ಒಕ್ಕಲಿಗರ ಸಂಘಕ್ಕೆ ಜಮೀನು: ರದ್ದತಿ ಕೋರಿ ಪಿಐಎಲ್‌

7

ಒಕ್ಕಲಿಗರ ಸಂಘಕ್ಕೆ ಜಮೀನು: ರದ್ದತಿ ಕೋರಿ ಪಿಐಎಲ್‌

Published:
Updated:

ಬೆಂಗಳೂರು: ‘ಬೆಂಗಳೂರು ಉತ್ತರ ತಾಲ್ಲೂಕಿನ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಶ್ರೀಗಂಧ ಕಾವಲು ಪ್ರದೇಶದ ಸರ್ವೇ ನಂ 130ರಲ್ಲಿ ಒಕ್ಕಲಿಗರ ಸಂಘಕ್ಕೆ 10 ಎಕರೆ ಜಮೀನಿನ ಗುತ್ತಿಗೆ ನವೀಕರಣ ಮಾಡಿರುವುದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತಂತೆ ವಕೀಲ ಎಸ್‌.ಉಮಾಪತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಕೋರ್ಟ್‌ಗೆ ಒದಗಿಸಿ’ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಆಕ್ಷೇಪಣೆ ಏನು?: ‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಈ ಪ್ರದೇಶದ ಗುತ್ತಿಗೆಯನ್ನು ಕಾನೂನು ಬಾಹಿರವಾಗಿ ನವೀಕರಿಸಲಾಗಿದೆ. ವಾಸ್ತವದಲ್ಲಿ 1997ರಲ್ಲೇ ಗುತ್ತಿಗೆ ಪರವಾನಗಿ ಮುಕ್ತಾಯಗೊಂಡಿದ್ದರೂ ಗುತ್ತಿಗೆ ಮುಂದುವರಿಸಲಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

‘ನಿಗದಿತ ಬಾಡಿಗೆ ಪಾವತಿ ಮಾಡಿಲ್ಲ. 2012ರಲ್ಲಿ ಬಾಡಿಗೆ ನಿಗದಿಗೊಳಿಸಲಾಗಿದ್ದು ಇದು ಚಾಲ್ತಿ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಇದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹6 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಆದ್ದರಿಂದ ಜಮೀನು ಮಂಜೂರಾತಿಯನ್ನು ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಈ ಜಮೀನನ್ನು ಶೈಕ್ಷಣಿಕ ಚಟುವಟಿಕೆಗಳ ಉದ್ದೇಶಕ್ಕಾಗಿ 1967ರಲ್ಲಿ ಒಕ್ಕಲಿಗರ ಸಂಘಕ್ಕೆ ಮಂಜೂರು ಮಾಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !