ಭಾನುವಾರ, ಜೂನ್ 26, 2022
25 °C
ದರ ಏರಿಕೆಯಿಂದ ಜನ ಕಂಗಾಲು l ಸೇವೆ ಬಗ್ಗೆ ಅಸಮಾಧಾನ

ಪ್ರಯಾಣಿಕರ ಮೇಲೆ ಓಲಾ, ಉಬರ್‌ ‘ಸವಾರಿ’; ದರ ಏರಿಕೆಯಿಂದ ಜನ ಕಂಗಾಲು

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆ್ಯ‍ಪ್‌ ಆಧಾರಿತ ಆಟೊ, ಟ್ಯಾಕ್ಸಿ ಒದಗಿಸುವ ಓಲಾ, ಉಬರ್‌ ಕಂಪನಿಗಳು ‘ಸಮಯ–ಸಂದರ್ಭಕ್ಕೆ’ ಅನುಗುಣವಾಗಿ ಮನಸೋ ಇಚ್ಛೆ ದರ ಏರಿಕೆ ಮಾಡುತ್ತಿದ್ದು, ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. 

ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಮೊದಲು ಹಲವು ರಿಯಾ ಯಿತಿಗಳ ಜೊತೆಗೆ ಗುಣಮಟ್ಟದ ಸೇವೆ ಓದಗಿಸುತ್ತಿದ್ದ ಈ ಸಂಸ್ಥೆಗಳು ಈಗ ಪ್ರಯಾಣಿಕರ ಹಿತ ಕಡೆಗಣಿಸುತ್ತಿರುವ ಆರೋಪ ಕೇಳಿಬಂದಿದೆ. ದರ ಏರಿಕೆ ಮೂಲಕ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವುದಕ್ಕೆ ಆಕ್ರೋಶವೂ ವ್ಯಕ್ತವಾಗುತ್ತಿದೆ.

‘ಹನುಮಂತನಗರದಿಂದ ಮೆಜೆಸ್ಟಿಕ್‌ಗೆ ಆಗಾಗ ಆ್ಯಪ್‌ ಆಧಾರಿತ ಸೇವೆ ಒದಗಿಸುವ ಆಟೊದಲ್ಲಿ ಓಡಾಡುತ್ತಿದ್ದೆ. ಕೆಲ ದಿನಗಳ ಹಿಂದೆ ₹40 ಇದ್ದ ದರ ಈಗ ₹70ಕ್ಕೆ ಹೆಚ್ಚಿಸಲಾಗಿದೆ. ಈ ಬಗ್ಗೆ ಚಾಲಕರನ್ನು ಪ್ರಶ್ನಿಸಿದರೆ ನಮಗೇನೂ ಗೊತ್ತಿಲ್ಲ ಎಂದು ಹೇಳುತ್ತಾರೆ. ತುರ್ತು ಕೆಲಸಗಳಿಗಾಗಿ ಆ್ಯಪ್‌ ಆಧಾರಿತ ಆಟೊ ಹಾಗೂ ಟ್ಯಾಕ್ಸಿ ಸೇವೆ ಅವಲಂಬಿಸುವುದು ಅನಿವಾರ್ಯ. ಇದನ್ನೇ ಅಸ್ತ್ರವಾಗಿ ಟ್ಟುಕೊಂಡು ಸುಲಿಗೆಗೆ ಇಳಿದರೆ ನಾಗರಿಕರ ಪಾಡೇನು’ ಎನ್ನುತ್ತಾರೆ ಐಟಿ ಉದ್ಯೋಗಿ ವಿನೋದ್‌ ಗೌಡ.

‘ತುರ್ತು ಸಂದರ್ಭದಲ್ಲಿ ಕಚೇರಿ, ಮನೆ ಅಥವಾ ಇತರ ಸ್ಥಳಗಳಿಗೆ ಹೋಗಲು ಜನರು ಓಲಾ, ಉಬರ್‌ ಮೊರೆ ಹೋಗುತ್ತಾರೆ. ತಾವಿರುವಲ್ಲಿಗೆ ಆಟೊ ಬಂದೇ ಬಿಟ್ಟಿತು ಅನ್ನುವಷ್ಟರಲ್ಲಿ ‘ಟ್ರಿಪ್‌’ ಕ್ಯಾನ್ಸಲ್‌ ಎಂಬ ಸಂದೇಶ ಬರುತ್ತದೆ. ಬಳಿಕ ಮತ್ತೊಂದು ಆಟೊ ಅಥವಾ ಟ್ಯಾಕ್ಸಿ ಕಾಯ್ದಿರಿಸಬೇಕು. ಅದು ಬರುವವರೆಗೂ ಕಾಯಬೇಕು. ಈ ಪ್ರಕ್ರಿಯೆಯಲ್ಲೇ ಸಮಯ ವ್ಯರ್ಥವಾಗು ತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಳೆ ಬಂದರೆ ಓಲಾ, ಉಬರ್‌ ಕಂಪನಿಗಳಿಗೆ ಹಬ್ಬ! ಅದನ್ನೇ ನೆಪವಾಗಿ ಟ್ಟುಕೊಂಡು ಪ್ರಯಾಣ ದರ ಏರಿಕೆ ಮಾಡುತ್ತವೆ. ನಾಗರಿಕರು ವಿಧಿ ಇಲ್ಲದೆ ಅಷ್ಟು ಮೊತ್ತ ಪಾವತಿಸಿ ನಿಗದಿತ ಸ್ಥಳಗಳಿಗೆ ತಲುಪಬೇಕು’ ಎಂದು ಶ್ರೀನಿವಾಸ ನಗರದ ರವಿ ಹೇಳಿದರು.

‘ಕೋರಮಂಗಲದಿಂದ ಎಂ.ಜಿ.ರಸ್ತೆಗೆ ಹೋಗಲು ಬೆಳಿಗ್ಗೆ ಆಟೊ ಬುಕಿಂಗ್‌ ಮಾಡಿದರೆ ಆ್ಯಪ್‌ನಲ್ಲಿ ₹200 ರಿಂದ ₹300 ಮೊತ್ತ ತೋರಿಸುತ್ತದೆ. ಸಂಜೆ 7 ಗಂಟೆ ವೇಳೆಗೆ ಅದು ₹600 ರಿಂದ ₹700 ಎಂದಾಗಿರುತ್ತದೆ. ಮಳೆ ಬಂದರೆ ₹900 ಮೊತ್ತ ತೋರಿಸುತ್ತದೆ. ಹೀಗೆ ಸಂದರ್ಭಕ್ಕೆ ಅನುಗುಣವಾಗಿ ದರ ನಿಗದಿ ಮಾಡುವುದು ಕಂಪನಿಗಳು. ಆದರೆ ಪ್ರಯಾಣಿಕರು ನಮ್ಮ ಮೇಲೆ ಬೇಸರ ಮಾಡಿಕೊಳ್ಳುತ್ತಾರೆ’ ಎಂದು ಚಾಲಕರೊಬ್ಬರು ತಿಳಿಸಿದರು.

‘ಕಿ.ಮೀ.ಗೆ ₹21 ರಿಂದ ₹41ರವರೆಗೂ ದರ ನಿಗದಿ ಮಾಡಬಹುದೆಂಬ ನಿಯಮವಿದೆ. ಕಂಪನಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರ ಜೊತೆಗೆ ಚಾಲಕರಿಗೂ ತೊಂದರೆ ಕೊಡುತ್ತಿದ್ದಾರೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು