ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಾಮಧೇಯ ದೂರುಗಳನ್ನು ಪರಿಗಣಿಸಲ್ಲ’

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಭರವಸೆ
Last Updated 24 ಸೆಪ್ಟೆಂಬರ್ 2019, 19:25 IST
ಅಕ್ಷರ ಗಾತ್ರ

ಬೆಂಗಳೂರು: ‘ಅನಾಮಧೇಯ ದೂರುಗಳನ್ನು ಆಧರಿಸಿ ಕೆಲವು ನೌಕರರ ಮೇಲೆ ಕ್ರಮ ಕೈಗೊಂಡಿರುವ ಕುರಿತು ಮಾಹಿತಿ ಇದೆ. ಮುಂದೆ, ಇಂತಹ ದೂರುಗಳನ್ನು ಪರಿಗಣಿಸುವುದಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಭರವಸೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಇಲಾಖೆಯ ಲಿಪಿಕ ನೌಕರರ ಮತ್ತು ವಾಹನ ಚಾಲಕರು ಮತ್ತು ಗ್ರೂಪ್‌ ‘ಡಿ’ ನೌಕರರ ಸಂಘದ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ‘ನೌಕರರ ಸಂಘದವರು 18 ಬೇಡಿಕೆಗಳನ್ನು ನೀಡಿದ್ದಾರೆ. ಅವುಗಳನ್ನು ಈಡೇರಿಸಲು ಕ್ರಮ ವಹಿಸಲಾಗುತ್ತದೆ’ ಎಂದು ಹೇಳಿದರು.

ಇಲಾಖೆಯಲ್ಲಿ ಜಾರಿಗೆ ತಂದಿರುವ ‘ಆನ್‌ಲೈನ್‌ ಸೇವೆ’ ಕುರಿತು ಮಾತನಾಡಿದ ಅವರು, ‘ಶಿಕ್ಷಣ ಇಲಾಖೆಯಲ್ಲಿ ಆನ್‌ಲೈನ್‌ ಸೇವೆ ಜಾರಿ ತರುವುದಕ್ಕೆ ‘ಸಕಾಲ’ ಯೋಜನೆಯೇ ಪ್ರೇರಣೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಆನ್‌ಲೈನ್‌ ಮೂಲಕ ಪಾರದರ್ಶಕವಾಗಿ ಮತ್ತು ಕ್ಷಿಪ್ರವಾಗಿ ಕೆಲಸ ಆಗಲಿದೆ’ ಎಂದು ಹೇಳಿದರು.

ಬಲವರ್ಧನೆ ಮುಖ್ಯ:‘ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಸ್ವಾತಂತ್ರ್ಯ ಬಂದಾಗ ಯಾವ ಪೀಠೋಪಕರಣಗಳು, ಎಷ್ಟು ಸಿಬ್ಬಂದಿ ಇದ್ದರೋ ಈಗಲೂ ಅಷ್ಟೇ ಇದ್ದಾರೆ. ಇಂತಹ ಕಚೇರಿಗಳ ಬಲವರ್ಧನೆ ಜೊತೆಗೆ, ಸಿಬ್ಬಂದಿಯ ಬಲವರ್ಧನೆಗೂ ಆದ್ಯತೆ ನೀಡಲಾಗುತ್ತಿದೆ’ ಎಂದು ಕೆಎಸ್‌ಎಸ್‌ಇಬಿ ನಿರ್ದೇಶಕಿ ವಿ. ಸುಮಂಗಲಾ ಹೇಳಿದರು.

‘ಇಲಾಖೆಯಲ್ಲಿ ಹೊಸ ಬದಲಾವಣೆಗಳಾಗುತ್ತಿವೆ. ದಾಖಲೆಗಳ ಕಂಪ್ಯೂಟರೀಕರಣ ಮಾಡಲಾಗುತ್ತಿದೆ. ಶಿಕ್ಷಕರಲ್ಲದೆ, ಎಲ್ಲ ಸಿಬ್ಬಂದಿಗೂ ಹತ್ತು ದಿನಗಳ ತರಬೇತಿ ನೀಡಲಾಗುವುದು’ ಎಂದರು.

ಸಂಘದ ಗೌರವ ಅಧ್ಯಕ್ಷ ಟಿ.ಸಿ. ಚಂದ್ರಶೇಖರ್‌, ‘ಕೆಇಎಸ್‌ ಮಾಡಿದವರು ಕ್ಲರ್ಕ್‌ಗಳನ್ನು ಮಾಡುವ ಕೆಲಸ ಮಾಡುತ್ತಾ ಕಚೇರಿಯೊಳಗೇ ಕುಳಿತಿದ್ದಾರೆ. ಒಮ್ಮೆಯೂ ಶಾಲೆಗೆ ಹೋಗದವರು ಬಿಇಒ, ಡಿಡಿಪಿಐಗಳಾಗಿದ್ದಾರೆ’ ಎಂದು ದೂರಿದರು.

‘ಲಿಪಿಕ ನೌಕರರು ಹಗಲು–ರಾತ್ರಿ ದುಡಿಯಬೇಕು. ಆದರೆ, ಇದಕ್ಕೆ ತಕ್ಕ ಸೌಲಭ್ಯ–ಸಹಕಾರ ದೊರೆಯುತ್ತಿಲ್ಲ. ಕಷ್ಟ ಬೇಕಾದರೆ ಲಿಪಿಕ ನೌಕರರಾಗಿ, ಸಂತೃಪ್ತಿ ಬೇಕಾದರೆ ಶಿಕ್ಷಕರಾಗಿ ಎನ್ನುವಂತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT