ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಕಳಿಪುರ ಕಾರಿಡಾರ್‌ ಕಾಮಗಾರಿಗೆ ಬೇಕು ಇನ್ನಷ್ಟು ಕಾಲಾವಕಾಶ: ರೈಲ್ವೆ ಇಲಾಖೆ

ಬಿಬಿಎಂಪಿ: ಆಡಳಿತಾಧಿಕಾರಿ, ಆಯುಕ್ತರಿಂದ ವಿವಿಧ ಕಾಮಗಾರಿ ತಪಾಸಣೆ
Last Updated 28 ಸೆಪ್ಟೆಂಬರ್ 2020, 11:39 IST
ಅಕ್ಷರ ಗಾತ್ರ

ಬೆಂಗಳೂರು: ಐದು ವರ್ಷಗಳಿಂದ ತೆವಳುತ್ತಾ ಸಾಗುತ್ತಿರುವ ಓಕಳಿಪುರ ಅಷ್ಟಪಥ ಕಾರಿಡಾರ್‌ ಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಇಲ್ಲಿ ತುಮಕೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಹಳಿ ಕೆಳಗಿನ ಬಾಕ್ಸ್‌ ಪುಷಿಂಗ್‌ ಕಾಮಗಾರಿಗೆ ಇನ್ನೂ ಮೂರು ತಿಂಗಳು ಕಾಲವಕಾಶಬೇಕು ಎಂದು ರೈಲ್ವೆ ಇಲಾಖೆ ಕೋರಿದೆ. ಚೆನ್ನೈ ಕಡೆಗೆ ಸಾಗುವ ಹಳಿ ಕೆಳಗೆ ಬಾಕ್ಸ್‌ ಪುಷಿಂಗ್‌ ಕಾಮಗಾರಿಯೂ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಹಾಗೂ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳನ್ನು ಸೋಮವಾರ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಓಕಳಿಪುರ ಕಾರಿಡಾರ್‌ನ ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಇಲಾಖೆ ಎಂಜಿನಿಯರ್‌ಗಳು, ‘ತುಮಕೂರು ಕಡೆಗೆ ಸಾಗುವ ರೈಲ್ವೆ ಹಳಿ ಕೆಳಗೆ 11 ಮೀ. ಅಗಲದ ಬಾಕ್ಸ್ ಅಳವಡಿಸಬೇಕಿದೆ. ಈ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

ಮಂಜುನಾಥ ಪ್ರಸಾದ್‌, ‘ಸಮನ್ವಯ ಕುರಿತು ಏನೇ ಸಮಸ್ಯೆ ಇದ್ದರೂ ತಿಳಿಸಿ. ಅವುಗಳನ್ನು ಬಗೆಹರಿಸುತ್ತೇವೆ. ಆದರೆ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ’ ಎಂದು ಸೂಚಿಸಿದರು.

‘ಚೆನ್ನೈ ಕಡೆ ಹೋಗುವ ರೈಲ್ವೆ ಹಳಿ ಕೆಳಗೆ ಎರಡು ಬಾಕ್ಸ್ ನಿರ್ಮಾಣವನ್ನೂ ಚುರುಕುಗೊಳಿಸಬೇಕು. ಬಿಬಿಎಂಪಿ, ರೈಲ್ವೆ ಇಲಾಖೆ, ಕೆಪಿಟಿಸಿಎಲ್ ಹಾಗೂ ಜಲಮಂಡಳಿ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ವಿದ್ಯುತ್ ಮಾರ್ಗದ ಸ್ಥಳಾಂತರ ಹಾಗೂ ಮೂಲಸೌಕರ್ಯ ಕೊಳವೆಗಳ ಸ್ಥಳಾಂತರಕ್ಕೂ ಶೀಘ್ರ ಕ್ರಮಕೈಗೊಳ್ಳಬೇಕು’ ಎಂದು ಗೌರವ್‌ ಗುಪ್ತ ಸೂಚನೆ ನೀಡಿದರು.

