ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದರಾಯನಪುರ: ಪ್ರತಿ ಮನೆಯವರ ಗಂಟಲ ದ್ರವ ಪರೀಕ್ಷೆ

ಸಮುದಾಯಕ್ಕೆ ಸೋಂಕು ಹಬ್ಬಿರುವ ಆತಂಕ
Last Updated 11 ಮೇ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿರುವ ಪಾದರಾಯನಪುರ ವಾರ್ಡ್‌ನಲ್ಲಿ ಸಮುದಾಯಕ್ಕೂ ಸೋಂಕು ಹಬ್ಬಿರುವ ಆತಂಕ ವ್ಯಕ್ತವಾಗಿದೆ. ಹಾಗಾಗಿ ಇಲ್ಲಿನ ಪ್ರತಿಯೊಬ್ಬ ನಿವಾಸಿಗಳ ಅಥವಾ ಪ್ರತಿ ಮನೆಯಲ್ಲೂ ಒಬ್ಬರ ಗಂಟಲ ದ್ರವ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

ಇತ್ತೀಚೆಗೆ ಇತ್ತೀಚೆಗೆ ಕೋವಿಡ್‌– 19 ಸೋಂಕಿತರ ಜೊತೆ ಯಾವುದೇ ಸಂಪರ್ಕವೇ ಇಲ್ಲದ 216 ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಏಳು ಮಂದಿಗೆ ಸೋಂಕು ಇರುವುದು ಪತ್ತೆಯಾಗಿತ್ತು.

ಈ ವಾರ್ಡ್‌ನಲ್ಲಿ ಇದುವರೆಗೆ 46 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಇಬ್ಬರು ನವದೆಹಲಿಯಲ್ಲಿ ತಬ್ಲೀಗ್‌ ಜಮಾತ್‌ನಲ್ಲಿ ಭಾಗವಹಿಸಿದ ಹಿನ್ನೆಲೆ ಹೊಂದಿದ್ದಾರೆ. ಸೋಂಕಿತರ ಜೊತೆ ನೇರ ಸಂಪರ್ಕದಿಂದ 16 ಮಂದಿಗೆ ಹಾಗೂ ಉಳಿದವರಿಗೆ ಪರೋಕ್ಷ ಸಂಪರ್ಕದಿಂದ ಸೋಂಕು ತಗುಲಿದೆ. ಇಲ್ಲಿ ಕೋವಿಡ್‌ 19 ರೋಗಿಗಳ ನೇರ ಸಂಪರ್ಕ ಹೊಂದಿದ್ದ 125 ಮಂದಿಯನ್ನು ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ 140 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

‘ಈ ವಾರ್ಡ್‌ನಲ್ಲಿ ಒಟ್ಟು 45 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಅಷ್ಟೂ ಜನರ ಗಂಟಲದ್ರವ ಪರೀಕ್ಷೆಗೆ ಸಾಕಷ್ಟು ಮೂಲಸೌಕರ್ಯ ಅಗತ್ಯವಿದೆ. ಹಾಗಾಗಿ ಪ್ರತಿಯೊಬ್ಬ ನಿವಾಸಿಯ ಗಂಟಲ ದ್ರವವನ್ನು ಪರೀಕ್ಷೆ ನಡೆಸಬೇಕೋ ಅಥವಾ ಮನೆಯಲ್ಲಿ ಒಬ್ಬರ ಗಂಟಲ ದ್ರವ ಪರೀಕ್ಷೆ ನಡೆಸಿ, ಅವರಿಗೆ ಸೋಂಕು ಕಂಡು ಬಂದರೆ ಕುಟುಂಬದ ಉಳಿದ ಸದಸ್ಯರ ಗಂಟಲ ದ್ರವ ಪರೀಕ್ಷೆ ನಡೆಸಬೇಕೋ ಎಂಬ ಬಗ್ಗೆ ಚರ್ಚೆ ನಡೆದಿದೆ. ಗಂಟಲ ದ್ರವದ ಮಾದರಿ ಸಂಗ್ರಹಿಸಲು ಸಂಚಾರಿ ಕೇಂದ್ರವನ್ನು ಆರಂಭಿಸುವ ಚಿಂತನೆ ಇದೆ. ಈ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬರಲಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸದ್ಯಕ್ಕೆ ಪಾದರಾಯನಪುರ ವಾರ್ಡ್‌ನಲ್ಲಿ ಮಾತ್ರ ವ್ಯಾಪಕವಾಗಿ ಸ್ಥಳೀಯರ ಗಂಟಲ ದ್ರವ ಪರೀಕ್ಷೆ ನಡೆಸಲಿದ್ದೇವೆ. ಇದಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ಹೊಂಗಸಂದ್ರ ವಾರ್ಡ್‌ನಲ್ಲಿ ಈ ರೀತಿ ವ್ಯಾಪಕವಾಗಿ ಪರೀಕ್ಷೆ ನಡೆಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ತಿಳಿಸಿದರು.

ಆರ್‌.ಆರ್‌.ನಗರ ಇನ್ನು ಕಂಟೈನ್‌ಮೆಂಟ್‌ ವಾರ್ಡ್‌ ಅಲ್ಲ

ಇತ್ತೀಚೆಗೆ ಕೋವಿಡ್‌ 19ನ ಯಾವುದೇ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಆರ್‌.ಆರ್‌.ನಗರ ವರ್ಡ್ ಅನ್ನು ನಿಯಂತ್ರಿತ (ಕಂಟೈನ್‌ಮೆಂಟ್) ಪ್ರದೇಶವನ್ನು ಹೊಂದಿರುವ ವಾರ್ಡ್‌ಗಳ ಪಟ್ಟಿಯಿಂದ ಸೋಮವಾರ ಕೈಬಿಡಲಾಗಿದೆ. ಇದರೊಂದಿಗೆ ಇಂತಹ ವಾರ್ಡ್‌ಗಳ ಸಂಖ್ಯೆ 18ಕ್ಕೆ ಇಳಿದಿದೆ.

‘ಬಸವನಗುಡಿ ಸೀಲ್‌ಡೌನ್‌ ಆಗಿಲ್ಲ’

‘ಬಸವನಗುಡಿಯನ್ನು ಕೂಡಾ ಸೀಲ್‌ ಡೌನ್‌ ಮಾಡಲಾಗಿದೆ. ಇಲ್ಲಿ ಸಂಚರಿಸಬೇಡಿ’ ಎಂಬ ಸಂದೇಶ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿತ್ತು. ಇದನ್ನು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅಲ್ಲಗಳೆದಿದ್ದಾರೆ. ‘ಇದು ತಪ್ಪು ಮಾಹಿತಿ. ಇಂತಹ ವದಂತಿಗೆ ಕಿವಿಗೊಡಬೇಡಿ’ ಎಂದು ಅವರು ತಿಳಿಸಿದರು.

‘ಇತ್ತೀಚೆಗೆ ಕೋವಿಡ್‌ 19 ರೋಗದಿಂದ ಮೃತಪಟ್ಟ ಮಹಿಳೆಯೊಬ್ಬರಿಗೆ ಬಸವನಗುಡಿಯ ಶೇಖರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯ ಎಲ್ಲ ವೈದ್ಯರನ್ನು ಹಾಗೂ ರೋಗಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆ ಆಸ್ಪತ್ರೆಗೆ ಸೋಂಕು ನಿವಾರಕ ಸಂಪಡಿಸಲಾಗಿದೆ. ಹಾಗಾಗಿ ಅಲ್ಲಿ ಎರಡು ಮೂರು ದಿನ ಆ ಆಸ್ಪತ್ರೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ನಂತರ, ಬೇರೆ ವೈದ್ಯರು ಲಭ್ಯವಿದ್ದರೆ ಆಸ್ಪತ್ರೆಯನ್ನು ನಡೆಸುವುದಕ್ಕೆ ಅಭ್ಯಂತರ ಇಲ್ಲ’ ಎಂದು ಡಾ.ಬಿ.ಕೆ.ವಿಜಯೇಂದ್ರ ತಿಳಿಸಿದರು.

‘ಆ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂಬುದು ಕೂಡಾ ತಪ್ಪು ಮಾಹಿತಿ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT