿ ಹೆಚ್ಚು ಮಳೆಯಾಗುತ್ತದೆ ಎಂದು ವಿವರಿಸಿದರು.

‘ಅಕ್ಟೋಬರ್‌ನಲ್ಲಿ ಬೆಂಗಳೂರಿನ ವಾಡಿಕೆ ಮಳೆ 180 ಮಿ.ಮೀ. ಈ ವರ್ಷ ಅ. 22ರವೇಳಗೆ 161 ಮಿ.ಮೀ ಸುರಿದಿದೆ. ಇನ್ನೂ ಎಂಟು ದಿನಗಳು ಬಾಕಿ ಇವೆ. ಅದರಲ್ಲೂ ಚಿತ್ತಾ ಮಳೆಯ ಆರ್ಭಟ 24ರವರೆಗೆ ಇರಲಿದೆ’ ಎಂದು ವಿವರಿಸಿದರು.

ಕಳೆದ ಐದು ವರ್ಷಗಳಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ತನಕ ಮೂರು ತಿಂಗಳು ಸುರಿದಿರುವ ಮಳೆಯ ಪ್ರಮಾಣ ನೋಡಿದರೆ ಎರಡು ವರ್ಷ ಮಾತ್ರ ವಾಡಿಕೆಗಿಂತ (ವಾಡಿಕೆ ಮಳೆ 234 ಮಿ.ಮೀ) ಕಡಿಮೆ ಮಳೆಯಾಗಿದೆ. ಇನ್ನೆರಡು ವರ್ಷ ಹೆಚ್ಚಿನ ಮಳೆಯಾಗಿದೆ. ಈ ವರ್ಷದ ಆರ್ಭಟ ನೋಡಿದರೆ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.

ಅದರಲ್ಲೂ ಮಂಗಳವಾರ ಒಂದೇ ರಾತ್ರಿ 124.5 ಮಿ.ಮೀ ಮಳೆಯಾಗಿದೆ. ಈ ಹಿಂದೆ 1997ರ ಅ.1ರಂದು 178.9 ಮಿ.ಮೀ ಮಳೆಯಾಗಿತ್ತು. ಅದನ್ನು ಬಿಟ್ಟರೆ 2019ರ ಅ.9ರಂದು 140.5 ಮಿ.ಮೀ ಮಳೆಯಾಗಿತ್ತು. ಒಂದೇ ದಿನ ಅಷ್ಟು ಮಳೆ ಸುರಿದರೆ ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ಬೆಂಗಳೂರು ಈಗ ಕಳೆದುಕೊಂಡಿದೆ ಎನ್ನುತ್ತಾರೆ ತಜ್ಞರು.

ಅಂಕಿ–ಅಂಶ

161.7 ಮಿ.ಮೀ

2020ರ ಅಕ್ಟೋಬರ್‌ನಲ್ಲಿ ಈವರೆಗೆ ಸುರಿದಿರುವ ಮಳೆ

124.5 ಮಿ.ಮೀ

ಮಂಗಳವಾರ ಒಂದೇ ದಿನ ಸುರಿದ ಮಳೆ

180 ಮಿ.ಮೀ

ಅಕ್ಟೋಬರ್ ತಿಂಗಳ ವಾಡಿಕೆ ಮಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT