ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ವಿತರಣೆ: ಕೈಗಳ ಸ್ವಚ್ಛತೆಗೆ ಆರೋಗ್ಯ ಇಲಾಖೆ ಸೂಚನೆ

ವಿತರಣಾ ಸಿಬ್ಬಂದಿಗೆ ಸೂಚನೆ
Last Updated 23 ಜುಲೈ 2020, 19:43 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್ ಮೂಲಕ ಖರೀದಿಸಿದ ವಸ್ತುಗಳು ಅಥವಾ ಆಹಾರವನ್ನು ಗ್ರಾಹಕರಿಗೆ ವಿತರಿಸುವ ಮೊದಲು ಹಾಗೂ ವಿತರಿಸಿದ ನಂತರ ಸೋಂಕು ನಿವಾರಕ ದ್ರಾವಣದಿಂದ (ಸ್ಯಾನಿಟೈಸರ್‌) ಕೈಗಳನ್ನು ಸ್ವಚ್ಛಮಾಡಿಕೊಳ್ಳಬೇಕು ಎಂದು ವಿತರಣಾ ಸಿಬ್ಬಂದಿಗೆ ಆರೋಗ್ಯ ಇಲಾಖೆಯು ಸೂಚಿಸಿದೆ.

ಈ ಬಗ್ಗೆ ಇಲಾಖೆಮಾರ್ಗಸೂಚಿ ಹೊರಡಿಸಿದ್ದು, ಆ್ಯಪ್ ಆಧಾರಿತ ಆಹಾರ ಹಾಗೂ ಇತರ ಸಾಮಗ್ರಿಗಳನ್ನು ಪೂರೈಸುವಕಂಪನಿಗಳ ಮಾಲೀಕರು, ಸಿಬ್ಬಂದಿಗೆ ಕಡ್ಡಾಯವಾಗಿ ಮುಖಗವಸುಗಳನ್ನು ವಿತರಿಸಬೇಕು. ವಿತರಕರು ಕೂಡ ಮಾಸ್ಕ್‌ ಧರಿಸಿಯೇ ಹೊರಗಡೆ ಸಂಚರಿಸಬೇಕು. 4 ರಿಂದ 6 ಗಂಟೆಗೊಮ್ಮೆ ಮಾಸ್ಕ್‌ಗಳನ್ನು ಬದಲಿಸಬೇಕು.ಗ್ರಾಹಕರಿಗೆ ನೀಡಲು ಸಿದ್ಧವಾದ ವಸ್ತುಗಳನ್ನು ಪಡೆಯುವ ಮುನ್ನ ವಿತರಕರುಸ್ಯಾನಿಟೈಸರ್‌ ಮೂಲಕ ಕೈಗಳನ್ನು ಸ್ವಚ್ಛಮಾಡಿಕೊಳ್ಳಬೇಕು. ನಿಗದಿತ ವ್ಯಕ್ತಿಗೆ ವಸ್ತುಗಳು ಅಥವಾ ಆಹಾರವನ್ನು ಹಸ್ತಾಂತರಿಸಿದ ಬಳಿಕ ಮತ್ತೊಮ್ಮೆ ಕೈಗಳನ್ನು ಸ್ವಚ್ಛಪಡಿಸಿಕೊಳ್ಳಬೇಕು. ಇದರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯ ಎಂದು ತಿಳಿಸಲಾಗಿದೆ.

ಗ್ರಾಹಕರೊಂದಿಗೆ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಬೇಕು. ಮನೆಯ ಬಾಗಿಲ ಹಿಡಿಕೆ ಅಥವಾ ಬೆಲ್‌ ಸ್ಪರ್ಶಿಸಬಾರದು. ಒಂದು ವೇಳೆ ಸ್ಪರ್ಶಿಸಿದಲ್ಲಿ ಸೋಂಕು ನಿವಾರಕದಿಂದ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ಡಿಜಿಟಲ್ ಹಣ ಪಾವತಿಗೆ ಗ್ರಾಹಕರನ್ನು ಪ್ರೋತ್ಸಾಹಿಸಬೇಕು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಟ್‌ ಬಳಸಿ ಹಣ ಪಾವತಿಸಿದಲ್ಲಿ ಯಂತ್ರವನ್ನು ಕೂಡ ಸ್ವಚ್ಛಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಗ್ರಾಹಕರಿಗೆ ಮನವಿ:ವಿವಿಧ ಆ್ಯಪ್‌ ಆಧಾರಿತ ಆಹಾರ ಪೂರೈಕೆ ಕಂಪನಿಗಳಿಂದ ನೀಡುವ ಆಹಾರದ ಪೊಟ್ಟಣವನ್ನು ನೇರವಾಗಿ ಪಡೆಯಬೇಡಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ. ಮನೆಯ ಪ್ರವೇಶ ದ್ವಾರ ಅಥವಾ ಸ್ವಾಗತ ಕೇಂದ್ರದಲ್ಲಿ ಇರಿಸಲು ವಿತರಕರಿಗೆ ತಿಳಿಸಿ. ಇದರಿಂದ ಪರಸ್ಪರ ಅಂತರ ಕಾಪಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT