ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳದ ಬಗ್ಗೆ ಧೈರ್ಯದಿಂದ ಪ್ರಶ್ನಿಸಿ: ಹೇಮಲತಾ ಮಹಿಷಿ

ಮನೆಯಿಂದಲೇ ಕೆಲಸ ಮಾಡುವಾಗಿನ ಸಮಸ್ಯೆಗಳು * ಎಐಎಂಎಸ್‌ಎಸ್‌ನಿಂದ ಚರ್ಚೆ
Last Updated 13 ಆಗಸ್ಟ್ 2020, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರು ಮನೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರು ಇದನ್ನೆಲ್ಲ ಸಹಿಸಿಕೊಳ್ಳದೆ ಪ್ರಶ್ನಿಸಬೇಕು. ಎಚ್ಚರಿಕೆ ನೀಡಬೇಕು. ಕೇಳದಿದ್ದಾಗ ಧೈರ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು’ ಎಂದು ಹಿರಿಯ ವಕೀಲರಾದ ಹೇಮಲತಾ ಮಹಿಷಿ ಸಲಹೆ ನೀಡಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು (ಎಐಎಂಎಸ್‌ಎಸ್‌) ‘ಮನೆಯಿಂದಲೇ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು’ ಕುರಿತು ಫೇಸ್‌ಬುಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಪದೇ ಪದೇ ಕರೆ ಮಾಡುವುದು, ಅಶ್ಲೀಲ ಸಂದೇಶ–ವಿಡಿಯೊ, ಚಿತ್ರಗಳನ್ನು ಕಳುಹಿಸುವ ಮೂಲಕವೂ ಕಿರುಕುಳ ನೀಡಲಾಗುತ್ತಿದೆ’ ಎಂದರು.

‘ಸಹೋದ್ಯೋಗಿಗಳು ಹೀಗೆ ವರ್ತಿಸುತ್ತಿದ್ದರೆ ಅವರಿಗೆ ಮೊದಲು, ಇದೆಲ್ಲ ಇಷ್ಟವಾಗುವುದಿಲ್ಲ ಎಂದು ಹೇಳಿ. ಅದರ ನಂತರವೂ ಮುಂದುವರಿದರೆ ದೂರು ನೀಡುವುದಾಗಿ ಸ್ಪಷ್ಟವಾಗಿ ಹೇಳಿ. ಕಿರುಕುಳ ನೀಡುವುದನ್ನು ಮುಂದುವರಿಸಿದರೆ ಧೈರ್ಯವಾಗಿ ದೂರು ನೀಡಿ’ ಎಂದು ಸಲಹೆ ನೀಡಿದರು.

‘ಲೈಂಗಿಕ ಕಿರುಕುಳದ ವಿರುದ್ಧ ಕಾನೂನು ಮೊರೆ ಹೋಗುವಾಗ ಮೊದಲು ಕುಟುಂಬದಲ್ಲಿಯೇ ಸಮಸ್ಯೆ ಎದುರಿಸಬೇಕಾಗುತ್ತದೆ. ನೀನೇ ಏನೋ ಮಾಡಿರಬೇಕು, ಅದಕ್ಕೆ ಅವರು ಹಾಗೆ ವರ್ತಿಸುತ್ತಾರೆ ಎಂದು ಮನೆಯವರೇ ಮೂದಲಿಸುತ್ತಾರೆ. ಆಗ ಒತ್ತಡ ಉಂಟಾಗುವುದು ಸಹಜ. ಅಲ್ಲದೆ, ಸಮಾಜವನ್ನೂ ಎದುರಿಸಬೇಕಾದ ತಲ್ಲಣವನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ಮನೋರೋಗ ತಜ್ಞ ಡಾ. ಶಶಿಧರ ಬೀಳಗಿ, ‘ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಅನೇಕರು ದ್ವಂದ್ವ ಭಾವ, ಮಾನಸಿಕ ಒತ್ತಡ, ಖಿನ್ನತೆಯಂತಹ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದರು.

‘ಎಷ್ಟೋ ಮನೆಗಳಲ್ಲಿ ದುಡಿಯುವವರು ಒಬ್ಬರೇ ಇರುತ್ತಾರೆ. ಉದ್ಯೋಗ ಕಳೆದುಕೊಳ್ಳುವ ಭೀತಿ ಇದ್ದರೆ ಇಂಥವರುತೀರಾ ಆತಂಕಕ್ಕೆ ಒಳಗಾಗುತ್ತಾರೆ. ಮನೆಯಲ್ಲಿ ಎಲ್ಲ ಇದ್ದರೂ ಒಂಟಿತನ ಅವರನ್ನು ಕಾಡುತ್ತದೆ. ಇಂತಹ ಬೇಸರಗಳು, ಒಂಟಿತನ ದೀರ್ಘಕಾಲ ಮುಂದುವರಿದಾಗ ಖಿನ್ನತೆಗೆ ಒಳಗಾಗುತ್ತಾರೆ’ ಎಂದರು.

‘ಕಚೇರಿಯ ಹಿರಿಯ ಸಹೋದ್ಯೋಗಿಗಳು ಕಿರಿಯ ಸಹೋದ್ಯೋಗಿಗಳ ಬಗ್ಗೆ ಅನುಭೂತಿ ಹೊಂದಿರಬೇಕು. ಅವರಿಗೂ ಕುಟುಂಬವಿದೆ. ಮನೆಯ ಕೆಲಸ, ಮಕ್ಕಳ ಆನ್‌ಲೈನ್‌ ತರಗತಿ ಮುಂತಾದವುಗಳ ಕಡೆ ಗಮನಹರಿಸಬೇಕಾದ ಒತ್ತಡವಿರುತ್ತದೆ. ಕಚೇರಿಯಲ್ಲಿ ಕೆಲಸ ಮಾಡಿದಂತೆಯೇ ಮನೆಯಲ್ಲಿಯೂ ಕೆಲಸ ಮಾಡಲಾಗುವುದಿಲ್ಲ ಎಂಬುದನ್ನು ಅರಿಯಬೇಕು. ಕೆಲಸ ಪೂರ್ಣಗೊಳಿಸಲು ಹೆಚ್ಚು ಸಮಯ ನೀಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT