ಬುಧವಾರ, ನವೆಂಬರ್ 20, 2019
27 °C
ಅವ್ಯವಹಾರ ತಪ್ಪಿಸಲು ಬಿಡಿಎ ಕ್ರಮ

‘ಖಚಿತ ಅಳತೆ ವರದಿ’ಗೆ ಆನ್‌ಲೈನ್‌ ವ್ಯವಸ್ಥೆ

Published:
Updated:

ಬೆಂಗಳೂರು: ನಿವೇಶನಗಳ ಖಚಿತ ಅಳತೆ ವರದಿಗಳನ್ನು (ಸಿ.ಡಿ.ಆರ್‌) ನೀಡುವ ಪ್ರಕ್ರಿಯೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಆನ್‌ಲೈನ್ ವ್ಯವಸ್ತೆಯನ್ನು ಜಾರಿಗೊಳಿಸಿದೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಡಿಎ ಆಯುಕ್ತ ಜಿ.ಸಿ.ಪ್ರಕಾಶ್‌, ‘ನಿವೇಶನಗಳ ಸಿ.ಡಿ.ಆರ್‌ ನೀಡಲು ಸಂಬಂಧಪಟ್ಟ ಎಂಜಿನಿಯರ್‌ಗಳು ಸತಾಯಿಸುತ್ತಿದ್ದರು ಎಂಬ ಬಗ್ಗೆ ದೂರುಗಳು ಬಂದಿದ್ದವು. ಅನೇಕ ಸೇವೆಗಳನ್ನು ಪ್ರಾಧಿಕಾರವು ಈಗಾಗಲೇ ‘ಇ–ಕಚೇರಿ’ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಪಾರದರ್ಶಕತೆ ತರುವ ಉದ್ದೇಶದಿಂದ ಸಿ.ಡಿ. ವರದಿ ನೀಡುವುದನ್ನು ‘ಇ–ಕಚೇರಿ’ ವ್ಯವಸ್ಥೆಯ ವ್ಯಾಪ್ತಿಗೆ ತಂದಿದ್ದೇವೆ. ಸೋಮವಾರದಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದರು.

‘ಒಂದೇ ನಿವೇಶನಕ್ಕೆ ಸಂಬಂಧಿಸಿ ಇಬ್ಬರ ಹೆಸರಿನಲ್ಲಿ ಸಿ.ಡಿ.ಆರ್‌ ನೀಡಿದ ದೂರುಗಳು ಬಂದಿವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದೇನೆ. ಇನ್ನು ಮುಂದೆ ಸಿ.ಡಿ.ಆರ್‌ ನಕಲು ಮಾಡುವುದಕ್ಕೆ ಸಾಧ್ಯವಿಲ್ಲ’ ಎಂದರು.

‘ಸಿ.ಡಿ.ಆರ್‌ನಲ್ಲಿ ನಿವೇಶನದ ಛಾಯಾಚಿತ್ರವನ್ನೂ ನಮೂದಿಸಲಿದ್ದೇವೆ. ತಳಮಟ್ಟದ ಅಧಿಕಾರಿಗಳು ಒಮ್ಮೆ ದಾಖಲೆಯನ್ನು ಅಪ್‌ಲೋಡ್‌ ಮಾಡಿದ ಬಳಿಕ, ಅವರ ಹಂತದಲ್ಲಿ ಯಾವುದೇ ತಿದ್ದುಪಡಿ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಅವರು ಸಿ.ಡಿ.ಆರ್‌ ಸಿದ್ಧಪಡಿಸಿದ ಎರಡೇ ದಿನಗಳಲ್ಲಿ ಅದನ್ನು ಅರ್ಜಿದಾರರಿಗೆ ನೀಡಲಿದ್ದೇವೆ. ಈ ವಿಚಾರದಲ್ಲಿ ಅನಗತ್ಯ ವಿಳಂಬಕ್ಕೂ ಅವಕಾಶ ಇರುವುದಿಲ್ಲ’ ಎಂದು ವಿವರಿಸಿದರು.

‘ರೈತರು, ನಿವೇಶನದಾರರು ಸಿ.ಡಿ.ಆರ್‌ ಕಳೆದುಕೊಂಡರೂ ಚಿಂತಿಸಬೇಕಿಲ್ಲ. ಆನ್‌ಲೈನ್‌ ವ್ಯವಸ್ಥೆಯಲ್ಲಿ ಒಮ್ಮೆ ಅಪ್‌ಲೋಡ್‌ ಆದ ಬಳಿಕ ಅದರ ಎಷ್ಟು ಪ್ರತಿಗಳನ್ನು ಬೇಕಾದರೂ ಪಡೆಯಬಹುದು’ ಎಂದು ಅವರು ಸ್ಪಷ್ಟಪಡಿಸಿದರು.

ಕಡತ ಕಂಪ್ಯೂಟರೀಕರಣ: ‘ಕೇಂದ್ರ, ವಿಭಾಗ ಹಾಗೂ ಉಪವಿಭಾಗ ಕಚೇರಿಗಳ ಅಷ್ಟೂ ಕಡತಗಳನ್ನು ಸ್ಕ್ಯಾನ್‌ ಮಾಡಿ ಕಂಪ್ಯೂಟರ್‌ಗಳಲ್ಲಿ ಅಳವಡಿಸಲಾಗುತ್ತಿದೆ. ಹಾಗಾಗಿ ಕಡತ ತಿದ್ದುಪಡಿಗೆ ಹಾಗೂ ಕಣ್ಮರೆಯಾಗುವುದಕ್ಕೆ ಅವಕಾಶವೇ ಇರುವುದಿಲ್ಲ’ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

‘ಕಡತ ಸಂಗ್ರಹಣೆ ಮಾಡುವ ಸಲುವಾಗಿಯೇ ಪ್ರತ್ಯೇಕ ಕೊಠಡಿಯನ್ನು ಸಜ್ಜುಗೊಳಿಸಲಾಗುತ್ತಿದೆ’ ಎಂದರು.

‘ದಶಕಗಳ ಹಿಂದೆ ಅಭಿವೃದ್ಧಿ ಪಡಿಸಿರುವ ಬಡಾವಣೆಗಳ ಹಾಗೂ ವಸತಿಸಮುಚ್ಚಯಗಳಲ್ಲಿರುವ ಸೌಕರ್ಯ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಪ್ರತಿಕ್ರಿಯಿಸಿ (+)