2015ರ ಜುಲೈನಲ್ಲಿ ಆರಂಭವಾದ ಓಕಳಿಪುರ ಕಾರಿಡಾರ್‌ ಕಾಮಗಾರಿ ಐದು ವರ್ಷಗಳ ಬಳಿಕವೂ ಪೂರ್ಣಗೊಂಡಿಲ್ಲ. ಮೂಲ ಗುತ್ತಿಗೆ ಪ್ರಕಾರ ಕಾಮಗಾರಿ 18 ತಿಂಗಳ ಒಳಗೆ ಪೂರ್ಣಗೊಳ್ಳಬೇಕಿತ್ತು.

ಮೇಲ್ಸೇತುವೆ ಕಾಮಗಾರಿಗಳಿಗೂ ಗ್ರಹಣ

ಪಶ್ಚಿಮ ಕಾರ್ಡ್‌ ರಸ್ತೆಯ ಶಿವನಗರ ಜಂಕ್ಷನ್ ಬಳಿ ಹಾಗೂ ಬಸವೇಶ್ವರ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದರು.

ಕೋವಿಡ್ ಸಮಯದಲ್ಲಿ ಸಿಬ್ಬಂದಿ ಕೊರತೆಯಿಂದ ಕಾಮಗಾರಿ ನಡೆದಿರಲಿಲ್ಲ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದರು.

‘ಪ್ರತಿ 15 ದಿನಕೊಮ್ಮೆ ಪ್ರಗತಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಿದ್ದೇವೆ’ ಎಂದು ಆಯುಕ್ತರು ಭರವಸೆ ನೀಡಿದರು.

ಈ ಕಾಮಗಾರಿಗೆ 2016ರಲ್ಲಿ ಯೋಜನೆ ರೂಪಿಸಲಾಗಿತ್ತು. ಸ್ಥಳಿಯರ ಬೇಡಿಕೆ ಮೇರೆಗೆ ಕಾಮಗಾರಿಗಳಲ್ಲಿ ಕೆಲವು ಮಾರ್ಪಾಡು ಮಾಡಲಾಗಿತ್ತು.

ಉಕ್ಕಿನ ಸೇತುವೆ ಕಾಮಗಾರಿ: 2021 ಏಪ್ರಿಲ್‌ ಗಡುವು

‘ಶಿವಾನಂದ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ493 ಮೀ ಉದ್ದದ ಉಕ್ಕಿನ ಸೇತುವೆ ಕಾಮಗಾರಿ ಅನುಷ್ಠಾನಕ್ಕೆ ಇದ್ದ ಕಾನೂನು ತೊಡಕು ನಿವಾರಣೆ ಆಗಿದೆ. ಹಾಗಾಗಿ ಕಾಮಗಾರಿಯನ್ನು ಮತ್ತಷ್ಟು ವಿಳಂಬಕ್ಕೆ ಅವಕಾಶವಿಲ್ಲ. 2021ರ ಏಪ್ರಿಲ್ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂದು ಆಯುಕ್ತರು ಸೂಚಿಸಿದರು.

‘ಇಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಹಾಗೂ ಶಿವಾನಂದ ರೈಲ್ವೆ ಹಳಿ ಬಳಿ ಸುಮಾರು 600 ಚ.ಮೀ. ರಸ್ತೆ ವಿಸ್ತರಣೆ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ಇಲ್ಲಿನ ಮರಗಳ ಕೊಂಬೆಗಳನ್ನು ಕತ್ತರಿಸಬೇಕಿದೆ’ ಎಂದು ಎಂಜಿನಿಯರ್‌ ತಿಳಿಸಿದರು.

ಸಂಚಾರ ಪೊಲೀಸರ ಬಳಿ ಚರ್ಚಿಸಿ ವಾಹನ ಸಂಚಾರ ಮಾರ್ಗ ಬದಲಾಯಿಸುವಂತೆ ಸೂಚಿಸುತೇನೆ’ ಎಂದು ಆಯುಕ್ತರು ತಿಳಿಸಿದರು.

ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ರಮೇಶ್, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT