ಸೋಮವಾರ, ಸೆಪ್ಟೆಂಬರ್ 23, 2019
22 °C
ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ವಿವರಣೆ

ವಲಸೆ ಅನುಮತಿಗೆ ನಗರದಲ್ಲೇ ಕಚೇರಿ

Published:
Updated:
Prajavani

ಬೆಂಗಳೂರು: ಕೆಲಸ ಅರಸಿ ವಿದೇಶಗಳಿಗೆ ಹೋಗುವವರಿಗೆ ಅಗತ್ಯ ಇರುವ ‘ವಲಸೆ ಅನುಮತಿ (ಮೈಗ್ರೆಂಟ್ ಕ್ಲಿಯರೆನ್ಸ್‌)’ ಪಡೆಯಲು ಇನ್ನು ಮುಂದೆ ಹೈದರಾಬಾದ್ ಅಥವಾ ಚೆನ್ನೈಗೆ ಹೋಗಬೇಕಿಲ್ಲ. ಸದ್ಯದಲ್ಲೇ ಈ ವ್ಯವಸ್ಥೆ ಬೆಂಗಳೂರಿಗೇ ಬರಲಿದೆ.

‘ಕೋರಮಂಗಲದಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಲ್ಲೇ ವಲಸೆ ಅನುಮತಿ ದೊರೆಯಲಿದೆ. ವಿದೇಶಾಂಗ ಸಚಿವಾಲಯದ (ಎಂಇಎ) ಶಾಖಾ ಅಧಿಕಾರಿಗಳನ್ನು ಇಲ್ಲಿಗೆ ನಿಯೋಜಿಹಿಸಲಾಗುತ್ತದೆ’ ಎಂದು ಪ್ರಾದೇಶಿಕ ಪಾರ್ಸ್‌ಪೋರ್ಟ್ ಅಧಿಕಾರಿ ಭರತ್‌ ಕುಮಾರ್‌ ಕುಟಾಟಿ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಫ್‌ಕೆಸಿಸಿಐ) ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಮಧ್ಯಪ್ರಾಚ್ಯದ 17 ದೇಶಗಳಲ್ಲಿ ಉದ್ಯೋಗ ಕೊಡಿಸುವ ಏಜೆನ್ಸಿಗಳು ಬೆಂಗಳೂರಿನಲ್ಲಿವೆ. ನಿರ್ದಿಷ್ಟ ಅವಧಿಯಲ್ಲಿ ಈ ರೀತಿಯ ಉದ್ಯೋಗಕ್ಕೆ ತೆರಳುವವರು ವಲಸೆ ಅನುಮತಿ ಪಡೆಯಬೇಕಾಗುತ್ತದೆ. ಸದ್ಯ ರಾಜ್ಯದ ಯುವಕರು ಹೈದರಾಬಾದ್ ಅಥವಾ ಚೆನ್ನೈಗೆ ಹೋಗಿ ಅನುಮತಿ ಪಡೆಯುತ್ತಿದ್ದಾರೆ’ ಎಂದು ವಿವರಿಸಿದರು.

‘ಮಧ್ಯವರ್ತಿಗಳನ್ನು ತಪ್ಪಿಸಲು ಪಾಸ್‌ಪೋರ್ಟ್‌ ಇಲಾಖೆ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಸುಲಭ. ಆದರೂ, ಜನರು ಮನಸು ಮಾಡುತ್ತಿಲ್ಲ. ಹೀಗಾಗಿ ಅನಗತ್ಯವಾಗಿ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ನಾವು ಆಗಾಗ ಮಾಡುತ್ತಿದ್ದೇವೆ’ ಎಂದರು.

ಆ್ಯಪ್‌ ಮೂಲಕ ಪೊಲೀಸ್ ಪರಿಶೀಲನೆ

ಪಾಸ್‌ಪೋರ್ಟ್‌ ಪರಿಶೀಲನೆಗಾಗಿ ನಗರ ಪೊಲೀಸರು ಬಳಕೆ ಮಾಡುತ್ತಿರುವ ಎಂ.ಪಾಸ್‌ಪೋರ್ಟ್‌ ಪೊಲೀಸ್ ಆ್ಯಪ್ ಅನ್ನು ಮೂರು ತಿಂಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಭರತ್‌ ಕುಮಾರ್‌ ಕುಟಾಟಿ ತಿಳಿಸಿದರು.

‘ಪಾಸ್‌ಪೋರ್ಟ್‌ ವಿತರಣೆ ಪ್ರಕ್ರಿಯೆಯಲ್ಲಿ ನಮ್ಮ ಪಾಲಿನ ಕೆಲಸಗಳು 2–3 ದಿನಗಳಲ್ಲಿ ಮುಗಿದರೆ, ಪೊಲೀಸ್‌ ಇಲಾಖೆಯಿಂದ ಪರಿಶೀಲನೆಗೆ ಹೆಚ್ಚು ಸಮಯ ವ್ಯಯವಾಗುತ್ತಿದೆ. ಆ್ಯಪ್ ಬಳಕೆ ಮಾಡಿದರೆ ಈ ಸಮಯ ಉಳಿತಾಯವಾಗಲಿದೆ’ ಎಂದರು.

Post Comments (+)