ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ‘ಆಫ್‌‌ಲೈನ್‌’ನಲ್ಲಿ ಪುನರ್‌ಮನನ ತರಗತಿ: ಬೆಂ.ವಿ.ವಿ ಕ್ರಮ

ಯು.ಜಿ, ಪಿ.ಜಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ಬೆಂ.ವಿ.ವಿ ಕ್ರಮ
Last Updated 31 ಆಗಸ್ಟ್ 2020, 19:47 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಪಠ್ಯದ ಪುನರ್‌ಮನನಕ್ಕಾಗಿ ‘ರೆಗ್ಯುಲರ್‌ ಆಫ್‌ಲೈನ್‌’ ತರಗತಿಗಳನ್ನು ಸೆಪ್ಟೆಂಬರ್‌ 1ರಿಂದಲೇ ತೆಗೆದುಕೊಳ್ಳುವಂತೆ ಬೆಂಗಳೂರು ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಕಾಲೇಜುಗಳಿಗೆ ನಿರ್ದೇಶಿಸಿದೆ.

ಸೆ. 12ರಿಂದ ಪದವಿಯ 6ನೇ ಸೆಮಿಸ್ಟರ್‌ ಹಾಗೂ 23ರಿಂದ ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ನಡೆಸಲು ವಿ.ವಿ. ದಿನಾಂಕ ನಿಗದಿಪಡಿಸಿದೆ. ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆ, ಗೊಂದಲ, ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಲು ಹಾಗೂ ಪಾಠಗಳ ಪುನರಾವರ್ತನೆಗೆ ಅವಕಾಶ ಕಲ್ಪಿಸಲು ವಿಶ್ವವಿದ್ಯಾಲಯ ಈ ಕ್ರಮ ತೆಗೆದುಕೊಂಡಿದೆ.

‘ಈ ಆಫ್‌ಲೈನ್‌ ತರಗತಿಗಳು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ. ಇದನ್ನು ಹಾಜರಾತಿಗೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಪರೀಕ್ಷೆಗೂ ಮುನ್ನ ಈ ಅವಧಿಯಲ್ಲಿ ಬೋಧಕರು ಕಾಲೇಜುಗಳಲ್ಲಿ ವೇಳಾಪಟ್ಟಿ ಹಾಕಿಕೊಂಡು ವಿಷಯವಾರು ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಪುನರಾವರ್ತನೆಯ ಅಗತ್ಯವಿರುವ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ತರಗತಿಗಳಿಗೆ ಹಾಜರಾಗಬಹುದು’ ಎಂದು ಬೆಂಗಳೂರು ವಿ.ವಿ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆದರೆ, ಆಫ್‌ಲೈನ್‌ ತರಗತಿಗಳನ್ನು ಆರಂಭಿಸುವ ಮುನ್ನ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿರಬೇಕು. ಈ ಅವಧಿಯಲ್ಲಿ ಅಂತಿಮ ವರ್ಷದ ಬಿ.ಎಸ್ಸಿ, ಎಂ.ಎಸ್ಸಿ ವಿದ್ಯಾರ್ಥಿಗಳಿಗೆ ಲ್ಯಾಬ್‌ನಲ್ಲಿ ಪ್ರಾಯೋಗಿಕ ತರಗತಿಗಳನ್ನು ತೆಗೆದುಕೊಳ್ಳಬಹುದು’ ಎಂದರು.

2 ಲಕ್ಷ ವಿದ್ಯಾರ್ಥಿಗಳು:ಬೆಂಗಳೂರು ವಿಶ್ವವಿದ್ಯಾಲಯ ಮೂರು ವಿ.ವಿಗಳಾಗಿ ವಿಭಜನೆಯಾಗಿದ್ದರೂ ಇಲ್ಲಿನ ಪದವಿಯ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳು ಇನ್ನೂ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ 700 ಕಾಲೇಜುಗಳ ಎರಡು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಕುಲಪತಿ ವಿವರಿಸಿದರು.

’ಕೆಲ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ಸಂದರ್ಶನ (ವೈವಾ) ಎದುರಿಸಬೇಕಿರುತ್ತದೆ. ಅಂತಹ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ಬಳಿಕ ಸಂದರ್ಶನವನ್ನು ‘ಆಫ್‌ಲೈನ್‌’ ಅಥವಾ ‘ಆನ್‌ಲೈನ್‌’ ಮೂಲಕ ನಡೆಸಲು ಅವಕಾಶ ನೀಡಲಾಗಿದೆ‘ ಎಂದು ಅವರು ಹೇಳಿದರು.

ಪದವಿಯ 1, 3, ಮತ್ತು 5ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಿಂದಲೇ ಆನ್‌ಲೈನ್‌ ತರಗತಿಗಳು ಆರಂಭವಾಗಲಿವೆ. ಅವರಿಗೆ ‘ಆಫ್‌ಲೈನ್‌’ ತರಗತಿಗಳು ಆಕ್ಟೋಬರ್‌ನಲ್ಲಿ ಪ್ರಾರಂಭವಾಗಲಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT