‘ಕುರ್ಚಿಯಲ್ಲಿ ಕೂರಿಸುವವರು ಕೆಳಗಿಳಿಸುವವರು ಜನರೇ’

7
ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ

‘ಕುರ್ಚಿಯಲ್ಲಿ ಕೂರಿಸುವವರು ಕೆಳಗಿಳಿಸುವವರು ಜನರೇ’

Published:
Updated:

ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುರ್ಚಿಯಲ್ಲಿ ಕೂರಿಸುವವರು ಜನಗಳು. ಕೆಳಗಿಳಿಸುವವರೂ ಜನಗಳೇ. ಮೇಲಿದ್ದವರು ಕೆಳಗೆ ಬರಬೇಕು, ಕೆಳಗಿದ್ದವರು ಮೇಲೆ ಬರಬೇಕು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಓಕಳೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೊಟ್ಟ ಮಾತಿನಂತೆ ನಾವು (ಕಾಂಗ್ರೆಸ್) ನಡೆದುಕೊಂಡಿದ್ದೇವೆ ಎಂಬ ಆಧಾರದ ಮೇಲೆ ಕಳೆದ ವಿಧಾನಸಭೆ ಚುನಾವಣೆ ನಡೆಯುತ್ತಿದ್ದರೆ ನಾವೇ ಗೆಲ್ಲುತ್ತಿದ್ದೆವು. ಆದರೆ, ಚುನಾವಣೆ ಅದರ ಮೇಲೆ ನಡೆಯಲಿಲ್ಲ. ಹೀಗಾಗಿ ಸೋತೆವು’ ಎಂದು ವಿಶ್ಲೇಷಿಸಿದರು.

‘ದಿನೇಶ್ ಗೂಂಡೂರಾವ್‌ ಅವರನ್ನು ನಾನು ಮಂತ್ರಿ ಮಾಡಿದ್ದೆ. ಬಳಿಕ ಪಕ್ಷದ ಕೆಲಸಕ್ಕೆ ನಿಯೋಜಿಸಿದೆ. ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಎದುರಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಮೂಡಿಬಂತು’ ಎಂದರು.

‘ರಾಜ್ಯದಲ್ಲಿ, ದೇಶದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಕಟ್ಟಲು ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.

‘ಸಿದ್ದರಾಮಯ್ಯ ಅವರ ಹೋರಾಟ, ಕೆಚ್ಚು, ಎದೆಗಾರಿಗೆ, ಧೈರ್ಯದಿಂದ ಎದ್ದು ಬಂದವರು. ಅವರು ನೇರವಾಗಿ ಮಾತನಾಡುತ್ತಾರೆ. ಹೀಗಾಗಿ ಅವರ ಮಾತುಗಳು ಕೆಲವೊಮ್ಮೆ ಕಂಟಕ ಆಗುತ್ತದೆ’ ಎಂದರು.

‘ಸಿದ್ದರಾಮಯ್ಯ ಧರ್ಮ ದ್ವೇಷಿಯೂ ಅಲ್ಲ. ದೇವರ ದ್ವೇಷಿಯೂ ಅಲ್ಲ. ಜನರೊಳಗೆ ಇದ್ದೇ ಎಲ್ಲರಿಗೂ ಸಮಾನತೆ‌ ನೀಡುವವರು. ಆದರೆ, ಅವರನ್ನು ‌ರಾಜಕೀಯ ಬಣ್ಣ ನೀಡಿ ಬಿಂಬಿಸಿದರು’ ಎಂದು ‌ಬಾರಕೂರು ಮಹಾಸಂಸ್ಥಾನದ ಸಂತೋಷ್ ಸ್ವಾಮೀಜಿ ಹೇಳಿದರು.

‘ಡಂಬಾಚಾರಿಗಳನ್ನು ಪೋಷಿಸದ ಸಿದ್ದರಾಮಯ್ಯ, ಸಮಾಜದ ಉದ್ಧಾರಕ್ಕಾಗಿ ದುಡಿಯುವ ಸ್ವಾಮೀಜಿಗಳಿಗೆ ಬೆಂಬಲ ನೀಡಿದ್ದಾರೆ. ಅವರು ಅಧಿಕಾರ ಕಳೆದುಕೊಂಡಿದ್ದಾರೆಯೇ ವಿನಾ, ಗಾಂಭೀರ್ಯ ಕಳೆದುಕೊಂಡಿಲ್ಲ. ಮತ್ತೊಮ್ಮೆ ಅವರು ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡ ವೀರಣ್ಣ ಮತ್ತಿಕಟ್ಟಿ ಮಾತನಾಡಿದರು.

ಗುರೂಜಿಗೆ ವೇದಿಕೆಯಲ್ಲೇ ‌ಪಾಠ!

‘ಟಿಪ್ಪು ಜಯಂತಿ ವಿರೋಧಿಸುತ್ತೇನೆ’ ಎಂದಿದ್ದ ಸಂತೋಷ್‌ ಗುರೂಜಿಗೆ ಸಿದ್ದರಾಮಯ್ಯ ವೇದಿಕೆಯಲ್ಲೇ ಪಾಠ ಮಾಡಿದರು.

‘ಟಿಪ್ಪು ಅನ್ನು ಯಾಕೆ ವಿರೋಧಿಸುತ್ತೀರಿ. ಅವನು ಬ್ರಿಟಿಷರ ವಿರುದ್ಧ ಹೋರಾಡಲಿಲ್ಲವೇ? ನಾಡು, ನುಡಿಗಾಗಿ ತನ್ನ ಮಕ್ಕಳನ್ನೇ ಒತ್ತೆ ಇಡಲಿಲ್ಲವೇ. ಬೇರೆ ಯಾರಾದರೂ ಆಗಿದ್ದರೆ ಹೀಗೆ ಮಾಡುತ್ತಿದ್ರಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಕಾಯಿಲೆ ಬಿದ್ದಾಗ ರಕ್ತ ಬೇಕಿರುತ್ತದೆ. ಆಗ ಯಾರ ರಕ್ತವೆಂದು ನೋಡುತ್ತೇವೆಯೇ. ಮುಸ್ಲಿಮರದ್ದೇ ಆಗಲಿ, ಕ್ರಿಶ್ಚಿಯನರದ್ದೇ ಆಗಲಿ, ಇನ್ಯಾರದ್ದೇ ಆಗಲಿ ತೆಗೆದುಕೊಳ್ಳುತ್ತೇವೆ ಅಲ್ಲವೇ’ ಎಂದೂ ಪ್ರಶ್ನಿಸಿದರು.

‘ಕಳೆದ ಚುನಾವಣೆಯಲ್ಲಿ ಹಿಂದು, ಜಾತಿ, ಧರ್ಮದ ಹೆಸರಿನಲ್ಲಿ ನಮ್ಮನ್ನು ಸೋಲಿಸಲಾಯಿತು. ಇದು ಅಫೀಮ್ ಇದ್ದಂತೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೀಗೆ ಆಗಬಾರದು’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !