ಬುಧವಾರ, ಮೇ 25, 2022
31 °C
ಎಸಿಬಿ ತನಿಖೆಗೆ ಬಿಡಿಎ ಸಹಮತಿ

ಅಕ್ರಮದಲ್ಲಿ ಅಧಿಕಾರಿಗಳು ಭಾಗಿ; ಬದಲಿ ನಿವೇಶನವಾಗಿ ಬೇರೊಬ್ಬರ ನಿವೇಶನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬೇರೊಬ್ಬರಿಗೆ ಹಂಚಿಕೆ ಮಾಡಿದ್ದ ನಿವೇಶನವನ್ನು ಇನ್ನೊಬ್ಬರಿಗೆ ಬದಲಿ ನಿವೇಶನ ರೂಪದಲ್ಲಿ ಹಂಚಿಕೆ ಮಾಡಲಾಗಿದೆ. ಉಪ ಕಾರ್ಯದರ್ಶಿ–4 ವಿಭಾಗದ ಅಧಿಕಾರಿಗಳು ಲೋಪವೆಸಗಿರುವುದು ಬಿಡಿಎ ನಡೆಸಿರುವ ಆಂತರಿಕ ಪರಿಶೀಲನೆಯಲ್ಲಿ ದೃಢಪಟ್ಟಿದ್ದು, ಅವರನ್ನು ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ವಿಚಾರಣೆಗೆ ಒಳಪಡಿಸುವುದಕ್ಕೆ ಅನುಮತಿ ನೀಡಲು ಬಿಡಿಎ ಸಹಮತಿ ವ್ಯಕ್ತಪಡಿಸಿದೆ.   

ಭೂಪಸಂದ್ರದಲ್ಲಿ ಆರ್.ಎಂ.ವಿ ಬಡಾವಣೆಯ ಎರಡನೇ ಹಂತದಲ್ಲಿ 40X60 ಅಡಿ ವಿಸ್ತೀರ್ಣದ ನಿವೇಶನವನ್ನು (ಸಂಖ್ಯೆ 12) ವರದಾಚಾರಿ ಅವರಿಗೆ ಬಿಡಿಎ ಹಂಚಿಕೆ ಮಾಡಿತ್ತು. ಆ ನಿವೇಶನವನ್ನು ಅದಾಗಲೇ ಬೇರೆಯವರಿಗೆ ಹಂಚಿಕೆಯಾಗಿದ್ದರಿಂದ ಅವರು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಬದಲಿ ನಿವೇಶನ (ಸಂಖ್ಯೆ 40) ಹಂಚಿಕೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಅವರಿಗೆ ಭೂಪಸಂದ್ರದ ಆರ್.ಎಂ.ವಿ 2ನೇ ಹಂತದ ಮುಂದುವರಿದ ಬಡಾವಣೆಯಲ್ಲಿ ಹಿಂದಿನಷ್ಟೇ ವಿಸ್ತೀರ್ಣದ ನಿವೇಶನವನ್ನು 2013ರ ಫೆ. 6ರಂದು ಹಂಚಿಕೆ ಮಾಡಿತ್ತು. ಪ್ರಾಧಿಕಾರವು 2013ರ ಜೂನ್‌ 1ರಂದು ಶುದ್ಧ ಕ್ರಯಪತ್ರವನ್ನೂ ನೋಂದಾಯಿಸಿ, ವರದಾಚಾರಿ ಅವರಿಗೆ ಸ್ವಾಧೀನ ಪತ್ರವನ್ನೂ ನೀಡಿತ್ತು.

ಪದ್ಮಾವತಮ್ಮ ಎಂಬುವರಿಗೆ ಜೆ.ಪಿ.ನಗರ ಬಡಾವಣೆಯ ನಾಲ್ಕನೇ ಬ್ಲಾಕ್‌ನ ಒಂಬತ್ತನೇ ಹಂತದಲ್ಲಿ 40X60 ವಿಸ್ತೀರ್ಣದ ನಿವೇಶನವನ್ನು (ಸಂಖ್ಯೆ 358) 1998ರ ಸೆ. 22ರಂದು ಬಿಡಿಎ ಹಂಚಿಕೆ ಮಾಡಿತ್ತು. ಇದಕ್ಕೆ 2004ರ ಜೂನ್‌ 3ರಂದು ಶುದ್ಧ ಕ್ರಯಪತ್ರ ಹಾಗೂ ಸ್ವಾಧೀನ ಪತ್ರವನ್ನು ನೀಡಿತ್ತು. ‘ತಮಗೆ ಮಂಜೂರಾದ ನಿವೇಶನವಿರುವ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿತ್ತು. ಹಾಗಾಗಿ ಬದಲಿ ನಿವೇಶನ ನೀಡಬೇಕು’ ಎಂದು ಪದ್ಮಾವತಮ್ಮ ಅವರು ಆಯುಕ್ತರಿಗೆ ದಶಕಗಳ ಬಳಿಕ ಮನವಿ ಸಲ್ಲಿಸಿದ್ದರು.

ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಬದಲಿ ನಿವೇಶನ ಹಂಚಿಕೆ ಸಮಿತಿಯ ಸಭೆಯಲ್ಲಿ ಪದ್ಮಾವತಮ್ಮ ಅವರಿಗೆ ಬದಲಿ ನಿವೇಶನವನ್ನು ನೀಡುವ ತಿರ್ಮಾನ ಕೈಗೊಳ್ಳಲಾಗಿತ್ತು. ಇದರ ಆಧಾರದಲ್ಲಿ, ಪದ್ಮಾವತಮ್ಮ ಅವರಿಗೆ ನೀಡಿದ್ದ ನಿವೇಶನದ (ಸಂಖ್ಯೆ 358) ಮಂಜೂರಾತಿಯನ್ನು ರದ್ದುಪಡಿಸಿ, ಆಯುಕ್ತರ ಅನುಮೋದನೆ ಪಡೆದು ಭೂಪಸಂದ್ರದ ಆರ್.ಎಂ.ವಿ ಎರಡನೇ ಹಂತದ ಮುಂದುವರಿದ ಬಡಾವಣೆಯಲ್ಲಿ ಅಷ್ಟೇ ವಿಸ್ತೀರ್ಣದ ಬದಲಿ ನಿವೇಶನವನ್ನು (ಸಂಖ್ಯೆ 40) 2016ರ ಫೆ.2ರಂದು ಹಂಚಿಕೆ ಮಾಡಲಾಗಿತ್ತು. 2017ರ ಏ.6ರಂದು ಉಪಕಾರ್ಯದರ್ಶಿ-4 ಅವರ ವಿಭಾಗದಿಂದ ಶುದ್ದ ಕ್ರಯಪತ್ರವನ್ನು ನೋಂದಣಿ ಮಾಡಿಸಲಾಗಿತ್ತು. 2017ರ ಏ. 24ರಂದು ಬದಲಿ ನಿವೇಶನಕ್ಕೆ ಸ್ವಾಧೀನ ಪತ್ರ ನೀಡಲಾಗಿತ್ತು.

ಅಚ್ಚರಿ ಎಂದರೆ, ಬಿಡಿಎ ಈ ಹಿಂದೆ ಇದೇ ನಿವೇಶನವನ್ನು ವರದಾಚಾರಿ ಅವರಿಗೆ ಹಂಚಿಕೆ ಮಾಡಿತ್ತು. ‘ಈ ನಿವೇಶನವನ್ನು ತಮ್ಮ ಹೆಸರಿನಲ್ಲೇ ಮುಂದುವರಿಸಬೇಕು. ಪದ್ಮಾವತಮ್ಮ ಅವರಿಗೆ ನೀಡಿರುವ ಬದಲಿ ನಿವೇಶನದ ಶುದ್ಧ ಕ್ರಯಪತ್ರವನ್ನು ರದ್ದುಪಡಿಸಬೇಕು’ ಎಂದು ವರದಾಚಾರಿ ಅವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದು, ಇದು ವಿಚಾರಣಾ ಹಂತದಲ್ಲಿರುತ್ತದೆ.  ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಬಿಡಿಎ ವಿಶೇಷ ಕಾರ್ಯ ಪಡೆ ಮತ್ತು ಜಾಗೃತ ವಿಭಾಗ ಪರಿಶೀಲನೆ ನಡೆಸಿದಾಗ ವರದಾಚಾರಿ ಅವರಿಗೆ ಆರ್.ಎಂ.ವಿ 2ನೇ ಹಂತದ ಮುಂದುವರೆದ ಬಡಾವಣೆಯಲ್ಲಿ 2013ರ ಜೂನ್‌ 1ರಂದು ನಿವೇಶನ (ಸಂಖ್ಯೆ 40) ನೀಡಿ, ಅದಕ್ಕೆ ಶುದ್ದ ಕ್ರಯಪತ್ರವನ್ನು ನೋಂದಾಯಿಸಿ, ಸ್ವಾಧೀನ ಪತ್ರವನ್ನೂ ನೀಡಿರುವುದು ದೃಢಪಟ್ಟಿದೆ.

ಅದೇ (ಸಂಖ್ಯೆ 40) ನಿವೇಶನವನ್ನೇ ಪದ್ಮಾವತಮ್ಮ ಅವರಿಗೆ ಹಂಚಿಕೆ ಮತ್ತು ನೊಂದಣಿ ಮಾಡಲಾಗಿದೆ. ಆಗಿನ ಉಪಕಾರ್ಯದರ್ಶಿ (ಮಹಿಳಾ ಕೆಎಎಸ್‌ ಅಧಿಕಾರಿ) ಮತ್ತು ಮೇಲ್ವಿಚಾರಕರಾಗಿದ್ದ ಟಿ.ವಿ.ವಿರೂಪಾಕ್ಷಪ್ಪ ಮತ್ತು ವಿಷಯ ನಿರ್ವಾಹಕಿಯಾಗಿದ್ದ ಮಂಜುಳಾ ಬಾಯಿ ಅವರು ಈ ಮೊದಲೇ ವರದಾಚಾರಿ ಅವರಿಗೆ ಹಂಚಿಕೆಯಾಗಿದ್ದ ನಿವೇಶನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸದೆಯೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಬಿಡಿಎ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ 2022ರ ಜ.10ರಂದು ಪತ್ರ ಬರೆದು ಅಭಿಪ್ರಾಯ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು